ಕಕ್ಕೇರಾ: ಕೇಂದ್ರದ ದೀನದಯಾಳ್ ನಿರಂತರ ವಿದ್ಯುತ್ ಸರಬರಾಜು ಯೋಜನೆ ಬಡ ಜನರ ಬಾಳಿಗೆ ಬೆಳಕಾಗಬೇಕಿದ್ದು, ಕೆಲವು ಕಡೆ ಇನ್ನೂ ವಿದ್ಯುತ್ ಕಲ್ಪಿಸದೆ ಜನರಿಗೆ ನಿರಾಸೆ ಮೂಡಿಸಿದೆ. ಪಟ್ಟಣದ 20ನೇ ವಾರ್ಡ್‌ಗೆ ದೀನ್‌ದಯಾಳ್ ನಿರಂತರ ವಿದ್ಯುತ್ ಜೋಡಣೆ ಮಾಡುವಲ್ಲಿ
ವಿಳಂಬವಾಗಿದೆ. 50ಕ್ಕೂ ಹೆಚ್ಚು ಕುಟುಂಬಗಳು ಇರುವ ಗುಡೇರ ದೊಡ್ಡಿ, ಮಡ್ಡೇರ ದೊಡ್ಡಿಯಲ್ಲಿ ವಿದ್ಯುತ್ ಸಂಪರ್ಕ ಹೊಂದಿಲ್ಲ. ಕತ್ತಲಲ್ಲಿಯೇ ಜೀವನ ಕಳೆಯುವಂತಾಗಿದೆ. ವರ್ಷ ಗತಿಸಿದರೂ ವಿದ್ಯುತ್ ಕಾಮಗಾರಿ ನಡೆದಿಲ್ಲ.
ಕುರೇರ ದೊಡ್ಡಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಿ ಅನೇಕ ದಿನಗಳು ಗತಿಸಿವೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ವಿಳಂಬವಾಗಿದೆ. ಹೀಗಾಗಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ ಕಾರಣ ಎನ್ನಲಾಗುತ್ತಿದ್ದು, ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ದೀನದಯಾಳ್ ವಿದ್ಯುತ್ ಯೋಜನೆ: ಸುರಪುರ ತಾಲೂಕಾದ್ಯಂತ ಗ್ರಾಮೀಣ ಪ್ರದೇಶ ಹಾಗೂ ವಿದ್ಯುತ್ ಹೊಂದಿರದ ಗ್ರಾಮ ಅಥವಾ ಹೆಚ್ಚು ಕುಟುಂಬಗಳು ನೆಲೆಸಿರುವ ಪ್ರದೇಶಕ್ಕೆ ದೀನ್‌ದಯಾಳ್ ವಿದ್ಯುತ್ ಯೋಜನೆ ಕಾಮಗಾರಿ ಮಾಡಿ ನಿರಂತರ ಜ್ಯೋತಿ ಕಲ್ಪಿಸಿಕೊಡಬೇಕೆಂಬ ಉದ್ದೇಶ ಇದೆ. ಇದಕ್ಕಾಗಿ ಒಟ್ಟು 27 ಕೋಟಿ ರೂ.ಅನುದಾನ ವೆಚ್ಚ ಭರಿಸಲಾಗಿದೆ.
ಈಗಾಗಲೇ ಚಾಲನೆಯಲ್ಲಿ ಇರುವ ಕಡೆ ದೀನದಯಾಳ್ ವಿದ್ಯುತ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಿರಂತರ ಜ್ಯೋತಿ ಎಂದರೂ ಒಂದು ದಿನವು ನಿರಂತರ ವಿದ್ಯುತ್ ದೀಪ ಬೆಳಗುತ್ತಿಲ್ಲ. ಇದರಿಂದ ಸಾರ್ವಜನಿಕರಲ್ಲಿ ಬೇಸರ ಮೂಡಿದೆ. ಸದ್ಯ ಗುಡೇರ ದೊಡ್ಡಿ, ಮಡ್ಡೇರ ದೊಡ್ಡಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲ್ಲಲ್ಲಿ ಜೀವನ ನಡೆಸುವಂತಾಗಿದೆ. ಹಾಗಾಗಿ ಅಗತ್ಯ ಇರುವ ಕಡೆ ನಿರಂತರ ವಿದ್ಯುತ್ ಜ್ಯೋತಿ ಕಾಮಗಾರಿಕೈಗೊಂಡು ಈ ಒಂದು ಯೋಜನೆ ಬಡ ಕುಟುಂಬಗಳಿಗೆ ಸಾರ್ಥಕವಾಗಿಸಬೇಕು ಎಂದುಜನರ ಒತ್ತಾಯವಾಗಿದೆ.