Advertisement

ಗ್ಯಾರಂಟಿಗಳಿಂದ ಜನರಲ್ಲಿ ಹೊಸ ಭರವಸೆ: ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌

12:52 AM Aug 06, 2023 | Team Udayavani |

ಉಡುಪಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಯಲ್ಲಿ ಗ್ಯಾರಂಟಿ ಯೋಜನೆಗಳು ಹೊಸ ಭರವಸೆ ತುಂಬಿವೆ. ಬಸವಣ್ಣ, ಡಾ| ಬಿ.ಆರ್‌. ಅಂಬೇಡ್ಕರ್‌, ಮಹಾತ್ಮಾ ಗಾಂಧಿ, ಶಿವಾಜಿ, ಅಕ್ಕಮಹಾದೇವಿ, ಪೈಗಂಬರ್‌ ಮೊದಲಾದ ಮಹನೀಯರ ಚಿಂತನೆಯಂತೆ ಕಾಂಗ್ರೆಸ್‌ ಸರಕಾರ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

Advertisement

ಕುಂಜಿಬೆಟ್ಟಿನಲ್ಲಿರುವ ಕ.ವಿ.ಪ್ರ. ನಿ.ನಿ. ನೌಕರರ ಸಂಘದ ಸಭಾಂಗಣ ದಲ್ಲಿ ಶನಿವಾರ ರಾಜ್ಯ ಸರಕಾರದ ಇಂಧನ ಇಲಾಖೆಯ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ ಐದು ಯೋಜನೆಗಳಲ್ಲಿ ಮೂರು ಜಾರಿಯಾಗಿವೆ. ಮೂರು ತಿಂಗಳಲ್ಲಿ ಮೂರನೇ ಗ್ಯಾರಂಟಿ ಜಾರಿಯ ಮೂಲಕ ಪಕ್ಷ ನುಡಿದಂತೆ ನಡೆಯುತ್ತಿದೆ. ಎಷ್ಟೇ ಕಷ್ಟವಾದರೂ ವಿರೋಧಿಗಳು ಏನೇ ಹೇಳಿದರೂ ಮಾತನ್ನು ಈಡೇರಿಸುತ್ತೇವೆ. ಎಲ್ಲ ಭಾಷೆ, ಜಾತಿ, ಧರ್ಮದವರಿಗೆ ಯೋಜನೆಗಳ ಲಾಭ ಸಿಗಬೇಕು ಎಂದರು.

ಬೆಳಗಾವಿಯಲ್ಲಿ ಚಾಲನೆ
ಆ. 18 ಅಥವಾ 20ರಂದು ಬೆಳಗಾವಿಯಲ್ಲಿ ದೊಡ್ಡ ಸಮಾವೇಶ ನಡೆಸಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದೇವೆ. ರಾಜ್ಯವನ್ನು ಸುಭದ್ರ ಪಥದಲ್ಲಿ ಕೊಂಡೊಯ್ಯಲಿದ್ದೇವೆ. ರಾಜ್ಯದಲ್ಲಿ 1.42 ಕೋಟಿ ಫಲಾನುಭವಿ ಗಳು ಗೃಹಜ್ಯೋತಿ, 1.28 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲಿದ್ದಾರೆ. ಉಡುಪಿಯಲ್ಲಿ 3,15, 692 ಗ್ರಾಹಕರಿದ್ದು, ಈ ಪೈಕಿ 2,69,949 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿ ಕೊಂಡಿದ್ದಾರೆ. ಶೇ. 80ರಷ್ಟು ಜನರಿಗೆ ಇದರ ಲಾಭ ಸಿಗಲಿದೆ ಎಂದು ಮಾಹಿತಿ ನೀಡಿದರು.

ಬಡವರಿಗೆ ಅನುಕೂಲ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಮಾತನಾಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸೌಲ ಭ್ಯಗಳು ಸಿಗುತ್ತಿವೆ ಮತ್ತು ಸರಕಾರದ ಈ ಯೋಜನೆಗಳಿಂದ ಬಡವರಿಗೆ ಅನುಕೂಲ ಆಗಲಿದೆ ಎಂದರು.

Advertisement

ಶಾಸಕ ಯಶ್‌ಪಾಲ್‌ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಪ್ರಸನ್ನ ಎಚ್‌., ಮೆಸ್ಕಾಂ ಮಂಗಳೂರು ವಲಯ ಮುಖ್ಯ ಎಂಜಿನಿಯರ್‌ ಪುಷ್ಪಾ, ಪ್ರಧಾನ ವ್ಯವಸ್ಥಾಪಕ ಅಭಿಷೇಕ್‌, ಉಡುಪಿ ವೃತ್ತದ ಅಧೀಕ್ಷಕ ಎಂಜಿನಿಯರ್‌ ಪಿ. ದಿನೇಶ್‌ ಉಪಾಧ್ಯ, ಕುಂದಾಪುರ ಉಪವಿಭಾಗದ ಆಯುಕ್ತೆ ರಶ್ಮಿ, ಕಾಂಗ್ರೆಸ್‌ ಪ್ರಮುಖರಾದ ಉದಯ ಕುಮಾರ್‌ ಶೆಟ್ಟಿ, ದಿನೇಶ್‌ ಹೆಗ್ಡೆ ಮೊಳಹಳ್ಳಿ, ರಮೇಶ್‌ ಕಾಂಚನ್‌ ಉಪಸ್ಥಿತರಿದ್ದರು.

ಮೆಸ್ಕಾಂ ನಿರ್ದೇಶಕ ಎಚ್‌.ಜಿ. ರಮೇಶ್‌ ಪ್ರಸ್ತಾವನೆಗೈದರು. ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ. ಪ್ರಸನ್ನ ಕುಮಾರ್‌ ಸ್ವಾಗತಿಸಿ, ವಿನಾಯಕ ಕಾಮತ್‌ ವಂದಿಸಿ, ಲೆಕ್ಕಾಧಿಕಾರಿ ಗಿರೀಶ್‌ ನಿರೂಪಿಸಿದರು.

ಅನುದಾನ ಒದಗಿಸಿ: ಯಶ್‌ಪಾಲ್‌
ರಾಜ್ಯ ಸರಕಾರದ ಬಜೆಟ್‌ ಮಂಡನೆ ಮೊದಲು ಉಡುಪಿ ಜಿಲ್ಲೆಯಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ವಿಶೇಷ ಯೋಜನೆಯಾಗಲೀ ಅನುದಾನವಾಗಲೀ ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ. ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಹಾಗೂ ಕೃಷಿ ಕಾಲೇಜು ಸ್ಥಾಪನೆ ಮಾಡಬೇಕು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಉಡುಪಿ ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ 50 ಕೋ.ರೂ. ಒದಗಿಸಬೇಕು, ಶಿಕ್ಷಕರ ಕೊರತೆ ನೀಗಿಸುವ ಜತೆಗೆ ಸರಕಾರಿ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಐವರು ಶಾಸಕರೊಂದಿಗೆ ಸಭೆ ನಡೆಸುವಂತೆ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next