Advertisement

ಕೋವಿಡ್ ಪರಿಸ್ಥಿತಿ ಗಮನಿಸಿ ನೂತನ ವರ್ಷಾಚರಣೆಗೆ ಮಾರ್ಗಸೂಚಿ

09:04 PM Dec 24, 2022 | Team Udayavani |

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ಬದಲಾಗುವ ಸ್ಥಿತಿ-ಗತಿಗಳನ್ನು ಗಮನಿಸಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಜಾರಿಗೆ ತರಬೇಕೇ ಬೇಡವೇ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ನೂತನ ವರ್ಷಾಚರಣೆ ಸಂದರ್ಭದಲ್ಲಿ ನಿರ್ಬಂಧ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ .ಯಾವುದೇ ಹೊಸ ನಿಯಮ ರೂಪಿಸಿಲ್ಲ ಎಂದು ಹೇಳಿದರು.
ನಾವು ನಮ್ಮ ಎಚ್ಚರಿಕೆ ವಹಿಸಬೇಕಾಗಿದೆ. ಪ್ರತಿಯೊಬ್ಬರಿಗೂ ಸಹ ಕೋವಿಡ್‌ ಬಗ್ಗೆ 3 ವರ್ಷಗಳ ಅನುಭವಗಳಾಗಿವೆ. ಎಲ್ಲಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಿಗೆ ತಿಳಿವಳಿಕೆಗಳಿವೆ ಎಂದು ತಿಳಿಸಿದರು.

ಕೋವಿಡ್‌ ಬಗ್ಗೆ ಆತಂಕ ಪಡುವ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣ ಆಗಿಲ್ಲ. ಹೀಗಾಗಿ ಎಲ್ಲವನ್ನೂ ಅವಲೋಕಿಸುತ್ತಿದ್ದೇವೆ. ರಾಜ್ಯದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಯಾವ ಸಂದರ್ಭದಲ್ಲಿ ಏನೆಲ್ಲ ನಿರ್ಣಯ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಕೋವಿಡ್‌ ಪರೀಕ್ಷೆ ಹೆಚ್ಚಳ
ಈ ಹಿಂದೆ 2 ರಿಂದ 3 ಸಾವಿರ ಕೋವಿಡ್‌ ಪರೀಕ್ಷೆ ಮಾಡು¤ತಿದ್ದೆವು. ಅದನ್ನು ಸದ್ಯ 4-5 ಸಾವಿರಕ್ಕೆ ಹೆಚ್ಚಿಸಲು ಮುಂದಾಗಿದ್ದೇವೆ. ಸದ್ಯ ನಮ್ಮಲ್ಲಿ ಪಾಸಿಟಿವಿಟಿ ಬಹಳ ಕಡಿಮೆ ಇದೆ. ಹೀಗಾಗಿ ಕಡ್ಡಾಯವಾಗಿ ಟೆಸ್ಟ್‌ ಮಾಡಿಸಲು ಆಗುವುದಿಲ್ಲ. ಆದರೆ, ಸಾರಿ ಹಾಗೂ ಐಎಲ್‌ಐ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ಬೂಸ್ಟರ್‌ ಡೋಸ್‌ ಅನ್ನು ಅಧಿಕ ಮಂದಿ ತೆಗೆದುಕೊಳ್ಳದಿದ್ದ ಹಿನ್ನೆಲೆಯಲ್ಲಿ ನಾವು ಅದನ್ನು ಹೆಚ್ಚು ಪ್ರಮಾಣದಲ್ಲಿ ಶೇಖರಿಸಿಕೊಂಡಿರಲಿಲ್ಲ. ಉಪಯೋಗಿಸದೇ ದಾಸ್ತಾನು ಮಾಡಿಟ್ಟುಕೊಂಡರೆ ಅದು ಬಳಕೆ ಮಾಡಲಾಗದೇ ವೇಸ್ಟ್‌ ಆಗುತ್ತದೆ. ಹೀಗಾಗಿ ನಾವು ಅದಕ್ಕೆ ಹೆಚ್ಚಿನ ಬೇಡಿಕೆಯನ್ನಿಟ್ಟಿರಲಿಲ್ಲ. ನಮ್ಮಲ್ಲಿ ಸದ್ಯ 10 ಲಕ್ಷ ಬೂಸ್ಟರ್‌ ಡೋಸ್‌ ಇದೆ ಎಂದು ಹೇಳಿದರು.

ಹೊಸ ಮಾದರಿಯ ವ್ಯಾಕ್ಸಿನ್‌ಗೆ 2 ದಿನಗಳ ಹಿಂದೆ ಭಾರತ್‌ ಬಯೋಟೆಕ್‌ ಅಪ್ರೂವಲ್‌ ಕೊಟ್ಟಿದ್ದಾರೆ. ಮೂಗಿಗೆ ಒಂದೊಂದು ಡ್ರಾಪ್‌ ಹಾಕಿಕೊಂಡರೆ ಸಾಕಾಗುತ್ತದೆ. ಇದು ಬಹಳ ಪರಿಣಾಮಕಾರಿ ಎಂದು ಹೇಳಲಾಗಿದೆ. ಆದರೆ, ಅದು ಮಾರುಕಟ್ಟೆಗೆ ಹಾಗೂ ರಾಜ್ಯಗಳಿಗೆ ಯಾವಾಗ ಸರಬರಾಜಾಗಲಿದೆ ಎಂಬುದರ ಬಗ್ಗೆ ಇನ್ನೂ ತಿಳಿಸಿಲ್ಲ. ಇದು ಜಾರಿಗೆ ಬಂದರೆ ಬಹಳ ವೇಗವಾಗಿ ವ್ಯಾಕ್ಸಿನೇಷನ್‌ ಪ್ರಕ್ರಿಯೆ ನಡೆಯಲಿದೆ. 12 ವರ್ಷದ ಮೇಲಿನ ಮಕ್ಕಳು, ಹಿರಿಯರು ಸೇರಿ ಇತರರಿಗೂ 1 ಗಂಟೆಗೆ 50 ಮಂದಿಗೆ ನೀಡಬಹುದಾಗಿದೆ. ಪೋಲಿಯೋ ಡ್ರಾಪ್‌ ಹಾಕುವ ಮಾದರಿಯಲ್ಲೇ ಇದನ್ನೂ ಸಹ ಹಾಕಲಾಗುತ್ತದೆ.

Advertisement

ಸಭೆ ಮುಂದೂಡಿಕೆ
ಕೊರೊನಾ ಸಂಬಂಧ ಕಂದಾಯ ಸಚಿವ ಆರ್‌.ಅಶೋಕ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಬೇಕಿದ್ದ ಸಭೆ ಮುಂದೂಡಲಾಗಿತ್ತು. ಸೋಮವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಬೆಳಗ್ಗೆ ಸಭೆ ನಡೆಯಲಿದೆ. ಅದೇ ದಿನ ರಾಜ್ಯ ಸಚಿವ ಸಂಪುಟ ಸಭೆಯೂ ಇದ್ದು ಕೇಂದ್ರ ಸರ್ಕಾರದ ನಿರ್ದೇಶನಗಳ ಬಗ್ಗೆ ಚರ್ಚಿಸಿ ರಾಜ್ಯದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next