ಬೆಂಗಳೂರು: ರಾಜ್ಯ ಸರಕಾರದ “ಶಕ್ತಿ’ ಯೋಜನೆ ಜಾರಿಯಾದ ಅನಂತರ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ. ಬಿಎಂಟಿಸಿ ಹೊರತು ಪಡಿಸಿ ಉಳಿದ ಸಾರಿಗೆ ನಿಗಮಗಳು ಲಾಭದಲ್ಲಿವೆ. ಆದರೆ, ಸಂಬಳ, ನಿರ್ವಹಣೆ ವೆಚ್ಚ, ಡೀಸೆಲ್ ದರ ಹೆಚ್ಚಳವಾಗಿರುವುದು ಒಂದೆಡೆೆಯಾದರೆ ಕಳೆದ 4 ವರ್ಷಗಳಿಂದ ಟಿಕೆಟ್ ದರ ಹೆಚ್ಚಿಸಿಲ್ಲದ ಕಾರಣದಿಂದಾಗಿ ಲಾಭವನ್ನು ತೋರಿಸಲಾಗುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2024ರ ಜೂನ್ ವರೆಗೆ “ಶಕ್ತಿ’ ಯೋಜನೆಯಡಿ 4,453.50 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದ್ದು 1,413.47 ಕೋಟಿ ರೂ ಬರಲು ಬಾಕಿ ಇದೆ. ಆದರೆ ಯೋಜನೆಗೆ ಈ ವರ್ಷದ ಬಜೆಟ್‌ನಲ್ಲಿ 5,015 ಕೋಟಿ ರೂ ಹಣವನ್ನು ಇಡಲಾಗಿದೆ. ಈ ವರ್ಷ ಸ್ವಲ್ಪ ಕೊರತೆಯಾಗಬಹುದು. ಇದನ್ನು ಸರಿಪಡಿಸಲು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು ಪೂರಕ ಬಜೆಟ…ನಲ್ಲಿ ಒದಗಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಪ್ರಸಾದದ ದಿನಸಿ ಪದಾರ್ಥ ಖರೀದಿಗೆ ಇ-ಟೆಂಡರ್: ರಾಮಲಿಂಗಾರೆಡ್ಡಿ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರಸಾದ ವಿತರಣೆಗಾಗಿ ದಿನಸಿ ಪದಾರ್ಥಗಳನ್ನು ಇ-ಟೆಂಡರ್ ಮೂಲಕ ಖರೀದಿಸಲು 15 ರಿಂದ 20 ದಿನದೊಳಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಧಾರ್ಮಿಕ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಅನ್ನ ಪ್ರಸಾದಕ್ಕಾಗಿ ಜನತಾ ಬಜಾರ್ ಮೂಲಕ ಖರೀದಿಸಲಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇ-ಟೆಂಡರ್ ಮೂಲಕ ದಿನಸಿ ಖರೀದಿಸಲು 2023ರ ನ. 15ರಂದು ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ದೇವಾಲಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸೇವೆ ಮತ್ತು ಸರಕುಗಳನ್ನು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಇ-ಟೆಂಡರ್ ಮೂಲಕ ಸರಬರಾಜು ಮಾಡಿಕೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಒಂದು ವೇಳೆ ಸರಕಾರದ ನಿಯಮ ಪಾಲನೆ ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ಹಿಂದೆ ನೀಡಿದ್ದ ಆದೇಶ ಪಾಲಿಸದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.