Advertisement

GT V\s KKR: ಮತ್ತೆ ಕಾಡಲಿದೆಯೇ ರಿಂಕು ಭೀತಿ?

12:32 AM Apr 29, 2023 | Team Udayavani |

ಕೋಲ್ಕತಾ: ಗೆಲುವಿನ ಲಯದಲ್ಲಿರುವ ಗುಜರಾತ್‌ ಟೈಟಾನ್ಸ್‌ ಮತ್ತು ಸತತ 4 ಸೋಲಿನ ಸರಪಳಿಯನ್ನು ಕಡಿದುಕೊಂಡಿರುವ ಕೋಲ್ಕತಾ ನೈಟ್‌ರೈಡರ್ ಶನಿವಾರ ದ್ವಿತೀಯ ಸುತ್ತಿನ ಮುಖಾಮುಖಿಗೆ ಸಜ್ಜು ಗೊಂಡಿವೆ. ಹಾಲಿ ಚಾಂಪಿಯನ್‌ ಗುಜರಾತ್‌ ಪಾಲಿಗೆ ಇದು ಸೇಡಿನ ಪಂದ್ಯ. ಅಹ್ಮದಾ ಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮೇಲಾಟದಲ್ಲಿ ಕೆಕೆಆರ್‌ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು.

Advertisement

ಇತ್ತಂಡಗಳ ನಡುವಿನ ಮೊದಲ ಮುಖಾಮುಖೀ ಹಾರ್ದಿಕ್‌ ಪಾಂಡ್ಯ ಗೈರಲ್ಲಿ ನಡೆದಿತ್ತು. ಅಂದು ರಶೀದ್‌ ಖಾನ್‌ ನಾಯಕತ್ವ ವಹಿಸಿದ್ದರು. 204 ರನ್‌ ಬೆನ್ನಟ್ಟಿಕೊಂಡು ಹೋದ ಗುಜರಾತ್‌ಗೆ ರಿಂಕು ಸಿಂಗ್‌ ಸಿಂಹಸ್ವಪ್ನ ವಾಗಿ ಕಾಡಿದ್ದರು. ಯಶ್‌ ದಯಾಳ್‌ ಅವರ ಅಂತಿಮ ಓವರ್‌ನಲ್ಲಿ ಸತತ 5 ಸಿಕ್ಸರ್‌ ಸಿಡಿಸಿ ಜಯಭೇರಿ ಮೊಳಗಿಸಿ ದ್ದನ್ನು ಮರೆಯಲುಂಟೇ! ಐಪಿಎಲ್‌ನ ಅತ್ಯಂತ ರೋಚಕ ಹಣಾಹಣಿಗೆ ಈ ಪಂದ್ಯ ಸಾಕ್ಷಿಯಾಗಿತ್ತು. ಬಹುಶಃ ಈಗಲೂ ರಿಂಕು ಸಿಂಗ್‌ ಭೀತಿಯಿಂದ ಗುಜರಾತ್‌ ಹೊರಬಂದಿರಲಿಕ್ಕಿಲ್ಲ!

ಆದರೂ ಕೂಟದಲ್ಲೇ ಅತ್ಯಂತ ಲಯದಲ್ಲಿರುವ ತಂಡವೆಂದರೆ ಗುಜರಾತ್‌ ಟೈಟಾನ್ಸ್‌ ಎಂಬುದನ್ನು ಮರೆಯುವಂತಿಲ್ಲ. ಅತೀ ಕಡಿಮೆ ಪಂದ್ಯಗಳಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ಹಿರಿಮೆ ಪಾಂಡ್ಯ ಪಡೆಯದ್ದು (7 ಪಂದ್ಯ, 5 ಜಯ). ಇನ್ನೊಂದೆಡೆ ನಿತೀಶ್‌ ರಾಣಾ ಬಳಗ ಎಂಟರಲ್ಲಿ ಮೂರನ್ನಷ್ಟೇ ಗೆದ್ದಿದೆ. ಪಂಜಾಬ್‌ ವಿರುದ್ಧ ಸೋಲಿನ ಆರಂಭ ಕಂಡಿದ್ದ ಕೋಲ್ಕತಾ, ಅನಂತರ ಸತತ 2 ಪಂದ್ಯಗಳನ್ನು ಗೆದ್ದು ಭರವಸೆ ಮೂಡಿಸಿತು. ಆದರೆ ಮತ್ತೆ ಸತತವಾಗಿ ಮುಗ್ಗರಿಸುತ್ತ ಹೋಯಿತು. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಜೀವದಾನ ಪಡೆಯಿತು. ಈ ಗೆಲುವು ಕೆಕೆಆರ್‌ಗೆ ಸ್ಫೂರ್ತಿ ತುಂಬೀತೇ ಎಂಬುದಕ್ಕೆ ತವರಿನ ಪಂದ್ಯ ಉತ್ತರ ನೀಡಲಿದೆ. ಉಳಿದ 6 ಪಂದ್ಯಗಳಲ್ಲಿ ಐದನ್ನು ಗೆಲ್ಲಲೇಬೇಕಾದ ಒತ್ತಡ ಕೋಲ್ಕತಾ ಮೇಲಿದೆ. ಈ ಆರರಲ್ಲಿ 2 ಪಂದ್ಯಗಳನ್ನಷ್ಟೇ ಅದು ತವರಿನಾಚೆ ಆಡಲಿದೆ.

ನಿತೀಶ್‌ ರಾಣಾ ನಾಯಕತ್ವದಲ್ಲಿ ಪಳಗಿಲ್ಲ ಮತ್ತು ಕೆರಿಬಿಯನ್‌ದ್ವಯರಾದ ಸುನೀಲ್‌ ನಾರಾಯಣ್‌, ಆ್ಯಂಡ್ರೆ ರಸೆಲ್‌ ಇನ್ನೂ ಲಯ ಕಂಡುಕೊಂಡಿಲ್ಲ ಎಂಬುದನ್ನು ಹೊರತುಪಡಿಸಿದರೆ, ಕೋಲ್ಕತಾ ಬಲಿಷ್ಠ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಆರಂಭಕಾರ ಜೇಸನ್‌ ರಾಯ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಕಳೆದ 3 ಪಂದ್ಯಗಳಲ್ಲಿ 43, 61 ಮತ್ತು 56 ರನ್‌ ಬಾರಿಸಿದ್ದಾರೆ. ಗುರ್ಬಜ್‌, ಜಗದೀಶನ್‌, ವೆಂಕಟೇಶ್‌ ಅಯ್ಯರ್‌, ರಾಣಾ, ರಿಂಕು ಸಿಂಗ್‌, ಶಾರ್ದೂಲ್‌ ಠಾಕೂರ್‌ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬ್ಯಾಟರ್. ಕೆಕೆಆರ್‌ ಬೌಲಿಂಗ್‌ ಸ್ಪಿನ್ನರ್‌ಗಳಾದ ವರುಣ್‌ ಚಕ್ರವರ್ತಿ, ಸುಯಶ್‌ ಶರ್ಮ ಅವರನ್ನು ಅವಲಂಬಿಸಿದೆ.

Advertisement

ಉತ್ಸಾಹದಲ್ಲಿ ಗುಜರಾತ್‌
ಗುಜರಾತ್‌ ವೈಶಿಷ್ಟ್ಯವೆಂದರೆ ಎಂಥದೇ ಪರಿಸ್ಥಿತಿಯಿಂದ ಜಿಗಿದು ಪಾರಾಗಿ ಬರುವ ಉತ್ಸಾಹ. ಇದಕ್ಕೆ ತಣ್ಣೀರೆರಚಿದ್ದೇ ಕೋಲ್ಕತಾ ಮತ್ತು ರಿಂಕು ಸಿಂಗ್‌. ಅದೂ ತವರಿನಂಗಳದಲ್ಲಿ. ಇದಕ್ಕೆ ಕೆಕೆಆರ್‌ ತವರಾದ ಈಡನ್‌ ಗಾರ್ಡನ್ಸ್‌ನಲ್ಲೇ ಜವಾಬು ನೀಡುವುದು ಗುಜರಾತ್‌ ಗುರಿಯಾದರೆ ಅಚ್ಚರಿ ಏನಿಲ್ಲ.
ಗುಜರಾತ್‌ ಅತ್ಯಂತ ಸಂತುಲಿತ ತಂಡ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡ್‌ ವಿಭಾಗಗಳಲ್ಲಿ ಅದು ಸಶಕ್ತ ಪಡೆಯನ್ನು ಹೊಂದಿದೆ. ಆದರೆ ಪಂದ್ಯ ನಡೆಯುವುದು ಈಡನ್‌ ಅಂಗಳದಲ್ಲಿ. ಅಂದಮಾತ್ರಕ್ಕೆ ಕೋಲ್ಕತಾವೇ ಮೇಲುಗೈ ಸಾಧಿಸ ಬೇಕೆಂದಿಲ್ಲ. ಇಲ್ಲಿ ಆಡಲಾದ ಕಳೆದ ಪಂದ್ಯ ದಲ್ಲಿ ಚೆನ್ನೈ 49 ರನ್ನುಗಳಿಂದ ಕೋಲ್ಕತಾವನ್ನು ಮಣಿಸಿತ್ತು!

Advertisement

Udayavani is now on Telegram. Click here to join our channel and stay updated with the latest news.

Next