Advertisement

ಸದ್ಯಕ್ಕೆ,ಯಾರೂ ಬರೋದು ಬೇಡ…

07:43 PM Sep 16, 2020 | Suhan S |

ಯಾರು ನಮ್ಮವರು? ನಮ್ಮವರು ಎಂದರೇನು? ಹಾಗೊಂದು “ನಮ್ಮ’ ಎಂಬ ಕಾನ್ಸೆಪ್ಟನ್ನೇ ನುಚ್ಚುನೂರು ಮಾಡಿಬಿಟ್ಟಿತಲ್ಲ ಈ ಕೋವಿಡ್…

Advertisement

ಜನನಿಬಿಡ ಮಾಲ್‌ನಲ್ಲಿ ಬೇಕಾದ್ದನ್ನೆಲ್ಲ ಬುಟ್ಟಿಗೆ ತುಂಬುತ್ತಿದ್ದ ಹುಡುಗಿಯರನ್ನು ಮೊಣಕೈ ತಾಗಿಸಿ ವಿಕೃತ ಖುಷಿ ಅನುಭವಿಸುತ್ತಿದ್ದ ಗಂಡು, ಈಗಅವಳ ಹತ್ತಿರವೂ ಸುಳಿಯುತ್ತಿಲ್ಲ. ಸಾಮಾನ್ಯವಾಗಿ ಇದ್ದೇ ಇರುತ್ತಿದ್ದನವನಲ್ಲಿಗೆ ಹೋಗುವ ಹೊತ್ತಿನಲ್ಲಿ. ಕೆಕ್ಕರಿಸಿ ನೋಡುತ್ತಿದ್ದಕಣ್ಣಿನಲ್ಲೀಗ ಲಾಲಸೆಯಪಸೆಯೂ ಕಾಣುತ್ತಿಲ್ಲ. ದಿಟ್ಟಿ ಸಿ ಇತ್ತ ಕಡೆತಿರುಗುವುದೂ ಇಲ್ಲ. ಅಕಸ್ಮಾತ್‌ ಎದುರಾದರೂ, ಸರಕ್ಕನೆ ದೂರ ಸರಿವವನಕಣ್ಣಲ್ಲಿಕಾಣುವುದು ಕೇವಲ ಆತಂಕ… ಸಾವಿನ ಭಯ. ಇತ್ತ ಮಾಮೂಲಿ ಅಂಗಡಿಯವನು ತಲೆಯಲ್ಲಾಡಿಸಿ, ಗೂಗಲ್‌ ಪೇ ಎನ್ನುತ್ತಾನೆ. ಅವನದೀಗ ನೋಕ್ಯಾಶ್‌ ಮಂತ್ರ…ನನಗೂ ಅವನುಕೊಡಬಹುದಾದ ಚಿಲ್ಲರೆಯಲ್ಲಿ ಸಾವಿನ ವಾಸನೆ. ಹೊರಗೆ ಅಡಿಯಿಟ್ಟರೆ ಸೂತಕದ ಮನೆಯಂತೆಕಾಣುವ ಪ್ರಪಂಚ. ಹೆಜ್ಜೆ ಒಳಗೆಳೆದುಕೊಂಡರೆ ಅಲ್ಲೂ ಹಾಗೇ, ವ್ಯತ್ಯಾಸವೇನಿಲ್ಲ.. ಪಾರಾಗಲು ಓಡಹೊರಟ ಕಾಲುಗಳಿಗೀಗ ಬರೀ ತಬ್ಬಿಬ್ಬು… ಧರೆಯೆ ಹೊತ್ತಿ ಉರಿಯುವಾಗ ಬದುಕಲೆಲ್ಲಿ ಓಡುವುದು? ಯಾವ ದಿಕ್ಕಿಗೆ? ಎತ್ತ ತಿರುಗಿದರೂ ಸಾವಿನ ಭಯ, ಅಪನಂಬಿಕೆ..ನನ್ನಲ್ಲೂ.. ಅವನಲ್ಲೂ.. ಅವಳಲ್ಲೂ.. ಇವರೆಲ್ಲರಲ್ಲೂ… ಲಾಕ್‌ ಡೌನ್‌ ರದ್ದಾಗಿ ತಿಂಗಳು ಕಳೆದಿದೆ. ಸೋಂಕು ಹರಡುವುದು ಕಡಿಮೆ ಆಗಿದೆ ಎಂದು ನಾಲ್ಕು ದಿನಕ್ಕೊಮ್ಮೆ ಸುದ್ದಿಯೂ ಬರುತ್ತಿದೆ. ಆದರೂ, ದಶದಿಕ್ಕುಗಳಲ್ಲೂ ಭಯದ್ದೇ ರಾಜ್ಯಭಾರ.. ರಿಮೋಟು ಅದುಮಿದರೆ ಬೀದಿಬೀದಿಯಲ್ಲೂ ಮೈಕು ಹಿಡಿದವರು, ಮೈಕಿನ ಮುಂದೆ ನಿಂತವರು.. ಇಬ್ಬರಿಗೂ ಭಯ.. ವಾರ್ತೆ ಹೇಳಲುಕೂತವನು ಪದಗಳನ್ನು ಎಸೆಯುತ್ತಲೇ ಇದ್ದಾನೆ.. ಅವನ ದನಿಯಲ್ಲೂ ನಡುಕ? ರಪ್ಪನೇ ಟಿ ವಿ ಆರಿಸಬೇಕೆನಿಸುತ್ತದೆ…

ವಾಕಿಂಗಿಗೆ ಹೋಗುವಾಗ ಪರಿಚಿತರು ಸಿಗದಿರಲಿ ದೇವರೇ. ಸಿಕ್ಕರೆ ಮಾತಿಗೆ ನಿಂತಾರು.. ಹತ್ತಿರ ಬಂದಾರು. ಐದೂವರೆ ಅಡಿ ಎತ್ತರದ ದೇಹದ ವೈಶಿಷ್ಟ್ಯಗಳನ್ನು ಮಾಸ್ಕ್ ಮುಚ್ಚೀತೇ? ಅವರಿಗೆ ಗುರುತು ಸಿಗದಿದ್ದೀತೇ… ಎದುರು ಹೋಗುತ್ತಿರುವವರು ಕೊನೆಯ ಮನೆಯವರಲ್ಲವಾ? ಅವರ ಮನೆಯಲ್ಲಿ ಯಾರಿಗಾದರೂ ಜ್ವರ ಬಂದಿದ್ದರೆ? ಅವರಿಂದ ಈಗ ಹೇಗೆ ತಪ್ಪಿಸಿಕೊಳ್ಳುವುದು? ಹೆಜ್ಜೆಚುರುಕುಗೊಳಿಸುವುದಾ, ನಿಧಾನಿಸುವುದಾ?ಅರೆರೆ, ಅವರು ಅದೇಕೆ ಅತ್ತಕಡೆ ಹೊರಟದ್ದು? ನನ್ನ ನೋಡೇ ದಿಕ್ಕು ಬದಲಿಸಿದರಾ? ಹೌದು .. ನನ್ನನ್ನು ನೋಡಿಯೇ ಅವರು ದಿಕ್ಕು ಬದಲಿಸಿದ್ದು.. ಈಗ ಸಮಾಧಾನದಲ್ಲೂ ಪೆಚ್ಚಾದ ಭಾವ. ಯಾಕೋ ಚುಳ್‌ ಎನ್ನಿಸುತ್ತಿದೆ ಮನಸ್ಸೀಗೀಗ… ಮತ್ತೆ ಸಿಗುತ್ತಾರೋ ಇಲ್ಲವೋ.. ನಾಲ್ಕುಮಾತಾಡಬಹು ದಿತ್ತು ಈಗ ಸಿಕ್ಕಿದ್ದರೆ..ಅಷ್ಟರೊಳಗೆ..ಯಾರ ಸರದಿ ಯಾವಾಗಲೋ ಯಾರಿಗೆ ಗೊತ್ತು? …

ಸಾವಿನ ನೆರಳು… ಅಳಲು ಜೊತೆಗ್ಯಾರಾದರೂ ಇರುತ್ತಾರೋ ಇಲ್ಲವೋ.. ಯಾರದೋ ಮನೆಯಲ್ಲಿ ಸಾವಂತೆ. ಯಾರೂ ಹೋಗುವ ಹಾಗಿಲ್ಲ. ಆಕೆ ವಿಪರೀತ ಅತ್ತರಂತೆ.ಕಣ್ಣೊರೆಸಲೂ ಜೊತೆಯಿಲ್ಲ ಯಾರೂ. ಮಗು  ಹುಟ್ಟಿದೆ ಮತ್ತೂಂದೆಡೆ.. ದಯವಿಟ್ಟು, ಸದ್ಯಕ್ಕೆ ಯಾರೂ ಬರಬೇಡಿ ಎಂಬ ಬೇಡಿಕೆ ಅಲ್ಲಿಂದ. ಬರದಿದ್ದವರೇ ಈಗ ದೇವರು.. ಯಾರು ನಮ್ಮವರು? ನಮ್ಮವರು ಎಂದರೇನು? ಹಾಗೊಂದು ನಮ್ಮ ಎಂಬ ಕಾನ್ಸೆಪ್ಟನ್ನೇ ನುಚ್ಚುನೂರು ಮಾಡಿತಾ ಈ ಕೋವಿಡ್ ? ನಾನಿದ್ದರೆ ”ನಾವು” ಅಲ್ಲವಾ? ಎಲ್ಲಿಂದ ಬಂತು ಈ ಮಾರಿ? ಈ ಹಿಂದೆಲ್ಲಾ ಏನೇಕಾಯಿಲೆ ಬಂದರೂ, ಪರಿಚಯದ ಅವರೆಲ್ಲಾ ಇದ್ದಾರೆ ಬಿಡು, ತಕ್ಷಣ ಓಡಿಬಂದು ಬದುಕಿಸಿಕೊಳ್ತಾರೆ ಎಂಬ ಧೈರ್ಯವಿತ್ತು. ಆದರೆ ಈಗ? ಕೋವಿಡ್ ಅಂದರೆ ಸಾಕು; ಸ್ವಂತ ಮಕ್ಕಳೂ ಮುಟ್ಟಲೂ ಹೆದರುವಂಥ ಸಂದರ್ಭವೊಂದು ಜೊತೆಯಾಗಿ ಬಿಟ್ಟಿದೆ. ಈ ನೋವು, ಈ ಸಂಕಟ, ಈ ಹತಾಶೆ ಇನ್ನೂ ಎಷ್ಟು ದಿನವೋ…

 

Advertisement

– ಮಾಲಿನಿ ಗುರುಪ್ರಸನ್ನ

Advertisement

Udayavani is now on Telegram. Click here to join our channel and stay updated with the latest news.

Next