Advertisement

ಹೆಣ್ಮಕ್ಳ ಮೇಲೆ ಕೈ ಹಾಕಿದ್ರೆ ಕೈಗೆ ಕೋಳ ಗ್ಯಾರಂಟಿ!

12:04 PM Dec 30, 2017 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಹೆಣ್ಣು ಮಕ್ಕಳ ಮೇಲೆ ಕೈ ಹಾಕಿದ್ರೆ, ನಿಮ್ಮ ಕೈಗೆ ಕೋಳ ಬೀಳ್ಳೋದ್ರಲ್ಲಿ ಡೌಟೇ ಅಲ್ಲ! ಕಳೆದ ವರ್ಷ ನಡೆದ ಮಹಿಳೆಯರ ಮೇಲಿನ ದೌರ್ಜನ್ಯದಿಂದ ಅಪಕೀರ್ತಿಗೆ ಒಳಗಾದ ನಗರ ಪೊಲೀಸರು ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ದುಷ್ಕರ್ಮಿಗಳ ಮೇಲೆ ನಿಗಾ ಇಡಲಿದ್ದಾರೆ.

Advertisement

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ‌ ಬಿಗಿ ಭದ್ರತೆ ಕಲ್ಪಿಸಿರುವ ನಗರ ಪೊಲೀಸರು, ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳಲ್ಲಿ 20ಕ್ಕೂ ಹೆಚ್ಚು ಡ್ರೋಣ್‌ ಹಾಗೂ 200ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳ ಮೂಲಕ ದುಷ್ಕರ್ಮಿಗಳ ಮೇಲೆ ನಿಗಾವಹಿಸಲಿದ್ದಾರೆ.

ಸಾಮಾನ್ಯವಾಗಿ ಭದ್ರತೆ ದೃಷ್ಠಿಯಿಂದ ಡ್ರೋಣ್‌ ಬಳಕೆ ನಿಷೇಧಿಸಲಾಗಿದೆ. ಆದರೆ, ಅದೇ ಭದ್ರತೆ ಹಿನ್ನೆಲೆಯಲ್ಲಿ ಡಿ.31ರ ರಾತ್ರಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಗಳಲ್ಲಿ ಡ್ರೋಣ್‌ ಕ್ಯಾಮೆರಾ ಬಳಕೆ ಮಾಡಿಕೊಂಡು ಹೆಣ್ಣು ಮಕ್ಕಳ ಜತೆ ಅನುಚಿತ ವರ್ತನೆ, ಅಸಭ್ಯವಾಗಿ ನಡೆದುಕೊಳ್ಳುವವರನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ಬಂಧಿಸಲಾಗುವುದು.

ತನ್ಮೂಲಕ ಸಂಭ್ರಮಾಚರಣೆಯ ಪ್ರತಿ ಹಂತವವನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಕಮಾಂಡೋ ಸೆಂಟರ್‌ನಲ್ಲಿ ಡಿಸಿಪಿ ದರ್ಜೆಯ ಅಧಿಕಾರಿಗಳೇ ತಡರಾತ್ರಿವರೆಗೆ ವೀಕ್ಷಣೆ ಮಾಡಲಿದ್ದಾರೆ. ಒಂದು ವೇಳೆ ಯಾರಾದರೂ ಕಾನೂನು ಬಾಹಿರವಾಗಿ ನಡೆದುಕೊಂಡರೆ ಕೂಡಲೇ ಸ್ಥಳದಲ್ಲಿರುವ ಸಿಬ್ಬಂದಿಗೆ ತಿಳಿಸಿ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಡಿ.31ರ ದಿನದ ಮಟ್ಟಿಗೆ ಈ ಎಲ್ಲ ಕ್ಯಾಮೆರಾಗಳ ವೀಕ್ಷಣೆಯನ್ನು ಕಬ್ಬನ್‌ ಪಾರ್ಕ್‌ ಮತ್ತು ಅಶೋಕನಗರ ಠಾಣೆ ಹಾಗೂ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿಯೂ “ವಿಡಿಯೋ ವಾಲ್‌’ ಮಾಡಿಕೊಂಡು ವೀಕ್ಷಣೆ ಮಾಡಲು ಸಿದತೆ ನಡೆಸಿದ್ದಾರೆ.

Advertisement

ಜತೆಗೆ ಸಂಭ್ರಮಾಚರಣೆಯನ್ನು ವಿಡಿಯೋ ರೆಕಾರ್ಡ್‌ ಕೂಡ ಮಾಡಿಕೊಳ್ಳಲಾಗುವುದು. ಅಂದು ಸಾಮಾಜಿಕ ಜಾಲತಾಣದ ಸಿಬ್ಬಂದಿ ಕೂಡ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲಿದ್ದು, ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳ ಮೇಲೆ ನಿಗಾ ವಹಿಸಲಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

300 ಸಿಸಿಟಿವಿ ಕ್ಯಾಮೆರಾ: ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಗಳತ್ತಲೇ ಹೆಚ್ಚು ಗಮನಹರಿಸಿರುವ ಪೊಲೀಸರು, ಸಂಭ್ರಮಾಚರಣೆ ಸ್ಥಳದ ಸುತ್ತ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಈ ಕ್ಯಾಮೆರಾಗಳು ಸುಮಾರು 150ರಿಂದ 200 ಮೀಟರ್‌ ದೂರದವರೆಗಿನ ದೃಶ್ಯಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದ್ದು, 360 ಡಿಗ್ರಿ ಆ್ಯಂಗಲ್‌ನಲ್ಲಿ ಕಾರ್ಯ ನಿರ್ವಹಿಸಲಿವೆ.

ಕಮಾಂಡೋ ಸೆಂಟರ್‌ ಹಾಗೂ ನಿಗದಿತ ಸ್ಥಳದಲ್ಲಿ ಕುಳಿತೇ ಈ ಕ್ಯಾಮೆರಾಗಳನ್ನು ಯಾವ ದಿಕ್ಕಿ ಬೇಕೋ ಆ ದಿಕ್ಕಿಗೆ ಬದಲಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಆಚರಣೆಯಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಗೊತ್ತಿಲ್ಲದೆಯೇ ಅವರ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುವುದು. ಇನ್ನು ಡ್ರೋಣ್‌ ಕ್ಯಾಮೆರಾಗಳು ಹಾರಾಟ ನಡೆಸುವುದರಿಂದ ಗುಂಪಿನಲ್ಲಿ ಅನುಚಿತವಾಗಿ ವರ್ತಿಸಿದರು ಅದು ಕೂಡ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.

ಪಬ್‌, ಬಾರಲ್ಲಿ ಹೊಸ ವರ್ಷ ಬೇಡ! 
ಬೆಂಗಳೂರು:
ಮುಂಬೈನ ಕಮಲಾ ಮಿಲ್ಸ್‌ನಲ್ಲಿ ನಡೆದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿರುವ ಬಾರ್‌ ಮತ್ತು ಪಂಬ್‌ಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡದಂತೆ ಇಂದಿರಾನಗರ ನಿವಾಸಿಗಳು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸ್ವರ್ಣ ವೆಂಕಟರಾಮನ್‌ ಅವರು, ಶುಕ್ರುವಾರ ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಮುಂಬೈನ ಕಮಲಾ ಮಿಲ್ಸ್‌ ರೀತಿಯ ಕಟ್ಟಡಗಳು ನಗರದಲ್ಲೂ ಇವೆ. ಅನಧಿಕೃತವಾಗಿ ಬಹಳಷ್ಟು ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಅಗ್ನಿನಂದಕಗಳು ಇರುವುದಿಲ್ಲ. ಜತೆಗೆ ಅಗ್ನಿ ಶಾಮಕ ಇಲಾಖೆಯಿಂದ ಅನುಮತಿ ಪಡೆದಿರುವುದಿಲ್ಲ. ಎಂಟು ವರ್ಷಗಳ ಹಿಂದೆ ಕಾರ್ಲಟನ್‌ ಟವರ್‌ನಲ್ಲಿ ನಡೆದ ದುರಂತವೇ ಇದಕ್ಕೆ ಸಾಕ್ಷಿ ಎಂದು ಮನವಿ ಮಾಡಿದ್ದಾರೆ.

ಇದರೊಂದಿಗೆ ಕಾರ್ಲಟನ್‌ ಟವರ್‌ನ ದುರಂತದಲ್ಲಿ ಸಾವನ್ನಪ್ಪಿದ ಅಕಿಲ್‌ ಉದಯ್‌ ಅವರ ಪುತ್ರ ಉದಯ್‌ ವಿಜಯನ್‌ ಟ್ವಿಟರ್‌ ಮೂಲಕ ಮುಂಬೈನ ಕಮಲಾ ಮಿಲ್ಸ್‌ ದುರಂತದ ಬಗ್ಗೆ ಸರಣಿ ಟ್ವಿಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ, “ಬಿಹೈಂಡ್‌ ಕಾರ್ಲಟನ್‌’ ಎಂಬ ಆಂದೋಲನ ಕೂಡ ಮಾಡುತ್ತಿದ್ದಾರೆ. ಕೆಲವೊಂದು ಕಟ್ಟಡಗಳಲ್ಲಿ ಅಗ್ನಿ ಅವಘಡ ಕುರಿತು ಯಾವುದೇ ಮುನ್ನೆಚ್ಚರಿಕಾ ಕ್ರಮವಹಿಸಿರುವುದಿಲ್ಲ ಅಂತಹ ಕಟ್ಟಡಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ದೇ ವೇಳೆ ಗ್ನಿ ನಂದಕ ಬಳಸದ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಬಾರ್‌ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಇನ್ನು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next