Advertisement

Gudibande: ಪಪಂನಲ್ಲಿ ಯಾವ ಕೆಲಸವೂ ಆಗಲ್ಲ ,ಎಲ್ಲವೂ ಅವ್ಯಸ್ಥೆ

04:16 PM Oct 12, 2023 | Team Udayavani |

ಗುಡಿಬಂಡೆ: ಪಟ್ಟಣ ಪಂಚಾಯ್ತಿಯಲ್ಲಿ ಮುಖ್ಯಾಧಿಕಾರಿ ರಜೆ ಮೇಲೆ ತೆರಳಿ ಎರಡು ತಿಂಗಳಾದರೂ ಬದಲಿ ವ್ಯವಸ್ಥೆ ಮಾಡದ ಕಾರಣ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇ-ಖಾತೆ, ಸಾಮಾಜಿಕ ಭದ್ರತಾ ಯೋಜನೆಗಳ ಅರ್ಜಿ ವಿಲೇವಾರಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಪಟ್ಟಣ ಪಂಚಾಯ್ತಿಗೆ ಬರುವ ಜನರು ಬರಿಗೈನಲ್ಲಿ ತೆರಳುತ್ತಿದ್ದಾರೆ. ಯಾವುದೇ ಕೆಲಸಗಳು ಆಗುತ್ತಿಲ್ಲ, ಈ ಅವ್ಯವಸ್ಥೆಗೆ ನಿತ್ಯ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

Advertisement

ಪಟ್ಟಣದಲ್ಲಿ 11 ವಾರ್ಡ್‌ಗಳು ಇದ್ದು, ಇಲ್ಲಿ 2 ಸಾವಿರಕ್ಕೂ ಹೆಚ್ಚು ಮನೆಗಳು, 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣವಾಗಿದ್ದರೂ ಬೇರೆ ಪಟ್ಟಣಗಳಿಗೆ ಹೋಲಿಸಿದರೆ ಗುಡಿಬಂಡೆ ಚಿಕ್ಕದಾದರೂ ಹಸಿರುವ ವಾತಾವರಣ ಹೊಂದಿ, ಚೊಕ್ಕದಾಗಿ ಬಡವರು ಸಹ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಬಹುದು. ಇಂತಹ ಪಟ್ಟಣ ಪ್ರದೇಶವನ್ನು ನಿರ್ವಹಿಸಲು ಇರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಕಚೇರಿಯಲ್ಲಿ ಕುಳಿತು ಕಾಟಾಚಾರಕ್ಕೆ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಪಟ್ಟಣವಾದರೂ ಸ್ವತ್ಛತೆ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಜನರ ಕೆಲಸಗಳು ನನೆಗುದಿಗೆ ಬಿದ್ದಿವೆ.

ಸೊಳ್ಳೆಗಳಿಗೆ ಕಡಿವಾಣ ಇಲ್ಲ: ಪಟ್ಟಣದಲ್ಲಿ ಅಶುಚಿತ್ವದಿಂದ ಕೂಡಿ ಸೊಳ್ಳೆಗಳು ಹೆಚ್ಚಾಗುತ್ತಿದ್ದರೂ, ಇದಕ್ಕೆ ಕಡಿವಾಣ ಹಾಕಲು ಔಷಧ ಸಿಂಪಡಣೆ ಜತೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಮನೆಗಳ ತ್ಯಾಜ್ಯ, ಕಸಕಡ್ಡಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ಎಲ್ಲವೂ ಅವ್ಯವ್ಯಸ್ಥೆಯಿಂದ ಕೂಡಿದೆ.

ಇ-ಸ್ವತ್ತು ಮಾಡುತ್ತಿಲ್ಲ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಜೆ ಮೇಲೆ ತೆರಳಿರುವುದರಿಂದ ಸುಮಾರು ಆರು ತಿಂಗಳಿಂದ ಇ-ಸ್ವತ್ತು ಮಾಡಿಕೊಡಲು ನೀಡಿರುವ ಅರ್ಜಿಗಳು ಹಾಗೆಯೇ ಉಳಿದಿವೆ. ಈ ಕುರಿತು ಕಚೇರಿಯ ನೌಕರರನ್ನು ಕೇಳಿದರೆ, “ಈಗ ಇರುವ ಪ್ರಭಾರಿ ಅಧಿಕಾರಿಗಳು ಯಾವುದೇ ಕಡತವನ್ನು ಸಹ ಮುಟ್ಟುತಿಲ್ಲ’ ಎಂದು ಉತ್ತರಿಸುತ್ತಾರೆ. ಹೀಗಾಗಿ ಜನರು ಅಲೆದು ಅಲೆದು ರೋಸಿ ಹೋಗಿದ್ದಾರೆ.

ಪರವಾನಗಿ ಇಲ್ಲ: ಪಟ್ಟಣ ಪಂಚಾಯಿತಿಯಲ್ಲಿ ಜನರು ಮನೆ ನಿರ್ಮಿಸಲು, ನಲ್ಲಿ ಸಂಪರ್ಕ ಪಡೆಯಲು, ಅಂಗಡಿ ಪರವಾನಗಿ ಪಡೆಯಲು, ವಿದ್ಯುತ್‌ ಸಂರ್ಪಕಕ್ಕೆ ಎನ್‌.ಓ.ಸಿ. ಪಡೆಯಲು ಕಚೇರಿಗೆ ಹೋದರೆ ಇಲ್ಲಿ ಮುಖ್ಯಾಧಿಕಾರಿಗಳು ಇಲ್ಲ, ಅವರು ಬರುವವರೆಗೂ ನಿಮ್ಮ ಕೆಲಸ ಆಗುವುದಿಲ್ಲ ಎಂಬ ಸಿದ್ಧ ಉತ್ತರ ಸಿಗುತ್ತದೆ. ಪಟ್ಟಣದ ಪಂಚಾಯ್ತಿಯಲ್ಲಿ ಯಾವುದೂ ಸರಿಯಲ್ಲ. ಯಾವ ಕೆಲಸವೂ ಆಗುತ್ತಿಲ್ಲ. ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಇಲಾಖೆಗಳ ಮೇಲ ಧಿಕಾರಿಗಳು ಕ್ರಮವಹಿಸಿ ಮುಖ್ಯಾಧಿಕಾರಿ ನೇಮಿಸಿ ಜನರು ಕೆಲಸಗಳು ಸುಲಲಿತವಾಗಿ ಆಗುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

Advertisement

ಕಸ ವಿಲೇವಾರಿ ವಾಹನಗಳ ಡೀಸೆಲ್‌ಗೆ ಬಿಲ್‌ ಇಲ್ಲ : ಪಟ್ಟಣ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ವಾಹನಗಳಾದ ಎರಡು ಟಾಟಾ ಏಸ್‌, ಒಂದು ಟ್ರ್ಯಾಕ್ಟರ್‌ ಪ್ರತಿದಿನ ಪಟ್ಟಣದಲ್ಲಿ ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡ ಬೇಕಿದೆ. ಆದರೆ ಎರಡು ತಿಂಗಳಿಂದ ಮುಖ್ಯಾಧಿಕಾರಿ ಕಚೇರಿಗೆ ಬಾರದ ಕಾರಣ ಈಗಾಗಲೇ ವಾಹನಗಳಿಗೆ ಹಾಕಿಸಿರುವ ಡೀಸೆಲ್‌ ಬಿಲ್‌ ಕೂಡ ನೀಡಿಲ್ಲ. ಹೀಗಾಗಿ ವಾಹನಗಳಿಗೆ ಡೀಸೆಲ್‌ ಇಲ್ಲದೆ ಒಂದು ವಾರ ನಿಂತಲ್ಲೇ ನಿಂತಿವೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಸಿಬ್ಬಂದಿ ಅಲ್ಲಿ ಇಲ್ಲಿ ಕೈ ಸಾಲ ಮಾಡಿ ಡೀಸೆಲ್‌ ಹಾಕಿಸಿಕೊಂಡು ವಾಹನ ಚಲಾಯಿಸಿ ತ್ಯಾಜ್ಯ ವಿಲೇವಾರಿ ಮಾಡುವಂತಾಗಿದೆ.

ಪ್ರಭಾರಿ ಮುಖ್ಯಾಧಿಕಾರಿ ನಿಯೋಜಿಸಲು ಕ್ರಮ: ಡೀಸಿ: ಪಟ್ಟಣ ಪಂಚಾಯಿತಿ ಸಮಸ್ಯೆಗಳು ನನ್ನ ಬಗ್ಗೆ ಗಮನಕ್ಕೆ ಬಂದಿವೆ. ಕಾಯಂ ಮುಖ್ಯಾಧಿಕಾರಿ ಸಬಾ ಶಿರಿನ್‌ ರಜೆ ತೆರಳಿರುವ ಕಾರಣ, ಬಾಗೇಪಲ್ಲಿ, ಗೌರೀಬಿದನೂರು ಮುಖ್ಯಾಧಿಕಾರಿಗಳನ್ನು ಪ್ರಭಾರಿಯನ್ನಾಗಿ ನೇಮಿಸಲಾಗಿದೆ. ಅವರಿಗೆ ಅಲ್ಲಿ ಕೆಲಸದ ಒತ್ತಡ ಜಾಸ್ತಿ ಇರುವ ಕಾರಣ ಅವರು ಇಲ್ಲಿಗೆ ಬಂದು ಕೆಲಸ ನಿರ್ವಹಿಸಲು ಕಷ್ಟವಾಗಿದೆ. ಹೀಗಾಗಿ ಮತ್ತೂಬ್ಬರನ್ನು ಮುಖ್ಯಾಧಿಕಾರಿಯನ್ನಾಗಿ ಪ್ರಭಾರಿಯನ್ನಾಗಿ ವಹಿಸಿದ್ದು, ಅವರು ಅಲ್ಲೇ ಇದ್ದು ತುರ್ತಾಗಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದರು.

ಗುಡಿಬಂಡೆ ಪಟ್ಟಣ ಪಂಚಾಯ್ತಿಯಲ್ಲಿ ಮನೆಯ ಇ-ಸ್ವತ್ತು ಮಾಡಿಕೊಡಲು ಕೊಟ್ಟು 4 ತಿಂಗಳು ಕಳೆದಿದೆ. ಅಧಿಕಾರಿಗಳು ಇಲ್ಲದ ಕಾರಣ ಕೆಲಸ ಆಗುತ್ತಿಲ್ಲ. ●ನಾಗರಾಜ, ಪಟ್ಟಣದ ನಿವಾಸಿ

ಮುಖ್ಯಾಧಿಕಾರಿ ರಜೆ ಮೇಲೆ ತೆರಳಿದ್ದು, ಬೇರೆ ತಾಲೂಕಿನವರಿಗೆ ಪ್ರಭಾರಿ ಹಾಕಿದ್ದು, ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಬೇರೆಯವರಿಗೆ ಒಂದೆರಡು ದಿನದಲ್ಲಿ ಪ್ರಭಾರಿಯಾಗಿ ನೇಮಿಸಿ, ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ●ಸಂತೋಷ್‌, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿಕೋಶ

 –ಎನ್‌.ನವೀನ್‌ ಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next