ಮೈಸೂರು: ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ಜೀವನದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ನಂತರ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ. ಸಭೆಯಲ್ಲಿ ಮುಕ್ತ ಚರ್ಚೆ ಮಾಡುತ್ತೇನೆ. ಜನರ ಅಭಿಪ್ರಾಯದಂತೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಐದು ವರ್ಷ ನಾನು ಜೆಡಿಎಸ್ ಶಾಸಕನಾಗಿ ಜನ ಮತ ಹಾಕಿದ್ದಾರೆ. ಹೀಗಾಗಿ ಯಾವುದೇ ಚುನಾವಣೆಯಲ್ಲಿ ಪಕ್ಷ ವಿಪ್ ಕೊಡಲಿ ಬಿಡಲಿ, ನಾನು ಜೆಡಿಎಸ್ ಪರವಾಗಿ ಮತ ಹಾಕುತ್ತೇನೆ. ಯಾಕೆಂದರೆ ನನ್ನ ಆತ್ಮಸಾಕ್ಷಿಗೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡುವುದಿಲ್ಲ. ಕಳೆದ ಮೂರು ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಎಂದರು.
ನಿರೀಕ್ಷಿಸಿರಲಿಲ್ಲ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬಗ್ಗೆ ಶಾಸಕ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಿ.ಟಿ ದೇವೇಗೌಡ, ರಾಜಣ್ಣ ಒಬ್ಬ ರಾಜಕಾರಣಿ. ಅವರ ಬಾಯಿಂದ ಈ ಮಾತು ಯಾರು ನಿರೀಕ್ಷೆ ಮಾಡಿರಲಿಲ್ಲ. ಸಾವು ಯಾರನ್ನು ಹೇಳಿ ಕೇಳಿ ಬರಲ್ಲ. ಇವರಿಂದ ನಾನು ಈ ರೀತಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕನ್ನಡಿಗರಿಗೆ ದೇವೇಗೌಡ ಬಗ್ಗೆ ಆಪಾರ ಪ್ರೀತಿ ವಿಶ್ವಾಸ, ಗೌರವ ಇದೆ. ರಾಜಣ್ಣ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ. ಅವರು ಬಹುರಂಗ ಕ್ಷಮೆ ಯಾಚಿಸದೇ ಹೋದರೆ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದರು.
ಅಡ್ವಾನ್ಸ್ ವಿಶ್: ಜಿಟಿ ದೇವೇಗೌಡರು ಸಿದ್ದರಾಮಯ್ಯಗೆ ಜನ್ಮದಿನದ ಶುಭ ಕೋರಿದರು. ಸಿದ್ದರಾಮೊತ್ಸವ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಇವರೆಗೂ ಆಹ್ವಾನ ಪತ್ರಿಕೆ ಬಂದಿಲ್ಲ. ಆಹ್ವಾನ ಪತ್ರಿಕೆ ಬರಲಿ ಬಿಡಲಿ ನಾನು ಸಿದ್ದರಾಮಯ್ಯ ಅವರಿಗೆ ಹಾರೈಸುತ್ತೇನೆ. ಸ್ವಲ್ಪದಿನ ಮುಂಚಿತವಾಗಿಯೇ ನಾನು ಅವರಿಗೆ ಹುಟ್ಟುಹಬ್ಬದ ಶುಭ ಕೋರುತ್ತೇನೆ ಎಂದರು.