Advertisement

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

02:43 PM Oct 19, 2024 | Team Udayavani |

ಗುಡಿಬಂಡೆ: ತಾಲೂಕಿನ ದಪ್ಪರ್ತಿ ಗ್ರಾಮದ ಶ್ರೀ ವೇಣುಗೋಪಾಲ‌ಸ್ವಾಮಿ ದೇವಸ್ಥಾನದಲ್ಲಿ ಅ.2ರ ರಾತ್ರಿ ಚಿನ್ನ, ಬೆಳ್ಳಿ, ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳಾದ ಚಾಕಲಿ ಪವನ್ ಕುಮಾರ್, ನಾಗಲೂರಿ ರಮಣಯ್ಯ ಅವರನ್ನು ಗುಡಿಬಂಡೆ ಪೊಲೀಸರು ಎಸ್.ಪಿ. ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ಖೆಡ್ಡಾ ತೋಡಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣದ ಹಿನ್ನೆಲೆ: ತಾಲೂಕಿನ ದಪ್ಪರ್ತಿ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇದೇ ಅ.2ರ ರಾತ್ರಿ ಸುಮಾರು 1.30ರ ಸಮಯದಲ್ಲಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳನ್ನು ಬೇರೆ ಕಡೆಗೆ ತಿರುಗಿಸಿ, ವೈರ್‌ಗಳನ್ನು ತುಂಡು ಮಾಡಿ, ಡಿವಿಆರ್ ತೆಗೆದು ಹಾಕಿ ಬೀರುವಿನಲ್ಲಿದ್ದ ಸುಮಾರು 1.50 ಲಕ್ಷ ಬೆಲೆ ಬಾಳುವ 2.75 ಕೆ.ಜಿ. ಬೆಳ್ಳಿ ಕವಚ, 60 ಸಾವಿರ ಬೆಲೆ ಬಾಳುವ 1 ಕೆ.ಜಿ ಬೆಳ್ಳಿಯ ಪೂಜೆ ಸಮಾನು, 70 ಸಾವಿರ ಬೆಲೆ ಬಾಳುವ 15 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಸುಮಾರು 20 ಸಾವಿರ ಹಣ ಕಳವಾಗಿದ್ದು, ಈ ಬಗ್ಗೆ ಗ್ರಾಮದ ಮುರಳಿ.ಡಿ.ಎಸ್. ಅವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೊಕದ್ದಮೆ ಸಂಖ್ಯೆ: 153/2024 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಜ ಇಮಾಮ್ ಖಾಸಿಂ, ಉಪಾಧೀಕ್ಷ ಶಿವಕುಮಾರ್ ಮಾರ್ಗದರ್ಶನದಲ್ಲಿ ಗುಡಿಬಂಡೆ ಸಿ.ಪಿ.ಐ ನಯಾಜ್ ಬೇಗ್, ಪಿ.ಎಸ್.ಐ ಗಣೇಶ್, ರಮೇಶ್, ಸಿಬ್ಬಂದಿ ದಕ್ಷಿಣಮೂರ್ತಿ, ಅರುಣ್, ಮುರಳಿ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚನೆಗೊಂಡು ಪ್ರಕರಣದ ಆರೋಪಿಗಳಾದ ಚಾಕಲಿ ಪವನ್ ಕುಮಾರ್, ನಾಗಲೂರಿ ರಮಣಯ್ಯ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಕಳವಾಗಿದ್ದ 4 ತಾಳಿ ಬೊಟ್ಟುಗಳು, ದೇವರ ಬೆಳ್ಳಿಯ ಕವಚ, ಬೆಳ್ಳಿಯ ಕಿರೀಟಗಳು, ಬೆಳ್ಳಿಯ ತಟ್ಟೆಯನ್ನು ವಶಕ್ಕೆ ಪಡೆಯಲಾಗಿದ್ದು ಇದರ ಜೊತೆಯಲ್ಲಿಯೇ, ಚಿಕ್ಕಬಳ್ಳಾಪುರ ತಾಲೂಕಿನ ಸೊಪ್ಪಹಳ್ಳಿ ಗ್ರಾಮ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಬೆಳ್ಳಿಯ ವಿಗ್ರಹ, ನಾಗರ ಹೆಡೆಯ ಬೆಳ್ಳಿಯ ಕವಚ, ಬೆಳ್ಳಿ ಲೇಪನವಿರುವ ಕಿರೀಟವನ್ನು ಸಹ ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.

Advertisement

ಅರೋಪಿಗಳಾದ ಚಾಕಲಿ ಪವನ್ ಕುಮಾರ್, ಶ್ರೀಸತ್ಯಸಾಯಿ ಜಿಲ್ಲೆಯ ರೊದ್ದಂ ಮಂಡಲಂ, ತುರುಕಲಪಟ್ನಂ ಗ್ರಾಮದಲ್ಲಿ ಎಲೆಕ್ಟ್ರೀಕಲ್ ಕೆಲಸ ಮಾಡುತ್ತಿದ್ದು, ಇನ್ನೊಬ್ಬ ಆರೋಪಿ ನಾಗಲೂರಿ ರಮಣಯ್ಯ ಅಲಿಯಾಸ್ ಎರಿಕುಲ ವೆಂಕಟರಮಣ, ಶಿಡ್ಲಘಟ್ಟ ತಾಲೂಕಿನ ಗೊಲ್ಲಪಲ್ಲಿ ಗ್ರಾಮದಲ್ಲಿ ಮೀನು ಹಿಡಯುವ ಕೆಲಸ ಮಾಡುತ್ತಿರುತ್ತಾನೆ ಎಂದು ಪೊಲೀಸರು ತಿಳಿದ್ದಾರೆ.

ಆರೋಪಿತರನ್ನು ಮಾಲು ಸಮೇತ ಪತ್ತೆ ಹಚ್ಚಲು ಭಾಗಿಯಾದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next