ರಾಮದುರ್ಗ: ಸೇವಾ ಭದ್ರತೆ ಹಾಗೂ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಪಟ್ಟಣದ ಐ.ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಅತಿಥಿ ಉಪನ್ಯಾಸಕರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಡಾ| ರಾಜು ಕಂಬಾರ ಮಾತನಾಡಿ, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನವನ್ನು 5000 ಗಳಿಗೆ ಹೆಚ್ಚಿಸಬೇಕು. ಈ ಹಿಂದಿನ ಸರ್ಕಾರಗಳು ಅತಿಥಿ ಉಪನ್ಯಾಸಕರ ಬಗ್ಗೆ ನಿರ್ಲಕ್ಷ ಮಾಡಿದ್ದು, ಕಡಿಮೆ ಸಂಬಳದಲ್ಲಿ ರಾಜ್ಯ 13000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ದುಡಿಸಿಕೊಳ್ಳುತ್ತಿವೆ. ತಂದೆ-ತಾಯಿಗಳ ಪಾಲನೆ ಮಕ್ಕಳ ಶಿಕ್ಷಣ ಮುಂತಾದ ಸಮಸ್ಯೆಗಳ ಸುಳಿಯಲ್ಲಿಯೇ ಅತಿಥಿ ಉಪನ್ಯಾಸಕರು ಸಿಕ್ಕು ಹೊರಬರಲಾರದೆ ಪರದಾಡುವಂತಾಗಿದೆ ಎಂದರು.
ಇಂದಿನ ತುಟ್ಟಿ ಕಾಲದಲ್ಲಿ ಯಾವುದಕ್ಕೂ ಈಗಿರುವ 11000 ಮತ್ತು 13000 ಸಂಬಳ ಸಾಕಾಗುತ್ತಿಲ್ಲ. ಹಿಂದಿನ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ 5000 ರೂ ವೇತನ ಹೆಚ್ಚಿಸುವದಾಗಿ ಹೇಳಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ವೇತನವನ್ನು ಹೆಚ್ಚಿಸದೆ ಕಳೆದ ವರ್ಷ ನಿಗದಿಪಡಿಸಿದ ವೇತನವನ್ನು ಕೇವಲ ಎರಡು ತಿಂಗಳಿಗೆ ಬಿಡುಗಡೆಗೊಳಿಸಿದೆ ಎಂದು ಆರೋಪಿಸಿದರು.
ಸರ್ಕಾರ ತುರ್ತಾಗಿ ಅತಿಥಿ ಉಪನ್ಯಾಸಕರಗೆ 5000 ವೇತನವನ್ನು ಪ್ರಸಕ್ತ ಸಾಲಿನ ಆರಂಭದಿಂದಲೂ ಹೆಚ್ಚಿಸಿ ವೇತನ ಬಿಡುಗಡೆಗೊಳಿಸಬೇಕು ಹಾಗೂ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಅತಿಥಿ ಉಪನ್ಯಾಸಕರ ರಾಮದುರ್ಗ ತಾಲೂಕಾಧ್ಯಕ್ಷ ಆರ್.ಬಿ. ಮಡಿವಾಳರ, ವಿ.ಎಸ್. ಲಕ್ಕನಗೌಡ್ರ, ಡಾ| ಎಂ.ಎಸ್. ಮುನವಳ್ಳಿ, ಎನ್.ಬಿ. ಕೊಪ್ಪದ. ಆರ್.ಡಿ. ಬಡಿಗೇರ ಡಾ| ಪಿ.ಎಂ. ಸಿಂಗಾರಗೊಪ್ಪ. ಎಸ್.ಬಿ. ಜಾಧವ, ಎಚ್.ಎಫ್. ಕೊಳ್ಳಾರ, ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.