Advertisement

ಸೇವಾ ಭದ್ರತೆ ಕಲ್ಪಿಸಲು ಅತಿಥಿ ಉಪನ್ಯಾಸಕರ ಆಗ್ರಹ

12:14 PM Sep 28, 2018 | Team Udayavani |

ಮಸ್ಕಿ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್‌ ಬಲರಾಮ ಕಟ್ಟಿಮನಿ ಮೂಲಕ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. 

Advertisement

ರಾಜ್ಯದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ 13,500 ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆದು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ತಳಮಳಿಸುತ್ತಿದ್ದಾರೆ. ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ 2000ನೇ ಇಸ್ವಿಯಿಂದ ಅತ್ಯಲ್ಪ ವೇತನ ನೀಡಿ, ಅಗ್ಗದ ಜೀತದ ಕೂಲಿಗಳಂತೆ ನಮ್ಮನ್ನು ದುಡಿಸಿಕೊಂಡು ಬಂದಿದೆ. ಪ್ರತಿ ವರ್ಷ 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಾವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡರು ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವದಡಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌, ಎಸ್‌.ಎ. ಬೊಡ್ಡೆ ಅವರ ದ್ವಿಸದಸ್ಯ ಪೀಠ ತಾತ್ಕಾಲಿಕ ನೌಕರರೂ ಸಹ ಕಾಯಂ ನೇಮಕಾತಿ ಮೇಲೆ ಕೆಲಸ ಮಾಡುವ ಪ್ರತಿ ನೌಕರ ಕೆಲಸಕ್ಕೆ ಸಮಾನ ವೇತನ ಪಡೆದುಕೊಳ್ಳಲು ಅರ್ಹರು ಎಂದು ಹೇಳಿದೆ. ಆದರೆ ಸರಕಾರ ಈ ಆದೇಶವನ್ನು ಗಾಳಿಗೆ ತೂರಿದೆ ಎಂದು ದೂರಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ವ್ಯಾಪ್ತಿಗೆ ತಂದು ಕಾಯಂಗೊಳಿಸಬೇಕು. ಈ ಹಿಂದಿನ ಹಾಗೂ ಪ್ರಸಕ್ತ ಸಾಲಿನಲ್ಲಿ ಬಾಕಿ ಇರುವ 3 ತಿಂಗಳ ವೇತನ ಹಾಗೂ 12 ತಿಂಗಳ ಸಹಿತ ವೇತನ ನೀಡಬೇಕು. ಅತಿಥಿ ಉಪನ್ಯಾಸಕರಿಗೂ ಸರಕಾರಿ ರಜೆ ಸೌಲಭ್ಯ ವಿಸ್ತರಿಸಬೇಕು. ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮಾದರಿಯಲ್ಲಿರುವ ವೇತನವನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸಲು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಪ್ರಭುದೇವ ಸಾಲಿಮಠ, ಉಪಾಧ್ಯಕ್ಷ ರಾಮಣ್ಣ ನಾಯಕ, ಖಜಾಂಚಿ ರಾಮಣ್ಣ ಹಂಪರಗುಂದಿ, ಕಾರ್ಯದರ್ಶಿ ಸುರೇಶ ಬಳಗಾನೂರು, ಸದಸ್ಯರಾದ ಈರಣ್ಣಗೌಡ, ಚನ್ನಬಸವ ಎಸ್‌. ಪರಪ್ಪ, ರಾಮಪ್ರಸಾದ ಚಿಗರಿ, ಚಿದಾನಂದ, ಅಯ್ಯಪ್ಪ, ವೀರೇಶ ಎಂ., ಪ್ರಶಾಂತ, ಡಾ| ವಿರುಪನಗೌಡ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next