ಚಿಕ್ಕಬಳ್ಳಾಪುರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರಗಳು ಕೈಗೊಂಡಕ್ರಮಗಳಿಂದ ವಿವಿಧ ರೀತಿಯ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ಜನರು ಇನ್ನೂ ಸಹ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೆಚ್‌ಕ್ರಾಸ್‌ನ ಸೀಬೆಹಣ್ಣು ಮಾರಾಟಗಾರರು ಜೀವಂತ ಸಾಕ್ಷಿಯಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರು ಸೇರಿದಂತೆ ಕೆಲವರಿಗೆ ಆರ್ಥಿಕ ನೆರವು ನೀಡಿದೆ. ಆದರೆ ಶಿಡ್ಲಘಟ್ಟ ತಾಲೂಕಿನ ಹೆಚ್‌ಕ್ರಾಸ್ ನಲ್ಲಿ ಸೀಬೆಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿರುವ ಮಾರಾಟಗಾರರ ಬದುಕು ಅತಂತ್ರವಾಗಿದ್ದು, ವ್ಯಾಪಾರವಿಲ್ಲದೆ ಜೀವನ ನಡೆಸುವುದೇಕಷ್ಟಕರವಾಗಿದೆ.
ಸಣ್ಣ ವ್ಯಾಪಾರಿಗಳ ಪರಿಸ್ಥಿತಿ ಚಿಂತಾಜನಕ: ಕೋಲಾರ-ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಇರುವ ಹೆಚ್‌ಕ್ರಾಸ್ ಎಂದಾಕ್ಷಣ ನೆನಪಾಗುವುದು ಸೀಬೆ ಹಣ್ಣು ಮತ್ತು ಐತಿಹಾಸಿಕ ಸೀತಾ ರಾಮಾಂಜನೇಯಸ್ವಾಮಿ ದೇವಾಲಯ ನೆನಪು ಬರುವುದು ಸಹಜ. ಇತ್ತೀಚೆಗೆ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಹೆಚ್‌ಕ್ರಾಸ್‌ನಲ್ಲಿ 3 ಜಿಲ್ಲೆಗಳ ಜನರ ಸಂಗಮ ಆಗುತ್ತದೆ. ಆದರೆ ಕೋವಿಡ್ ಸೋಂಕಿನ ಪ್ರಭಾವ ಸೀಬೆಹಣ್ಣಿನ ವ್ಯಾಪಾರದ ಮೇಲೆಯೂ ಸಹ ಬಿದ್ದಿದ್ದು, ಸಣ್ಣ ವ್ಯಾಪಾರಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ.
ಖರೀದಿಸಲು ಹಿಂದೇಟು: ಹೆಚ್‌ಕ್ರಾಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ಸೀಬೆಹಣ್ಣುಗಳನ್ನು ರೈತರಿಂದ ಖರೀದಿಸಿ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳು ಸೀಬೆಹಣ್ಣು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಹೊಸಕೋಟೆ ಮಾರ್ಗ ಮಧ್ಯೆ ಸಂಚರಿಸುವ ಕಾರ್ -ಸಾರಿಗೆ-ಖಾಸಗಿ ಬಸ್‌ಗಳಲ್ಲಿ ಬರುವ ಪ್ರಯಾಣಿಕರಿಗೆ ಸೀಬೆಹಣ್ಣು ಮಾರಾಟ ಮಾಡಲು ನಾಮುಂದು ತಾಮುಂದು ಎಂದು ತಟ್ಟೆ ಹಿಡಿದುಕೊಂಡು ಹೋದರೂ ಸಹ ಸೀಬೆಹಣ್ಣು ಖರೀದಿಸಲು ಪ್ರಯಾಣಿಕರು ಹಿಂದೆ ಮುಂದೆ ಆಲೋಚನೆ ಮಾಡುತ್ತಿದ್ದಾರೆ. ಇದರಿಂದ ಸೀಬೆಹಣ್ಣಿನ ವ್ಯಾಪಾರ ನೆಚ್ಚಿಕೊಂಡಿರುವ ಸುಮಾರು 70 ರಿಂದ 100 ಜನ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಸೀಬೆಹಣ್ಣಿನ ಜೊತೆಗೆ ಹೂ ಮತ್ತು ಕಡಲೆಕಾಯಿ ಮಾರಾಟಗಾರರ ಪರಿಸ್ಥಿತಿ ಕೂಡ ಇದಕ್ಕಿಂತ ಹೊರತಾಗಿಲ್ಲ.
ನೆರವು ನೀಡಲುಕ್ರಮ : ಹೆಚ್‌ಕ್ರಾಸ್‌ನಲ್ಲಿ ಬೀದಿಬದಿಯ ವ್ಯಾಪಾರಿಗಳಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ರಾಜ್ಯ ಹೆದ್ದಾರಿಯಲ್ಲಿ ವ್ಯಾಪಾರಮಾ ಡಿಕೊಳ್ಳುವವರಿಗೆ ಪಂಚಾಯಿತಿಯಿಂದ ಪರವಾನಿಗೆ ನೀಡಲು ಅವಕಾಶವಿಲ್ಲ. ಲೋಕೋಪಯೋಗಿ ಇಲಾಖಾಧಿಕಾರಿಗಳ ಅನುಮತಿ ಪಡೆಯಬೇಕಾಗುತ್ತದೆ. ಸೀಬೆಹಣ್ಣಿನ ವ್ಯಾಪಾರಿಗಳು ಸಂಚರಿಸಿ ವ್ಯಾಪಾರ ಮಾಡುತ್ತಾರೆ ಪಂಚಾಯಿತಿ ವ್ಯಾಪ್ತಿಗೆ ಬರುವ ಸಣ್ಣ ವ್ಯಾಪಾರಿಗಳಿಗೆ ಸರ್ಕಾರದಿಂದ ದೊರೆಯುವ ನೆರವು ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ನಯನ ನಿಖತ್‌ಆರಾ ತಿಳಿಸಿದ್ದಾರೆ.
ಸೌಲಭ್ಯ ಕಲ್ಪಿಸಲು ತೊಂದರೆ : ಶಿಡ್ಲಘಟ್ಟ ತಾಲೂಕಿನ ಹೆಚ್‌ಕ್ರಾಸ್‌ನಲ್ಲಿ ಸೀಬೆಹಣ್ಣಿನವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಸಣ್ಣ ವ್ಯಾಪಾರಿಗಳು ಕೋಲಾರ ಮತ್ತು ಹೊಸಕೋಟೆ ತಾಲೂಕಿನವರು ಹೆಚ್ಚಾಗಿದ್ದಾರೆ. ಹೀಗಾಗಿ ಶಿಡ್ಲಘಟ್ಟ ತಾಲೂಕಿನ ಅಧಿಕಾರಿಗಳು ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ತೊಂದರೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಹೊಸಕೋಟೆ ಮತ್ತು ಕೋಲಾರ ತಾಲೂಕಿನ ಅಧಿಕಾರಿಗಳು ಬೀದಿಬದಿಯಲ್ಲಿ ವ್ಯಾಪಾರ ಮಾಡುವ ಇವರ ನೆರವಿಗೆ ಧಾವಿಸಬೇಕಾಗಿದೆ.
ಕೋವಿಡ್ ಸೋಂಕಿನಿಂದ ಸೀಬೆಹಣ್ಣಿನ ವ್ಯಾಪಾರ ತೀರಕಡಿಮೆಯಾಗಿದೆ. ಹಿಂದೆ 500 ರೂ.ಗಳಿಂದ 1000 ರೂ. ಸಂಪಾದನೆ ಮಾಡುತ್ತಿದ್ವಿ. ಈಗ 500 ರೂ. ಸಂಪಾದನೆ ಮಾಡುವುದುಕಷ್ಟವಾಗಿದೆ. ನಮ್ಮ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ. ಸರ್ಕಾರಿ ಸೌಲಭ್ಯ ಒದಗಿಸಲುಯಾರು ಮುಂದೆ ಬರುತ್ತಿಲ್ಲ.
– ಶ್ರೀನಿವಾಸ್, ಸೀಬೆಹಣ್ಣಿನ ಬೀದಿಬದಿ ವ್ಯಾಪಾರಿ
– ಎಂ.ಎ.ತಮೀಮ್ ಪಾಷ