ಗಾಂಧಿನಗರ/ಹೊಸದಿಲ್ಲಿ: ಗೂಡ್ಸ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್ (ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿ) ಅಂದರೆ “ಗಬ್ಬರ್ ಸಿಂಗ್ ಟ್ಯಾಕ್ಸ್’. ಇದರಿಂದಾಗಿ ಸಣ್ಣ ಪ್ರಮಾಣದ ವರ್ತಕರಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜರೆದಿದ್ದಾರೆ. ಈ ವ್ಯವಸ್ಥೆ ಅವರಿಗೊಂದು ಕಾಲ್ಪನಿಕ ಖಳನಾಯಕನಂತೆ ತೊಂದರೆ ಕೊಡುತ್ತಿದೆ ಎಂದು ದೂರಿದ್ದಾರೆ. ಗುಜರಾತ್‌ನಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿ ರುವುದರಿಂದ ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಅವರು ಮಾತನಾಡಿದರು.
ನೋಟುಗಳ ಅಮಾನ್ಯ ಹಾಗೂ ಜಿಎಸ್‌ಟಿ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ ಎಂದು ದೂರಿದ ಅವರು, “2016ರ ನ.8ರಂದು ಪ್ರಧಾನಿ ಮೋದಿ ತಮಗೆ 500 ರೂ., 1 ಸಾವಿರ ರೂ. ನೋಟು ನೋಡಿದರೆ ಆಗುತ್ತಿಲ್ಲ. ಹೀಗಾಗಿ ಮಧ್ಯರಾತ್ರಿಯಿಂದಲೇ ಅದನ್ನು ನಿಷೇಧಿ ಸುವುದಾಗಿ ಘೋಷಣೆ ಮಾಡಿದರು. ನಂತರ 3 ದಿನಗಳ ವರೆಗೆ ಅವರಿಗೆ ದೇಶದಲ್ಲಿ ಏನಾಗುತ್ತದೆ ಎಂದು ಗೊತ್ತಾಗು ತ್ತಿರಲಿಲ್ಲ. ಐದಾರು ದಿನಗಳ ನಂತರ ತಪ್ಪಾಗಿದೆ ಎಂದು ತಿಳಿದು ಕೊಂಡು ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ 2016ರ ಡಿಸೆಂಬರ್ ಅಂತ್ಯದ ಒಳಗೆ ದೇಶದಲ್ಲಿನ ಕಪ್ಪುಹಣ ನಿಯಂತ್ರಿಸದೇ ಇದ್ದರೆ ನೇಣು ಹಾಕಿ ಎಂದು ಪ್ರಧಾನಿ ಹೇಳಿಕೊಂಡರು’ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರನ ವಿರುದ್ಧದ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಬೇಕೆಂದು ಒತ್ತಾಯಿಸಿದ ರಾಹುಲ್, ಗುಜರಾತ್‌ನಲ್ಲಿ ಬಿಜೆಪಿ ಪಟೇಲರಿಗೆ ಮೀಸಲು ನೀಡುವ ಆಂದೋಲನ ಸಮಿತಿಯ ನಾಯಕರನ್ನು ಖರೀದಿಸಲು ಮುಂದಾಗಿದೆ ಎಂದು ಆರೋಪಿಸಿದರು. ಆದರೆ ಗುಜರಾತ್ ಧ್ವನಿಯನ್ನು ಖರೀದಿಸಿ ಅಡಗಿಸಲು ಸಾಧ್ಯವಿಲ್ಲ ಎಂದರು. 10 ಕೋಟಿ, 50 ಕೋಟಿ, 1 ಸಾವಿರ ಕೋಟಿ ಮತ್ತು ದೇಶದ ಬಜೆಟ್‌ನಷ್ಟು ಮೊತ್ತದ ಮೌಲ್ಯ ನೀಡಿದರೂ ಅದು ಸಾಧ್ಯವಿಲ್ಲ ಎಂದರು.
ಬರೇ ಗಿಮಿಕ್: ರಾಹುಲ್ ಭಾಷಣ ಮುಕ್ತಾಯವಾ ಗುತ್ತಿದ್ದಂ ತೆಯೇ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ರವಿಶಂಕರ ಪ್ರಸಾದ್, ಕಾಂಗ್ರೆಸ್ ಕೇವಲ ಗಿಮಿಕ್ ಮಾಡುತ್ತಿದೆ ಎಂದು ದೂರಿದ್ದಾರೆ. ಅಭಿವೃದ್ಧಿ ಮತ್ತು ಅರ್ಥ ಶಾಸ್ತ್ರದ ಗಂಭೀರತೆಯನ್ನು ಕಾಂಗ್ರೆಸ್ ಉಪಾಧ್ಯಕ್ಷರು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ. ಜತೆಗೆ, ರಾಹುಲ್ ಅವರ “ಗಬ್ಬರ್‌ಸಿಂಗ್’ ಹೇಳಿಕೆಗೆ ಸಿನಿಮಾ ಹೆಸರಿನ (ಕೂಲಿ ನಂ.1, ಆಂಟಿ ನಂ.1) ಮೂಲಕವೇ ತಿರುಗೇಟು ನೀಡಿದ ಸಚಿವ ಪ್ರಸಾದ್, “ಕಾಂಗ್ರೆಸ್ ಒಂದು ಡ್ರಾಮೇಬಾಜ್ ಪಾರ್ಟಿ ನಂ.1′ ಎಂದು ಕುಟುಕಿದ್ದಾರೆ.