Advertisement

ಕೋವಿಡ್ ಎಫೆಕ್ಟ್ : ಹಣ್ಣು-ಕಾಳುಕಡಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು

06:02 PM May 08, 2021 | Team Udayavani |

ವರದಿ : ವೀರೇಶ ಮಡ್ಲೂರ

Advertisement

ಹಾವೇರಿ: ಕಳೆದ ಎರಡು ತಿಂಗಳಿನಿಂದ ವೇತನವಿಲ್ಲದೇ ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಬೇರೆ ಕೆಲಸ ಗೊತ್ತಿಲ್ಲದಿದ್ದರೂ ಜೀವನ ನಿರ್ವಹಣೆಗಾಗಿ ಹೊಸ ಕೆಲಸಕ್ಕೆ ಕೈ ಹಾಕಿ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡುವಂತಹ ಸ್ಥಿತಿ ಎದುರಾಗಿದೆ.

ನಮ್ಮನ್ನು ಕಾಯಂಗೊಳಿಸುವಂತೆ ಹೋರಾಟ ನಡೆಸಿದರೂ ಸರ್ಕಾರ ಪರಿಗಣಿಸಿಲ್ಲ. ಇಂತಹ ಸಂಕಷ್ಟದ ಕಾಲದಲ್ಲಿ ಸರ್ಕಾರ ನಮಗೆ ವೇತನ ನೀಡುವುದು ಸಾಧ್ಯವಿಲ್ಲ ಎಂಬ ಅರಿವಾಗಿದೆ. ಹೀಗಾಗಿ, ಹಣ್ಣು, ತರಕಾರಿ ಮಾರಾಟ ಹಾಗೂ ನರೇಗಾ ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊರೊನಾ ಸಂಕಷ್ಟ ಎದುರಾದ ದಿನಗಳಿಂದ ಅತಿಥಿ ಉಪನ್ಯಾಸಕರು ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಸದ್ಯ ಕಳೆದ ಎರಡು ತಿಂಗಳಿನಿಂದ ಕೆಲಸ, ವೇತನವಿಲ್ಲದೇ ಕುಟುಂಬ ನಿರ್ವಹಣೆ ಮಾಡುವುದೇ ಸವಾಲಾಗಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅತಿಥಿ ಉಪನ್ಯಾಸಕರನ್ನು ಕೊರೊನಾ ಬೀದಿಗೆ ತಳ್ಳಿದೆ. ಸರ್ಕಾರ ಫೆಬ್ರವರಿ ವರೆಗೆ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಂಡು ಬಳಿಕ ಅವರನ್ನು ಕೈಬಿಟ್ಟಿದೆ.

ಕಳೆದ ವರ್ಷ ಕೂಡ ವರ್ಷ ಪೂರ್ತಿ ಇವರ ಸೇವೆ ಪಡೆಯದೇ ಮೂರು ತಿಂಗಳ ವೇತನ ನೀಡಲಾಗಿತ್ತು. ನಂತರ ಹೋರಾಟ ಮಾಡಿದ ನಂತರ ಶೇ.50ರಷ್ಟು ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿಕೊಂಡಿತ್ತು. ಜನವರಿ ಮತ್ತು ಫೆಬ್ರವರಿ ಎರಡು ತಿಂಗಳು ಬೋಧನೆ ಮಾಡಿದ ಇವರೀಗ ಮತ್ತೆ ನಿರುದ್ಯೋಗಿಗಳಾಗಿದ್ದಾರೆ. ಹತ್ತಾರು ವರ್ಷ ಕಾಲೇಜುಗಳಲ್ಲಿ ಬೋಧನೆ ಮಾಡಿದವರು ಈಗ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

Advertisement

ಬೋಧನೆಗೂ ಸೈ-ವ್ಯಾಪಾರಕ್ಕೂ ಜೈ: ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಾ‌ಣಾ ಸಮಿತಿ ರಾಜ್ಯ ಕಾರ್ಯಾಧ್ಯಕÒ‌ರೂ ಆಗಿರುವ ಹಾನಗಲ್ಲ ತಾಲೂಕಿನ ಡೊಮ್ಮನಾಳ ಗ್ರಾಮದ ಅತಿಥಿ ಉಪನ್ಯಾಸಕ ಸಿ.ಕೆ.ಪಾಟೀಲ ಅವರು ಸಂಕಷ್ಟಕ್ಕೆ ಎದೆಗುಂದದೇ ಹಾವೇರಿಯಲ್ಲಿ ಮಾವಿನಹಣ್ಣು ಮಾರಾಟ ಮಾಡಿ ಜೀವನ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸ್ವತಃ ಇವರು ಸುತ್ತಮುತ್ತಲಿನ ಊರುಗಳಿಗೆ ತೆರಳಿ ರೈತರಿಂದ ನೇರವಾಗಿ ಮಾವಿನ ಕಾಯಿ ಖರೀದಿಸಿ ಅದನ್ನು ನೈಸರ್ಗಿಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ. ಪರಿಚಿತರು ಯಾರಾದರೂ ಕರೆ ಮಾಡಿದರೆ ಮನೆಗೇ ಹೋಗಿ ಹಣ್ಣು ಕೊಟ್ಟು ಬರುತ್ತಿದ್ದಾರೆ. ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ. ಯಾವ ಕಾಯಕವೂ ಕನಿಷ್ಟವಲ್ಲ ಎಂಬುದನ್ನು ತಿಳಿದುಕೊಂಡು ಹಣ್ಣಿನ ವ್ಯಾಪಾರ ಮಾಡಿ ಹೇಗೋ ಜೀವನ ಸಾಗಿಸುತ್ತಿದ್ದೇನೆ ಎಂದು ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ್ಯ‌ ಸಿ.ಕೆ.ಪಾಟೀಲ “ಉದಯವಾಣಿ’ ಎದುರು ತಮ್ಮ ನೋವು ತೋಡಿಕೊಂಡರು.

ಹಾನಗಲ್ಲ ತಾಲೂಕು ಮಲಗುಂದ ಗ್ರಾಮದ ಮತ್ತೋರ್ವ ಅತಿಥಿ ಉಪನ್ಯಾಸಕ ವಿನಾಯಕ ಸಾತೇನ ಹಳ್ಳಿ ಎಂಬವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದಾರೆ. ಸವಣೂರಿನ ಫಕ್ಕೀರಯ್ಯ ಹಿರೇಮಠ ಕಾಳುಕಡಿ ವ್ಯಾಪಾರ ಆರಂಭಿಸಿದ್ದಾರೆ. ಇನ್ನು ಕೆಲವರು ಈ ನೌಕರಿಯೇ ಸಾಕು ಎಂದು ಕೃಷಿಯತ್ತ ಹೆಜ್ಜೆ ಹಾಕಿದ್ದು, ಸಂಕಷ್ಟಕ್ಕೆ ತುತ್ತಾಗಿರುವ ಬದುಕನ್ನು ಶ್ರಮಪಟ್ಟು ದುಡಿಯುವ ಮೂಲಕ ಮತ್ತೆ ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ.

ಕೊರೊನಾಗೆ 6 ಅತಿಥಿ ಉಪನ್ಯಾಸಕರು ಬಲಿ: ಸದ್ಯ ಕೊರೊನಾ ಹೋಗಿ ಕಾಲೇಜು ಆರಂಭವಾಗುವುದು ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ. ಅದಾದ ಬಳಿಕ ನಮ್ಮನ್ನು ಯಾವಾಗ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದೂ ಗೊತ್ತಿಲ್ಲ. ರಾಜ್ಯದಲ್ಲಿ ಈಗಾಗಲೇ 6 ಜನ ಅತಿಥಿ ಉಪನ್ಯಾಸಕರು ಕೊರೊನಾದಿಂದ ಮೃತಪಟ್ಟಿ ದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಲಭಿಸಿಲ್ಲ. ಈ ಹಿಂದೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯ ಭರವಸೆ ನೀಡಿದ್ದವರೇ ಈಗ ಸರ್ಕಾರ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ನಮ್ಮ ನೋವನ್ನು ಆಲಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next