Advertisement

ಕೈದಿಗಳನ್ನು ಮುಖ್ಯವಾಹಿನಿಗೆ ಕರೆ ತರುವ ಕಾರ್ಯ ಶ್ಲಾಘನೀಯ

04:02 PM Sep 22, 2018 | |

ಬೆಳಗಾವಿ: ಕಾರಾಗೃಹದಲ್ಲಿ ನಿವಾಸಿಗಳಿಗೆ ಅಕ್ಷರ ಜ್ಞಾನ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿ ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್‌.ಪಿ. ಜುಟ್ಟನ್ನವರ ಹೇಳಿದರು. ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಸಾಕ್ಷರತಾ ಕಾರ್ಯಕ್ರಮ ಯಶಸ್ವಿಯಾಗಲು ಸಂಸ್ಥೆಯ ಅಧಿಕಾರಿಗಳು, ಶಿಕ್ಷಕರು, ಸ್ವಯಂ ಸೇವಕರು ಹಾಗೂ ಕಾರಾಗೃಹ ನಿವಾಸಿಗಳ ಕಾರ್ಯ ಮುಖ್ಯವಾಗಿದೆ. ವಯಸ್ಕರ ಶಿಕ್ಷಣ ಇಲಾಖೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು. 

ಕಾರಾಗೃಹ ಅಧೀಕ್ಷಕ ಟಿ.ಪಿ. ಶೇಷ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ದೇಶದ ಏಳ್ಗೆಯಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ವದ್ದಾಗಿದೆ. ಪ್ರತಿ ವ್ಯಕ್ತಿ ತನ್ನ ಜೀವಿತಾವಧಿಯ ಸುಮಾರು 20 ವರ್ಷಗಳನ್ನು ಗುರುಗಳೊಂದಿಗೆ ಕಳೆಯುತ್ತಾನೆ. ಇಂದು ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರ ಹಿಂದೆ ಗುರುವಿನ ಮಾರ್ಗದರ್ಶನ ಇದ್ದೇ ಇರುತ್ತದೆ ಎಂದರು. ಸಹಾಯಕ ಅಧೀಕ್ಷಕ ಬಿ.ವಿ. ಮೂಲಿಮನಿ ಮಾತನಾಡಿ, ವಿದ್ಯೆ ಇಲ್ಲದವನ ಬಾಳು ಹದ್ದಿಗಿಂತ ಕಡೆ ಎನ್ನುವ ಗಾದೆ ಮಾತಿದೆ. ಅದಕ್ಕೆ ಕಾರಾಗೃಹ ವಾಸಿಗಳು ಜೈಲಿನಲ್ಲಿ ಆಯೋಜಿಸುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಕಾರಾಗೃಹ ವತಿಯಿಂದ ಸನ್ಮಾನ ಸ್ವೀಕರಿಸಿದ ಶಿಕ್ಷಕ ಶಶಿಕಾಂತ ಯಾದಗುಡೆ ಮಾತನಾಡಿ, ಇದೇ ಮೊದಲ ಬಾರಿ ಶಿಕ್ಷಕರ ದಿನ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದರು. ಕಾರಾಗೃಹ ನಿವಾಸಿಗಳಾದ ಶೈನಾಜ್‌ ಮುಲ್ತಾನಿ, ಮಂಜುಳಾ ಹೊಂಗಲ್‌, ಕಮಲ ಪಾವುಸ್ಕರ, ನಿಂಗವ್ವ ಹುಲನ್ನವರ ಹಾಗೂ ಹಾಸಿಂ ಅಲಿ, ರವಿಚರ್ಚ ಅಭಿಪ್ರಾಯ ಹಂಚಿಕೊಂಡರು. ವಿಜಯ ಮೋರೆ, ಅನುಶ್ರೀ ದೇಶಪಾಂಡೆ, ಬಿ.ಎಸ್‌. ಪಾಟೀಲ ಸೇರಿದಂತೆ ಇತರರು ಇದ್ದರು. ಶಿಕ್ಷಕ ದಂಪತಿಗಳಾದ ಶಶಿಕಾಂತ ಯಾದಗುಡೆ ಹಾಗೂ ಎಸ್‌.ಎಂ. ಕೋಲ್ಕಾರ ಅವರನ್ನು ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು.

ಸಾಕ್ಷರತಾ ಪರೀಕ್ಷೆಯಲ್ಲಿ ಪಾಸಾದ 49 ನಿದಾಸಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸ್ವಯಂ ಸೇವಕರಾದ ರಫೀಕ, ಮಧುರನಾಥ, ಮಂಜುನಾಥ, ಸುರೇಶ, ಪುರುಷೋತ್ತಮ, ಮಹೇಶ ಹಾಗೂ ಸಿದ್ರಾಯ ಅವರಿಗೆ ವಯಸ್ಕರ ಶಿಕ್ಷಣ ಇಲಾಖೆಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಧಾನ ವೀಕ್ಷಕ ಯು.ಡಿ. ಪಾಟೀಲ, ಮೇಳದ, ಪ್ರೇರಕಿ ರೇಷ್ಮಾ ಇದ್ದರು. ಮಂಜುಳಾ ಹೊಂಗಲ ಸ್ವಾಗತಿಸಿದರು. ರವಿ ಚರ್ಚ ವಂದಿಸಿದರು.

Advertisement

ಜೀವನದಲ್ಲಿ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರತೆಯ ಕಾರ್ಯಕ್ರಮಗಳು ನಡೆಯಬೇಕು. ಆರು ತಿಂಗಳು ಕಾಲ ಆಯೋಜಿಸಲಾದ ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲ ಸ್ವಯಂ ಸೇವಕರಿಗೆ ವಿಶೇಷ ಮಾಫಿ ನೀಡಲಾಗುವುದು.
ಟಿ.ಪಿ. ಶೇಷ, ಕಾರಾಗೃಹ ಅಧೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next