Advertisement

ಕೋವಿಡ್‌-19 ಸೋಂಕಿತರ ಮೃತದೇಹ ವಿಲೇವಾರಿಗೆ ಮಾರ್ಗಸೂಚಿ

08:55 AM Jul 25, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೋವಿಡ್ ದಿಂದ ಮರಣ ಹೊಂದುವವರ ಮೃತದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

Advertisement

ಸಂಪರ್ಕ ಅಧಿಕಾರಿ
ಸಂಬಂಧಪಟ್ಟ ಮೃತದೇಹದ ವಿಳಾಸದ ವ್ಯಾಪ್ತಿಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಂಪರ್ಕ ಅಧಿಕಾರಿಗಳಾಗಿ ಸಂಬಂಧಪಟ್ಟ ತಹಶೀಲ್ದಾರರೊಂದಿಗೆ ಸಂವಹನ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಮನ್ವಯ ಸಾಧಿಸಬೇಕು. ಮೃತದೇಹದ ಸಾಗಾಟ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಯವರು (ಸಂಬಂಧ ಪಟ್ಟ ತಾಲೂಕು ವೈದ್ಯಾಧಿಕಾರಿಗಳು) ನಿರ್ವಹಿಸಬೇಕು.

ಚಿತ್ರೀಕರಣ
ಅಂತ್ಯಸಂಸ್ಕಾರದ ವಿಧಿಗಳು ನಡೆಯುವಾಗ ಹಾಜರಾಗಿ ಮಾರ್ಗಸೂಚಿಗಳು ಪಾಲನೆ ಆಗಿರುವುದನ್ನು ಖಚಿತಪಡಿಸಿಕೊಂಡು ಅಂತ್ಯಸಂಸ್ಕಾರದ ವಿಧಿಗಳನ್ನು ಚಿತ್ರೀಕರಿಸಿ ದಾಖಲೆ ಇರಿಸಿಕೊಳ್ಳಬೇಕು. ಜಿಲ್ಲಾ ಮೃತದೇಹ ನಿರ್ವಹಣ ತಂಡದವರಿಗೆ ಮಾಹಿತಿ ನೀಡಿ ಸೂಚನೆ ಪಡೆಯಬೇಕು. ಡೆತ್‌ ಆಡಿಟ್‌ ಸಮಿತಿಗೆ ಸೂಕ್ತ ಮಾಹಿತಿ ನೀಡಬೇಕು.

ಶ್ಮಶಾನದ ವ್ಯವಸ್ಥೆ
ಗ್ರಾಮೀಣ ಪ್ರದೇಶದಲ್ಲಿ ಮೃತದೇಹದ ವಿಳಾಸದ ಗ್ರಾ.ಪಂ. ಆಡಳಿತ ಅಧಿಕಾರಿ/ಪಿಡಿಒ ಮತ್ತು ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಯುಕ್ತರು /ಮುಖ್ಯಾಧಿಕಾರಿಗಳು ಮೃತದೇಹ ವಿಲೇವಾರಿ ಮಾಡುವ ಜವಾಬ್ದಾರಿಯುತ ಅಧಿಕಾರಿಯಾಗಿರುತ್ತಾರೆ. ಮೃತದೇಹದ ವಿಲೇವಾರಿ ಬಗ್ಗೆ ಶ್ಮಶಾನದಲ್ಲಿ ಎಲ್ಲ ರೀತಿಯ ಆವಶ್ಯಕ ಸೌಲಭ್ಯಗಳ ಬಗ್ಗೆ ಜವಾಬ್ದಾರಿಯುತ ಅಧಿಕಾರಿಗಳು ಮುಂಚಿತವಾಗಿ ಪರೀಶಿಲಿಸಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೊರಜಿಲ್ಲೆಯ ಪ್ರಕರಣವಾಗಿದ್ದ ಮೃತದೇಹವಾಗಿದ್ದಲ್ಲಿ ಮೃತದೇಹ ಇರುವ ಸ್ಥಳದ ಅಧಿಕಾರಿಗಳು ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಮೃತರ ಸಂಬಂಧಿಕರೊಂದಿಗೆ ಸಂವಹನ ನಡೆಸಿ ಅಂತ್ಯಸಂಸ್ಕಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಸಮ್ಮತಿಸದಿದ್ದರೆ ಮಾನವ ಸಂಪನ್ಮೂಲ ಹಾಗೂ ಇತರ ವ್ಯವಸ್ಥೆ ಮಾಡಬೇಕು.

ತಹಶೀಲ್ದಾರರ ಕರ್ತವ್ಯ
ಸಂಬಂಧಪಟ್ಟ ತಹಶೀಲ್ದಾರರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕ‌ು ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಪೊಲೀಸ್‌ ಇಲಾಖೆ ಶವಸಂಸ್ಕಾರಕ್ಕೆ ಅಗತ್ಯ ಪೊಲೀಸ್‌ ಬಂದೋಬಸ್ತ್ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Advertisement

ಅಡ್ಡಿಪಡಿಸಿದರೆ ಕಠಿನ ಕ್ರಮ
ಕೋವಿಡ್‌ 19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವು ಸರಕಾರದ ನಿರ್ದೇಶನದಂತೆ ನಡೆಸಲಾಗುತ್ತಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತದೆ. ಜನರು ಯಾವುದೇ ರೀತಿ ಆತಂಕ ಪಡುವ ಆವಶ್ಯಕತೆ ಇಲ್ಲ. ಸಾರ್ವಜನಿಕರು ಶವ ಸಂಸ್ಕಾರಕ್ಕೆ ಯಾವುದೇ ರೀತಿಯ ಪ್ರತಿರೋಧ ಒಡ್ಡಬಾರದಾಗಿ ಎಚ್ಚರಿಕೆ ನೀಡಲಾಗಿದೆ. ಯಾರೇ ಆಗಲಿ ಪ್ರತಿರೋಧ ಒಡ್ಡಿದ್ದರೆ ಕಾನೂನಿನಂತೆ ಕಠಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next