Advertisement

ಜಿಟಿಡಿ ಪುತ್ರ ಪ್ರವೇಶ ಭಂಗ

12:42 PM Apr 25, 2018 | |

ಮೈಸೂರು: ಯಡಿಯೂರಪ್ಪಪುತ್ರ ಬಿ.ವೈ.ವಿಜಯೇಂದ್ರ, ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ, ನಗರದ ಖಾಸಗಿ ಹೋಟೆಲ್‌ ಮುಂದೆ ನಡೆಯುತ್ತಿದ್ದ ಬೆಂಬಲಿಗರ ಪ್ರಹಸನ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರ ಮನೆಗೆ ಸ್ಥಳಾಂತರವಾಯಿತು.

Advertisement

ವಿಜಯ ನಗರದಲ್ಲಿರುವ ಜಿ.ಟಿ.ದೇವೇಗೌಡರ ಮನೆ ಮುಂದೆ ಜಮಾಯಿಸಿದ ವರುಣಾ ಕ್ಷೇತ್ರದ ಕಾರ್ಯಕರ್ತರು, ಜೆಡಿಎಸ್‌ ಬೆಂಬಲಿಗರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರನ್ನು ಸೋಲಿಸಲು ನಮಗೆ ಪ್ರಬಲ ಅಭ್ಯರ್ಥಿ ಅವಶ್ಯವಿದೆ. ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ. ಹೀಗಾಗಿ ನಿಮ್ಮ ಪುತ್ರ ಜಿ.ಡಿ.ಹರೀಶ್‌ಗೌಡರನ್ನು ಕಣಕ್ಕಿಳಿಸಿ, ನಾವು ಬೆಂಬಲಿಸುತ್ತೇವೆ ಎಂದು ಒತ್ತಾಯಿಸಿದರು.

ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧಿಸಿರುವುದರಿಂದ ನನ್ನ ಮಗ ಕೂಡ ಅಲ್ಲಿ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಆದ್ದರಿಂದ ಹರೀಶ್‌ ಗೌಡ ಸ್ಪರ್ಧೆ ಮಾಡುವುದಿಲ್ಲ ಎಂದು ಜಿ.ಟಿ.ದೇವೇಗೌಡರು ಹೇಳಿದರು. ನಾಮಪತ್ರ ಸಲ್ಲಿಸಲು ಅಂತಿಮವಾದರೂ ಮಧ್ಯಾಹ್ನ 3ಗಂಟೆವರೆಗೂ ಬೆಂಬಲಿಗರು ತಮ್ಮ ಪ್ರಯತ್ನ ನಡೆಸಿ ಸಫ‌ಲರಾಗದೆ ಹಿಂತಿರುಗಿದರು.

ಬಿಜೆಪಿ ಮುಖಂಡ ಕಾ.ಪು.ಸಿದ್ದಲಿಂಗಸ್ವಾಮಿ ಸಹೋದರ ಜಿಪಂ ಮಾಜಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ವಿಜಯೇಂದ್ರ ಬದಲಿಗೆ ಹೆಸರು ಕೇಳಿ ಬಂದಿದ್ದ ಜಿಪಂ ಸದಸ್ಯ ಸದಾನಂದ ಅವರು, ಜಿ.ಟಿ.ದೇವೇಗೌಡರ ಮನೆಗೆ ಆಗಮಿಸಿ ವರುಣಾದಿಂದ ಮಗನನ್ನು ನಾಮಪತ್ರ ಸಲ್ಲಿಸುವಂತೆ ಹೇಳಿ, ನಾವೇ ಪ್ರಚಾರ ಮಾಡಿ ಹರೀಶ್‌ಗೌಡ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು,

ವಿಜಯೇಂದ್ರ ಅವರಿಗೆ ಮೋಸ ಮಾಡಿರುವ ಕೆಲವರಿಗೆ ಬುದ್ದಿ ಕಲಿಸುವ ಜತೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಸೋಲಿಸಬೇಕಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಬಿಜೆಪಿ ನಿಮಗೆ ಬೆಂಬಲ ನೀಡಲಿದೆ ಎಂದು ಜಿ.ಟಿ.ದೇವೇಗೌಡರ ಮನವೊಲಿಸುವ ಪ್ರಯತ್ನ ಮಾಡಿದರು.

Advertisement

ಕಾರ್ಯಕರ್ತರು, ಅಭಿಮಾನಿಗಳು, ಬಿಜೆಪಿ ಮುಖಂಡರ ಒತ್ತಡ ಹೆಚ್ಚಾದಾಗ ಒಂದು ಹಂತದಲ್ಲಿ , ಹರೀಶ್‌ಗೌಡ ಕೇವಲ ನಾಮಪತ್ರ ಸಲ್ಲಿಸಿ ಬರುತ್ತಾನೆ. ಆತನನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು ಎಂದು ಜಿಟಿಡಿ ಸಮ್ಮತಿ ನೀಡುತ್ತಿದ್ದಂತೆ, ಅಭಿಮಾನಿಗಳು ಜಯಘೋಷದೊಂದಿಗೆ ಹರೀಶ್‌ಗೌಡರನ್ನು ಅಭಿನಂದಿಸಿ, ಬಾಗಿಲುವರೆಗೂ ಹೊತ್ತು ಬಂದರು.

ಆದರೆ, ಈ ವೇಳೆ ಹರೀಶ್‌ಗೌಡರ ತಾಯಿ ಲಲಿತಾದೇವೇಗೌಡ ಮಗನನ್ನು ತಡೆದು ಈಗ ಅಲ್ಲಿಗೆ ಹೋಗುವುದು ಸರಿ ಅಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಕೆಲಸ ಮಾಡುವಂತೆ ಹೇಳಿದರು. ಇದರಿಂದ ಹರೀಶ್‌ ಗೌಡ ಮತ್ತೆ ಮನೆಯೊಳಗೆ ಸೇರಿದರು. ಪ್ರಯತ್ನ ಬಿಡದ ವರುಣಾ ಕ್ಷೇತ್ರ ಅಭಿಮಾನಿಗಳು ಹೊರಗೆ ಕಾಯ್ದು ಕುಳಿತರು. ಕಾ.ಪು.ಸಿದ್ದವೀರಪ್ಪ, ಸದಾನಂದರವರು ಲಲಿತಾದೇವೇಗೌಡರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದರೂ ಸಫ‌ಲರಾಗಲಿಲ್ಲ. ಹೀಗಾಗಿ ಬರಿಗೈಲಿ ವಾಪಸ್ಸಾದರು.

Advertisement

Udayavani is now on Telegram. Click here to join our channel and stay updated with the latest news.

Next