Advertisement

Guarantee Scheme Effect: ಚಿಕ್ಕಬಳ್ಳಾಪುರ ಜಿಲ್ಲೆಗೆ 95 ಕೋಟಿ ರಾಜಧನ ಸಂಗ್ರಹ ಗುರಿ!

01:33 PM Aug 12, 2023 | sudhir |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ತೀವ್ರ ಕಸರತ್ತು ನಡೆಸುತ್ತಿರುವಾಗಲೇ ಜಿಲ್ಲೆಯಲ್ಲಿ ಈ ವರ್ಷ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹೆಚ್ಚುವರಿಯಾಗಿ 15 ಕೋಟಿ ರಾಜಧನ ಸಂಗ್ರಹಿಸುವಂತೆ ಗುರಿ ನೀಡಿ ಆದೇಶಿಸಿದೆ.
ಹೌದು, ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ಗಣಿಗಾರಿಕೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಜಿಲ್ಲೆಯಿಂದ ಪ್ರತಿ ವರ್ಷ ಕೋಟ್ಯಾಂತರ ರೂ. ರಾಜಧನ (ಆದಾಯ) ಸರ್ಕಾರದ ಖಜಾನೆಗೆ ಹರಿದು ಹೋಗುತ್ತಿದೆ.

Advertisement

ಆದರೆ, ಸರ್ಕಾರ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪರಿಣಾಮ ಹಣಕಾಸಿನ ವ್ಯವಸ್ಥೆಯನ್ನು ಯೋಜನೆಗಳಿಗೆ ಸರಿದೂಗಿಸಲು ಸರ್ಕಾರ ವಿವಿಧ ಇಲಾಖೆಗಳ ಮೂಲಕ ತೆರಿಗೆ ಸಂಗ್ರಹಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಗೆ ರಾಜಧನ ಸಂಗ್ರಹದ ಗುರಿ ಹೆಚ್ಚಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿ ವರ್ಷ 60 ರಿಂದ 80 ಕೋಟಿಗಿಂತ ಹೆಚ್ಚು ರಾಜಧನ ಸಂಗ್ರಹಿಸುವ ಗುರಿ ಸರ್ಕಾರ ಇದುವರೆಗೂ ನೀಡಿರಲಿಲ್ಲ. ಆದರೆ, ಈ ವರ್ಷ 2023-24ನೇ ಸಾಲಿಗೆ ಒಟ್ಟು 95 ಕೋಟಿ ರಾಜಧನ ಸಂಗ್ರಹಿಸುವ ಗುರಿ ನೀಡುವ ಮೂಲಕ ಈ ವರ್ಷ ಹೆಚ್ಚುವರಿಯಾಗಿ 15 ಕೋಟಿ ಹೆಚ್ಚುವರಿ ರಾಜಧನ ಸಂಗ್ರಹದ ಗುರಿ ನೀಡಿರುವುದು ಕಂಡು ಬಂದಿದೆ.

ಅಧಿಕಾರಿಗಳಿಗೆ ಸಂಕಷ್ಟ: ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುವ ಗುತ್ತಿಗೆಗಳು ಮೊದಲಿನಷ್ಟೆ ಇವೆ. ಯಾವುದು ಕೂಡ ಹೊಸದಾಗಿ ಗಣಿ ಗುತ್ತಿಗೆಯ ಪರವಾನಿಗೆ ನೀಡಿಲ್ಲ. ಆದರೆ 15 ಕೋಟಿ ಹೆಚ್ಚುವರಿಯಾಗಿ ರಾಜಧನ ಸಂಗ್ರಹಿಸುವುದು ಹೇಗೆ ಎಂಬ ಚಿಂತೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮುಳುಗಿದ್ದಾರೆ.

ಜಿಲ್ಲೆಯಲ್ಲಿ 74 ಜೆಲ್ಲಿ ಕ್ರಷರ್‌ಗಳು, 151 ಕ್ವಾರಿಗಳು, 89 ಕಲ್ಲು ಗಣಿ ಗುತ್ತಿಗೆ ಸೇರಿ ಒಟ್ಟು 376 ಗಣಿ ಗುತ್ತಿಗೆಗಳು ಜಿಲ್ಲಾದ್ಯಂತ ಸಕ್ರಿಯವಾಗಿವೆ. ಕಳೆದ ವರ್ಷ ಸರ್ಕಾರ ಜಿಲ್ಲೆಗೆ 80 ಕೋಟಿ ರಾಜಧನ ಸಂಗ್ರಹ ಗುರಿ ನೀಡಿದ್ದು, ಆ ಪೈಕಿ 69.73 ಕೋಟಿ ರಾಜಧನ ಸಂಗ್ರಹಿಸಿ ಶೇ.87 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಈ ಬಾರಿ 95 ಕೋಟಿ ರೂ. ಗುರಿ ನೀಡಿದ್ದು ಜೂನ್‌ ತಿಂಗಳಲ್ಲಿ ನೀಡಿದ್ದ 26.60 ಕೋಟಿ ಪೈಕಿ 17.08 ಕೋಟಿ ರಾಜಧನ ಸಂಗ್ರಹಿಸಲಾಗಿದೆ.
– ಕೃಷ್ಣವೇಣಿ, ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಿಕ್ಕಬಳ್ಳಾಪುರ.

-ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next