Advertisement
ಈ ಕುರಿತು ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಶಿಕ್ಷೆಗೆ ಗುರಿಯಾಗಿದ ದಿನದಿಂದಲೂ “ಎ ದರ್ಜೆ’ ಸೌಲಭ್ಯ ನೀಡಲಾಗಿದ್ದು, ಅಡುಗೆ ಮಾಡಲು ಪ್ರತ್ಯೇಕ ಕೊಠಡಿ ಸೇರಿ ಐದು ಕೊಠಡಿಯನ್ನು ಒದಗಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
Related Articles
Advertisement
ಶಶಿಕಲಾ ಇದ್ದ ಕೊಠಡಿಯ ಬಾಗಿಲಿಗೆ ಪರದೆ ಹಾಕಲಾಗಿತ್ತು. ಈ ಬಗ್ಗೆ ಜೈಲು ಅಧಿಕಾರಿಗಳನ್ನು ವಿಚಾರಣೆ ನಡೆಸಿದಾಗ, ಬೆಕ್ಕುಗಳು ಹೆಚ್ಚಾಗಿರುವ ಕಾರಣ ಪರದೆ ಹಾಕಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದರು. ಭದ್ರತೆಯ ಕಾರಣಕ್ಕೆ ಶಶಿಕಲಾ ಇದ್ದ ಕೋಣೆಯ ಅಕ್ಕಪಕ್ಕದ ಕೋಣೆಗಳಲ್ಲಿ ಯಾವುದೇ ಕೈದಿಗಳನ್ನು ಇರಿಸಿರಲಿಲ್ಲ. ಈ ಕೊಠಡಿಗಳಲ್ಲಿ ಶಶಿಕಲಾ ಮತ್ತು ಇಳವರಸಿ ಬಟ್ಟೆಗಳನ್ನು ಇಡಲು ಬಳಸಿಕೊಂಡಿದ್ದರು.
ಶಶಿಕಲಾ ಭೇಟಿಗೆ ಬರುವ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಮಾತನಾಡಲು ಒಂದು ಕೊಠಡಿ ಬಳಸಲಾಗುತ್ತಿತ್ತು. ಅಲ್ಲದೆ, ಇವರ ಕೊಠಡಿಯಲ್ಲಿ ಮಂಚ, ಹೊದಿಕೆ ಹಾಗೂ ಎಲ್‌ಇಡಿ ಟಿ.ವಿ ಇಡಲಾಗಿತ್ತು ಎಂಬುದು ವರದಿಯಲ್ಲಿದೆ. ನ್ಯಾಯಾಲಯದ ಸೂಚನೆ ಇಲ್ಲದಿದ್ದರೂ ಶಶಿಕಲಾ ಮತ್ತು ಇಳವರಸಿಗೆ “ಎ ದರ್ಜೆ’ ಸೌಲಭ್ಯ ನೀಡಲಾಗಿತ್ತು. ನ್ಯಾಯಾಲಯ ಸ್ಪಷ್ಟವಾಗಿ ಶಶಿಕಲಾ ಪ್ರಕರಣದಲ್ಲಿ “ಎ ದರ್ಜೆ’ ಸೌಲಭ್ಯ ನೀಡುಂತಿಲ್ಲ ಎಂದು ಹೇಳಿದ್ದರೂ ಸೌಲಭ್ಯ ಹಿಂಪಡೆದಿರಲಿಲ್ಲ. ಇದು ಜೈಲು ಅಧಿಕಾರಿಗಳ ಕರ್ತವ್ಯ ಲೋಪ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕರೀಂ ಲಾಲಾ ತೆಲಗಿಗೂ ವಿಶೇಷ ಆತಿಥ್ಯ: ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲೇ ಮೃತಪಟ್ಟ ಕರೀಂ ಲಾಲಾ ತೆಲಗಿಗೆ ನೀಡಲಾಗಿದ್ದ ಸೌಲಭ್ಯದ ವಿಚಾರದಲ್ಲೂ ಕಾನೂನು ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ತೆಲಗಿ ಇದ್ದ ಕೊಠಡಿ ಪರಿಶೀಲಿಸಿದಾಗ ಕೊಠಡಿಯಲ್ಲಿ ಮಂಚ, ಹೊದಿಕೆ, ಕುರ್ಚಿ ಹಾಗೂ ಟಿ.ವಿ ವ್ಯವಸ್ಥೆ ಕಲ್ಪಿಸಿದ್ದು ಬೆಳಕಿಗೆ ಬಂದಿದೆ. ಸಹಾಯಕ್ಕಾಗಿ ನಾಲ್ವರು ವಿಚಾರಣಾಧೀನ ಕೈದಿಗಳನ್ನು ನೀಡಲಾಗಿತ್ತು ಎಂದು ಸಮಿತಿ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಶಶಿಕಲಾ ಸೇರಿ ಹಲವರಿಂದ ಹಣ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಅತಿಥ್ಯ ನೀಡಲಾಗುತ್ತಿದೆ ಎಂದು ಅಂದಿನ ಕಾರಾಗೃಹ ಇಲಾಖೆ ಡಿಐಜಿಯಾಗಿದ್ದ ಡಿ.ರೂಪಾ ಅವರು ವರದಿ ನೀಡಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ಅಕ್ರಮದ ಬಗ್ಗೆ ನಾನು ಮೊದಲೇ ತನಿಖೆ ನಡೆಸಿ ವರದಿ ನೀಡಿದ್ದೆ. ಈ ಸಂಬಂಧ ಸರ್ಕಾರ ರಚಿಸಿದ್ದ ಸಮಿತಿ ತನಿಖೆ ನಡೆಸಿ ನೀಡಿರುವ ವರದಿ ತೃಪ್ತಿಕರವಾಗಿದೆ. ನಾನು ನೀಡಿದ್ದ ವರದಿಗಿಂತ ಸಮಗ್ರವಾಗಿ ತನಿಖೆ ಮಾಡಿ ಹಲವಾರು ಸಂಗತಿಗಳನ್ನು ಬಯಲಿಗೆಳೆಯಲಾಗಿದೆ.-ಡಿ.ರೂಪಾ, ಡಿಐಜಿ