Advertisement

ಗುತ್ತಿಗೆ ನೌಕರರನ್ನು ಕಾಯಂಗೊಳಿಸಿ ಸೇವಾ ಭದ್ರತೆ ಕೊಡಿ

05:32 PM Jul 26, 2018 | Team Udayavani |

ಕೊಪ್ಪಳ: ಗುತ್ತಿಗೆ ನೌಕರರಿಗೆ ಸರ್ಕಾರ ಕೂಡಲೇ ಭದ್ರತೆ ಕೊಡುವುದಲ್ಲದೇ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಮುಖಂಡರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ವಸತಿ ಶಾಲೆ ಮತ್ತು ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಮಾತ್ರ ನೌಕರರನ್ನು ಕಾಯಂಗೊಳಿಸುತ್ತಿಲ್ಲ. ಕಾಯಂಗೊಳಿಸಿಕೊಳ್ಳುತ್ತೇವೆ ಎಂದು ಈಗಾಗಲೇ ಹಲವು ಬಾರಿ ಭರವಸೆ ನೀಡಿರುವ ಸರ್ಕಾರವು, ತನ್ನ ನಿಲುವಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಇದರಿಂದ ಗುತ್ತಿಗೆ ನೌಕರರಲ್ಲಿ ಆತಂಕ ಸೃಷ್ಟಿಯಾಗಿದೆ. ಕೂಡಲೇ ನಮಗೆ ಜೀವನದ ಭದ್ರತೆ ಒದಗಿಸಬೇಕೆಂದು ಒತ್ತಾಯಿದರು.

Advertisement

ಈಗಾಗಲೇ ಅತ್ಯುನ್ನತ ಹುದ್ದೆ ಪಡೆದಿರುವಂತ ಅಭ್ಯರ್ಥಿಗಳನ್ನು ವಸತಿ ನಿಲಯಗಳಲ್ಲಿ ಅಡುಗೆ ಸಹಾಯಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದು, ಅವರು ಕೆಲಸಕ್ಕೆ ಹಾಜರಾಗಿದ್ದಾರೆ. ಇದರಿಂದ ಹೊರಗುತ್ತಿಗೆ ನೌಕರರಿಗೆ ಉದ್ಯೋಗದ ಅಭದ್ರತೆ ಕಾಡುತ್ತಿದೆ. ವಿವಿಧ ಜಿಲ್ಲೆಗಳಲ್ಲಿನ ವಸತಿ ನಿಲಯದಲ್ಲಿ ನೌಕರರ ಶೋಷಣೆ ವ್ಯಾಪಕವಾಗಿದೆ. ನಿಗದಿತ ಕನಿಷ್ಠ ವೇತನ ಕೊಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕಡಿತ ಮಾಡಿದ ಪಿಎಫ್‌, ಇಎಸ್‌ಐ ವಂತಿಗೆಯನ್ನು ನೌಕರರ ಖಾತೆಗೆ ಜಮಾ ಮಾಡುವುದಿಲ್ಲ. ಲಾಭಕೋರ ಗುತ್ತಿಗೆದಾರರು ಬೇರೆ ಬೇರೆ ಇಲಾಖೆಗಳಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟದೆ ಮೋಸ ಮಾಡುತ್ತಿದ್ದಾರೆ ಎಂದು
ಆರೋಪಿಸಿದರು.

ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ನೇಮಕಾತಿ ನಿಯಮ ತಿದ್ದುಪಡಿ ಮಾಡಿಯಾದರೂ ನೌಕರರ ಸೇವೆ ಕಾಯಂ ಮಾಡಬೇಕು. ಹೊರಗುತ್ತಿಗೆ ಎಂಬ ಜೀತ ಪದ್ಧತಿ ನಿರ್ಮೂಲನೆ ಮಾಡಬೇಕು. ಜಿಲ್ಲೆಯಲ್ಲಿ ಈ ಹಿಂದೆ ಸೇವೆ ಒದಗಿಸಿದ್ದ ಏಜೆನ್ಸಿಗಳು ಪಿಎಫ್‌ ಕಟ್ಟದೆ ಅನ್ಯಾಯ ಮಾಡಿದ್ದು, ಅಂತಹ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ನಗರದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗುತ್ತಿಗೆ ನೌಕರರು
ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಗುತ್ತಿಗೆ ನೌಕರರಾದ ಮುತ್ತು ಭಜೇಂತ್ರಿ, ಲಿಂಗಪ್ಪ ಹಣವಾಳ, ದ್ಯಾಮಣ್ಣ ಪರಿವಾರ, ಪ್ರಕಾಶ, ಮುಕ್ತುಂಸಾಬ್ ಸುರೇಶ, ಹನುಮವ್ವ ಚಲವಾದಿ, ಜ್ಯೋತಿ, ಬಿಬಿಜಾನ್‌, ಬಸವಣ್ಣೆವ್ವ, ಈರಮ್ಮ, ಮಂಗಳಾ, ರೇಣುಕಾ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next