Advertisement

ಪ್ರಮುಖ ಖಾತೆ ನೀಡಲು ಜಿಟಿಡಿ ಬೆಂಬಲಿಗರ ಪ್ರತಿಭಟನೆ

12:43 PM Jun 10, 2018 | |

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರಿಗೆ ಸಚಿವ ಸಂಪುಟದಲ್ಲಿ ಪ್ರಮುಖವಾದ ಖಾತೆ ನೀಡುವಂತೆ ಆಗ್ರಹಿಸಿ ಶಾಸಕರ ಅಭಿಮಾನಿಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರು  ಶನಿವಾರ ಪ್ರತಿಭಟನೆ ನಡೆಸಿದರು. 

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಜಿ.ಟಿ.ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಶನಿವಾರ ಬೆಳಗ್ಗೆ ವಿಜಯನಗರದ ಸಚಿವರ ನಿವಾಸಕ್ಕೆ ಆಗಮಿಸಿದರು.

ಈ ವೇಳೆ ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಪ್ರಬಲ ಪೈಪೋಟಿ ನೀಡಿ ಸೋಲಿಸಿರುವ ಜಿ.ಟಿ.ದೇವೇಗೌಡರಿಗೆ ಪ್ರಬಲ ಖಾತೆಯನ್ನೇ ನೀಡಬೇಕೆಂದು ಒತ್ತಾಯಿಸಿದರು. 

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶಾಸಕ ಜಿ.ಟಿ.ದೇವೇಗೌಡರಿಗೆ ತಮ್ಮ ಸಂಪುಟದಲ್ಲಿ ಪ್ರಮುಖ ಖಾತೆ ನೀಡುವುದಾಗಿ ಚುನಾವಣಾ ಪ್ರಚಾರದ ವೇಳೆ ಘೋಷಿಸಿದ್ದರು. ಇದೀಗ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಇದರಿಂದ ಜನಪರ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಅಂತಹ ಖಾತೆ ನೀಡುವ ಮೂಲಕ ಜಿ.ಟಿ.ದೇವೇಗೌಡ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಒಂದೊಮ್ಮೆ ಬೇರೆ ಖಾತೆ ನೀಡದೆ, ಇದೇ ಖಾತೆ ನೀಡಿದರೆ ಜಿ.ಟಿ.ದೇವೇಗೌಡರು ಸಚಿವ ಸ್ಥಾನ ನಿರಾಕರಿಸಿ ಶಾಸಕರಾಗಿಯೇ ಉಳಿದು, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.  

Advertisement

ಪುತ್ರನಿಂದ ಮನವೊಲಿಕೆ: ಬೆಂಬಲಿಗರು -ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿ.ಟಿ.ದೇವೇಗೌಡರ ಪುತ್ರ ಹರೀಶ್‌ಗೌಡ, ಕುಮಾರಸ್ವಾಮಿ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಬೇಕೆಂಬುದು ನಮ್ಮ ಆಸೆ.

ಹೀಗಾಗಿ ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಹೀಗಾಗಿ ಕಾರ್ಯಕರ್ತರ ಮನವಿಯನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇವೆ. ಖಾತೆ ವಿಷಯದಲ್ಲಿ ನಮ್ಮ ತಂದೆ ಅಥವಾ ನಮಗೆ ಯಾವುದೇ ಅಸಮಾಧಾನವಿಲ್ಲ. ಈ ಕುರಿತು ನಮ್ಮ ತಂದೆ ಎಲ್ಲೂ ಮಾತನಾಡಿಲ್ಲ.

ಆದ್ದರಿಂದ ಒಂದು ದಿನ ಕಾಲಾವಕಾಶ ನೀಡಿ. ವರಿಷ್ಠರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಅಲ್ಲಿಯವರೆಗೂ ಯಾವುದೇ ಪ್ರತಿಭಟನೆ ನಡೆಸುವುದು ಬೇಡ ಎಂದು ಮನವೊಲಿಸಿದರು. ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು, ಪ್ರತಿಭಟನೆ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next