Advertisement

“ಅತಿಥಿ’ಉಪನ್ಯಾಸಕರಿಗೆ “ಆಹ್ವಾನ’ನೀಡದ ಸರಕಾರ !

12:28 AM Jan 21, 2021 | Team Udayavani |

ಮಹಾನಗರ: ಕೋವಿಡ್ ಭಯ ದೂರವಾಗಿ ವಿದ್ಯಾರ್ಥಿಗಳು ತರಗತಿಗೆ ಬರಲು ಆರಂಭಿಸಿದರೆ, ಇತ್ತ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಬಾರದೇ ತರಗತಿ ನಡೆಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಲಾಕ್‌ಡೌನ್‌ ಮುಗಿದು ತರಗತಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರೂ, ಪಾಠ ಹೇಳಿಕೊಡಬೇಕಾದ ಅತಿಥಿ ಉಪನ್ಯಾಸಕರು ಮಾತ್ರ ಇನ್ನೂ ಮನೆಯಲ್ಲೇ ಕುಳಿತಿದ್ದಾರೆ!

Advertisement

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ವ್ಯಾಪ್ತಿಯ 35 ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 1,500 ಮಂದಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಆರಂಭವಾದ ಕಾಲದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿರಲಿಲ್ಲ. ಆಫ್‌ಲೈನ್‌ ತರಗತಿ ಆರಂಭದ ಬಳಿಕ ಅತಿಥಿ ಉಪನ್ಯಾಸಕರ ನೇಮಕದ ಬಗ್ಗೆ ವಿಚಾರ ಚರ್ಚೆಯಲ್ಲಿತ್ತು. ಆದರೆ ಈಗ ಕಾಲೇಜು ಆರಂಭವಾಗಿ 5 ದಿನಗಳು ಕಳೆದರೂ ಇನ್ನೂ ಕೂಡ ಈ ವಿಚಾರ ಇತ್ಯರ್ಥಕ್ಕೆ ಬರಲಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರನ್ನು ಕೇಳುವವರೇ ಇಲ್ಲ ಎಂಬಂತಾಗಿದೆ.

ಆನ್‌ಲೈನ್‌ನಲ್ಲಿ ನಡೆಯುತ್ತಿದ್ದ ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ತರಗತಿ ಗಳನ್ನು ಪೂರ್ಣಪ್ರಮಾಣದಲ್ಲಿ ಜ. 15ರಿಂದ ಕಾಲೇಜುಗಳಲ್ಲಿಯೇ ಆರಂಭಿಸುವಂತೆ ಸರಕಾರ ಆದೇಶಿಸಿತ್ತು. ಸರಾಸರಿ ಶೇ. 60ಕ್ಕೂ ಅಧಿಕ ಪ್ರಮಾಣದಲ್ಲಿ ವಿದ್ಯಾರ್ಥಿಗಳು ತರಗತಿಗೆ ಆಗಮಿಸುತ್ತಿದ್ದಾರೆ. ಮಾ. 20ರಿಂದ ಸೆಮಿಸ್ಟರ್‌ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಹು ಆಸಕ್ತಿಯಿಂದ ತರಗತಿ ಯತ್ತ ಹೆಜ್ಜೆ ಹಾಕಿದ್ದಾರೆ. ಆದರೆ ತರಗತಿಗೆ ವಿದ್ಯಾರ್ಥಿಗಳು ಬಂದರೂ ಪಾಠ ಮಾಡುವ ಅತಿಥಿ ಉಪನ್ಯಾಸಕರನ್ನು ಸರಕಾರ ಕಳುಹಿಸದೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಒಟ್ಟು ಶೇ. 70ರಷ್ಟು ತರಗತಿ ನಡೆದಿದ್ದರೂ ಸರಕಾರಿ ಕಾಲೇಜುಗಳಲ್ಲಿ ಮಾತ್ರ ಖಾಯಂ ಶಿಕ್ಷಕರು ಬೋಧಿಸಿದ ಪಾಠ ಮಾತ್ರ ಶೇ.70ರಷ್ಟು ಆಗಿದೆ. ಅತಿಥಿ ಉಪನ್ಯಾಸಕರು ಮಾಡುವ ತರಗತಿಗಳು ಮಾತ್ರ ಇನ್ನೂ ಆರಂಭವೇ ಆಗಿಲ್ಲ.

ಅತಿಥಿ ಶಿಕ್ಷಕರನ್ನು ಕೇಳುವವರಿಲ್ಲ! :

Advertisement

ರಾಜ್ಯ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜತೆ ಕಾರ್ಯದರ್ಶಿ ಚಿತ್ರಲೇಖಾ ಕೆ ಅವರು “ಸುದಿನ’ ಜತೆಗೆ ಮಾತನಾಡಿ, “ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪಾಠ ಮಾಡುತ್ತಿರುವ ಅತಿಥಿ ಶಿಕ್ಷಕರನ್ನು ಪ್ರಸ್ತುತ ಕೇಳುವವರೇ ಇಲ್ಲ. ಲಾಕ್‌ಡೌನ್‌ ಆರಂಭದಿಂದ‌ಲೂ ಸರಕಾರ ನಮ್ಮ ಬಗ್ಗೆ ಗಮನವೇ ಹರಿಸಿಲ್ಲ’ ಎಂದರು.

ಇದೀಗ ತರಗತಿ ಆರಂಭವಾಗಿದ್ದರೂ ಅತಿಥಿ ಉಪನ್ಯಾಸಕರಿಗೆ ಪಾಠ ಮಾಡಲು ಸರಕಾರ ಅವಕಾಶ ಕಲ್ಪಿಸಿಲ್ಲ. ಈಗಾಗಲೇ ಖಾಸಗಿ ಕಾಲೇಜಿನಲ್ಲಿ ಶೇ.80ರಷ್ಟು ಪಠ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಆದರೆ ಸರಕಾರಿ ಕಾಲೇಜಿನಲ್ಲಿ ಹಲವು ಪಾಠಗಳು ಇನ್ನೂ ಕೂಡ ಆರಂಭವೇ ಆಗಿಲ್ಲ. ಕೆಲವೇ ದಿನಗಳಲ್ಲಿಯೇ ಇದನ್ನು ಮುಗಿಸಬೇಕಾದ ಅನಿವಾರ್ಯವೂ ಇದೆ. ಒಂದೆರಡು ದಿನದಲ್ಲಿ ಅತಿಥಿ ಉಪನ್ಯಾಸಕರನ್ನು ಕರೆಯುವ ಸಾಧ್ಯತೆಯಿದೆ.  -ಧೀರಜ್‌ ಕುಮಾರ್‌, ಅಧ್ಯಕ್ಷರು, ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ-ದ.ಕ.

Advertisement

Udayavani is now on Telegram. Click here to join our channel and stay updated with the latest news.

Next