ದಾವಣಗೆರೆ: ಸೇವಾ ಕಾಯಮಾತಿ, ಉದ್ಯೋಗ ಭದ್ರತೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಸತಿ ಶಾಲೆಗಳ (ಕ್ರೈಸ್) ಅತಿಥಿ ಶಿಕ್ಷಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು.
ಹಳೆ ಪಿಬಿ ರಸ್ತೆಯ ಉಪ ವಿಭಾಗಾಧಿಕಾರಿ ಕಚೇರಿ ಹೊರ ಭಾಗದಲ್ಲಿ ಮುಷ್ಕರ ನಡೆಸುತ್ತಿರುವ ಅತಿಥಿ ಶಿಕ್ಷಕರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆಯೇ ಇಲ್ಲ. ಹಾಗಾಗಿ ವೃತ್ತಿ ಮತ್ತು ವೈಯಕ್ತಿಕ ಜೀವನ ಅತಂತ್ರವಾಗಿದೆ. ಸೇವಾ ಭದ್ರತೆ ಒದಗಿಸುವ ಮೂಲಕ ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರನ್ನೇ ಕಾಯಂ ಮಾಡುವುದರಿಂದ ಶಾಶ್ವತ ಉದ್ಯೋಗ ದೊರೆತಂತಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಇರುವುದಿಲ್ಲ. ಕಾಯಂ, ಸೇವಾ ಭದ್ರತೆ ಹಾಗೂ ವಿವಿಧ ಸೌಲಭ್ಯಕ್ಕೆ ಒತ್ತಾಯಿಸಿ ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
ಅಣಜಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕನ್ನಡ ಅತಿಥಿ ಶಿಕ್ಷಕ ಬಿ. ನಿಂಗಪ್ಪ , ಆಂಗ್ಲ ಭಾಷಾ ಶಿಕ್ಷಕ ಆರ್. ದೊಡ್ಡಪ್ಪ , ಹಿಂದಿ ಶಿಕ್ಷಕ ಬಿ.ಎಲ್. ಗಂಗಾಧರ್, ಗಣಿತ ಶಿಕ್ಷಕ ಜಿ. ವೀರೇಂದ್ರ ಪಟೇಲ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಆದೇಶದಡಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಆದೇಶವನ್ನು ಉಲ್ಲಂಘಿಸಿ ಕಾಯಂ ಶಿಕ್ಷಕರ ವರ್ಗಾವಣೆ ಮಾಡಿ ಅತಿಥಿ ಶಿಕ್ಷಕರನ್ನು ಸೇವೆಯಿಂದ ವಂಚಿಸಿರುವುದು ಖಂಡನೀಯ. ಶಿಕ್ಷಕರನ್ನು ಅದೇ ಶಾಲೆಯಲ್ಲಿ ಮುಂದುವರೆಸಬೇಕು . ಅತಿಥಿ ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.