Advertisement

ಕನಸಾಗೆ ಉಳಿದ ಗುಡಿಬಂಡೆ ವಿಧಾನಸಭಾ ಕ್ಷೇತ್ರ

01:44 PM Nov 08, 2021 | Team Udayavani |

ಗುಡಿಬಂಡೆ: ಎರಡು ಮೂರು ದಶಕಗಳಿಂದ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಅನೇಕ ಹೋರಾಟಗಳು ನಡೆದರೂ ಇಲ್ಲಿಯವರೆಗೂ ಕನಸಾಗಿಯೇ ಉಳಿದಿದೆ. ಮುಂದಿನ ದಿನಗಳಲ್ಲಾದರೂ ನನಸಾಗುವುದೇ ಎಂದು ಜನರು ಎದುರು ನೋಡುತ್ತಿದ್ದಾರೆ.

Advertisement

ಮೈಸೂರು ರಾಜ್ಯದಿಂದ ಕರ್ನಾಟಕ ರಾಜ್ಯ ಎಂಬ ಹೆಸರು ಪಡೆದಾಗಿನಿಂದಲೂ ಗುಡಿಬಂಡೆ ತಾಲೂಕು ಬಾಗೇಪಲ್ಲಿ ಕ್ಷೇತ್ರಕ್ಕೆ ಸೇರಿಕೊಂಡು, ಸರ್ಕಾರದಿಂದ ಬಂದಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದುತ್ತಿದೆಯೇ ಹೊರತು, ತಾಲೂಕನ್ನು ಅಭಿವೃದ್ಧಿಯಿಂದ ದೂರ ಮಾಡಿ, ಮಲತಾಯಿ ಧೋರಣೆ ಮಾಡಲಾಗುತ್ತಿದೆ.

ಇಚ್ಛಾಶಕ್ತಿ ಕೊರತೆ: ಗುಡಿಬಂಡೆ ತಾಲೂಕಿಗೆ ನಗರಗೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲ ಗ್ರಾಮಗಳನ್ನು ಸೇರಿಸಿಕೊಂಡು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚಿಸಲು ಎರಡು ದಶಕಗಳಿಂದ ಹೋರಾಟಗಳು ಸಾಗುತ್ತಲೇ ಬಂದಿಯೇ ಹೊರತು, ಇದಕ್ಕೆ ಬಲ ತುಂಬುವ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಈಗಲೂ ಅದು ಕನಸಾಗೇ ಉಳಿದಿದೆ.

ಮೂರು ದಶಕಗಳಿಂದ ಹೋರಾಟ: ಸುಮಾರು ಎರಡು ಮೂರು ದಶಕಗಳಿಂದಲೂ ಸಹಿ ಸಂಗ್ರಹ, ನಾಯಕರ ಭೇಟಿ, ಪ್ರತಿಭಟನೆಗಳು, ಇತರೆ ಹತ್ತು ಹಲವು ಹೋರಾಟ ಮಾಡಿಕೊಂಡು ಬಂದರೂ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಒಗ್ಗಟ್ಟಾಗದೆ ಇರುವುದರಿಂದ ಇಂದಿಗೂ ತಾಲೂಕು ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ.

ಮೂಲ ಸೌಕರ್ಯಗಳ ಕೊರತೆ: ಗುಡಿಬಂಡೆ ತಾಲೂಕು ರಾಜ್ಯದಲ್ಲಿಯೇ ಅತಿ ಚಿಕ್ಕ ಹಾಗೂ ಹಿಂದುಳಿದ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸರಿಯಾದ ಸಾರಿಗೆ ಸೌಲಭ್ಯವಿಲ್ಲ, ಕಾರ್ಖಾನೆಗಳ ಸ್ಥಾಪನೆ ಇಲ್ಲ, ಶೈಕ್ಷಣಿಕ ಅಭಿವೃದ್ಧಿ ಇಲ್ಲ, ಪ್ರವಾಸೋದ್ಯಮ ಅಭಿವೃದ್ಧಿ ಆಗಿಲ್ಲ, ಇನ್ನೂ ಹತ್ತು ಹಲವು ಕ್ಷೇತ್ರಗಳ ಮೂಲ ಸೌಲಭ್ಯಗಳ ಕೊರತೆಯಿಂದ ಇನ್ನೂ ಹಿಂದುಳಿದ ತಾಲೂಕಾಗಿಯೇ ಉಳಿದಿದೆ.

Advertisement

ಬಾಗೇಪಲ್ಲಿಗೆ ಮೂರು ತಾಲೂಕುಗಳು: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ ಗುಡಿಬಂಡೆ, ಬಾಗೇಪಲ್ಲಿ ತಾಲೂಕು ಸೇರಿ, ಬಂದ ಅನುದಾನ ಬಹು ಪಾಲು ಬಾಗೇಪಲ್ಲಿಗೆ ಹೋದರೆ, ಉಳಿದದ್ದು ಗುಡಿಬಂಡೆಗೆ ಬರುತ್ತಿತ್ತು, ಈಗ ಇದರ ಜೊತೆಯಲ್ಲಿಯೇ ಹೊಸದಾಗಿ ಚೇಳೂರು ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಈ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಬಂದ ಅನುದಾನದಲ್ಲಿ ಸ್ವಲ್ಪ ಮಟ್ಟಿಗೆ ಗುಡಿಬಂಡೆ ಭಾಗಕ್ಕೆ ಬಂದು ಹೆಚ್ಚಿನ ಪಾಲು ಬಾಗೇಪಲ್ಲಿ ಮತ್ತು ಚೇಳೂರು ತಾಲೂಕುಗಳಿಗೆ ಹೋದರೆ, ಗುಡಿಬಂಡೆ ಇನ್ನೂ ಅಭಿವೃದ್ಧಿಯಿಂದ ವಂಚಿತವಾಗುತ್ತದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಒಟ್ಟಾರೆ ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ನಗರಗೆರೆ ಹೋಬಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಗುಡಿಬಂಡೆ ತಾಲೂಕು ಸೇರಿ ವಿಧಾನಸಭಾ ಕ್ಷೇತ್ರದ ಅಗತ್ಯ ಜನಸಂಖ್ಯೆ ಸರಿಹೊಂದಿ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾದರೆ, ತಾಲೂಕು ಸಹ ಅಭಿವೃದ್ಧಿ ಪತದತ್ತ ಹೆಜ್ಜೆ ಇಡಲಿದೆ ಎಂದು ಸಾರ್ವಜನಿಕರ ಒಮ್ಮತದ ಅಭಿಪ್ರಾಯವಾಗಿದ್ದು, ಈ ಸಂಬಂಧ ಸರ್ಕಾರ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಗುಡಿಬಂಡೆ ತಾಲೂಕು ಪ್ರಸ್ತುತ ಹೆಸರಿಗೆ ಮಾತ್ರ ಸೀಮಿತವಾಗಿದೆ. ಎಲ್ಲಾ ರಂಗದಲ್ಲೂ ಹಿಂದುಳಿದಿದೆ. ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಿಸಿದರೆ ಮಾತ್ರ ತಾಲೂಕು ಅಭಿವೃದ್ಧಿ ಹೊಂದಲಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಗ್ಗಟ್ಟಾಗಿ ಹೋರಾಟ ತೀವ್ರಗೊಳಿಸಬೇಕು. ●ಶ್ರೀನಿವಾಸ್‌ ಯಾದವ್‌, ಅಧ್ಯಕ್ಷ, ಕರವೇ.

Advertisement

Udayavani is now on Telegram. Click here to join our channel and stay updated with the latest news.

Next