Advertisement

ಆರ್ಥಿಕ ಪುನಶ್ಚೇತನಕ್ಕೆ ಜಿಎಸ್‌ಟಿ ಪರಿಹಾರ

08:12 AM Apr 30, 2020 | Sriram |

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಎಪ್ರಿಲ್‌ನಲ್ಲಿ ರಾಜ್ಯದ ಆರ್ಥಿಕತೆಗೆ 1.2 ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದ್ದು, ನಷ್ಟ ಹೊಂದಾಣಿಕೆಗೆ ಜಿಎಸ್‌ಟಿ ಪರಿಹಾರ ವಿತರಣೆ ಅವಧಿ ವಿಸ್ತರಣೆ, ಆರ್‌ಬಿಐಯಿಂದ ಓವರ್‌ಡ್ರಾಫ್ಟ್ ಸಹಿತ ಆಯ್ದ ಮಾರ್ಗೋ ಪಾಯಗಳ ಹುಡುಕಾಟವನ್ನು ಸರಕಾರ ನಡೆಸಿದೆ.

Advertisement

ವಿಶೇಷ ಪ್ಯಾಕೇಜ್‌, ಹೆಚ್ಚಿನ ಸಾಲ ಪಡೆಯಲು ನಿಯಮ ಸಡಿಲಿಕೆ, ಸಿಎಸ್‌ಆರ್‌ ಇಲ್ಲವೇ ಅದೇ ರೀತಿಯ ನೆರವು, ಆರ್‌ಬಿಐಯಿಂದ ಓವರ್‌ ಡ್ರಾಫ್ಟ್‌ ಮತ್ತು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಮೂಲಕ ಕೇಂದ್ರ ಸರಕಾರವೇ ನೆರವು ನೀಡಿ ನಷ್ಟದ ತೀವ್ರತೆ ತಗ್ಗಿಸಲಿ ಎಂಬ ನಿರೀಕ್ಷೆಯಲ್ಲಿ ರಾಜ್ಯ ಸರಕಾರವಿದೆ.

ಅನ್ಯ ಪಕ್ಷ ಆಡಳಿತದ ರಾಜ್ಯ ಗಳಿಗೆ ಕೇಂದ್ರವು ಪ್ಯಾಕೇಜ್‌ ನೀಡಿದರೆ ಕರ್ನಾಟಕಕ್ಕೂ ಅದು ಸಿಕ್ಕೇ ಸಿಗಲಿದೆ ಎಂಬುದು ರಾಜ್ಯ ಸರಕಾರದ ಲೆಕ್ಕಾಚಾರ. ಪ್ರಧಾನಿ ಸೋಮವಾರ ದೇಶದ ಎಲ್ಲ ಸಿಎಂಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಕರ್ನಾಟಕದಿಂದ ನಿರ್ದಿಷ್ಟ ಮನವಿ ಸಲ್ಲಿಸಿರ ಲಿಲ್ಲ. ಆದರೆ ಮಹಾರಾಷ್ಟ್ರ 50 ಸಾವಿರ ಕೋ.ರೂ., ಕೇರಳ 80 ಸಾವಿರ ಕೋ.ರೂ. ಮೊತ್ತದ ಪ್ಯಾಕೇಜ್‌ಗಳಿಗೆ ಮನವಿ ಮಾಡಿವೆ. ಬಹುತೇಕ ರಾಜ್ಯಗಳು ಪಿಎಂ ಕೇರ್‌ ಫಂಡ್‌ನ‌ಲ್ಲಿ ಪಾಲು ನೀಡಬೇಕು, ಇಲ್ಲವೇ ಇದೇ ರೀತಿಯ ನೆರವು ಸಂಗ್ರಹಕ್ಕೆ ಅನುಮತಿ ನೀಡುವಂತೆ ಕೋರಿವೆ ಎನ್ನಲಾಗಿದೆ.

ರಾಜ್ಯದ ಜಿಎಸ್‌ಟಿ ಪ್ರಸ್ತಾವಕ್ಕೆ ಹೆಚ್ಚಿದ ಬಲ
2017ರಲ್ಲಿ ದೇಶಾದ್ಯಂತ ಜಿಎಸ್‌ಟಿ ಜಾರಿಯಾದಾಗ ಹಳೆಯ ವ್ಯಾಟ್‌ ಪದ್ಧತಿಯ ತೆರಿಗೆ ಪ್ರಮಾಣಕ್ಕೆ ಹೋಲಿಸಿ ದರೆ ಉಂಟಾಗುವ ನಷ್ಟ ಪ್ರಮಾಣವನ್ನು 2022ರ ವರೆಗೆ ಭರಿಸುವುದಾಗಿ ಕೇಂದ್ರ ಸರಕಾರ ಘೋಷಿಸಿತ್ತು. ಆದರೆ 2024-25ನೇ ಸಾಲಿನ ವರೆಗೂ ಜಿಎಸ್‌ಟಿ ಪರಿಹಾರ ಮುಂದುವರಿಸಬೇಕು ಎಂದು ಆಗಲೇ ಕೇಂದ್ರ ವನ್ನು ಒತ್ತಾಯಿಸಲಾಗಿತ್ತು. ಪ್ರಸ್ತುತ ಹಲವು ರಾಜ್ಯಗಳು ಇದೇ ಬೇಡಿಕೆ ಮಂಡಿಸಲಾರಂಭಿಸಿವೆ. ಒಂದೊಮ್ಮೆ ಕೇಂದ್ರ ಒಪ್ಪಿದರೆ ರಾಜ್ಯಕ್ಕೆ ಮಾಸಿಕ 1,800 ಕೋ.ರೂ. ಜಿಎಸ್‌ಟಿ ಪರಿಹಾರ ಸಿಗಲಿದೆ ಎಂದು ಮೂಲಗಳು ಹೇಳಿವೆ.

ಹೆಚ್ಚುವರಿ ಸಾಲ ಸಾಧ್ಯತೆ
ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವ ಹಣೆ (ಎಫ್‌ಆರ್‌ಬಿಎಂ) ಮಿತಿಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ)ದ ಶೇ. 3ರಿಂದ 3.5ಕ್ಕೆ ಹೆಚ್ಚಿಸುವ ಬಗ್ಗೆಯೂ ಪ್ರಧಾನಿ ನಡೆಸಿದ ಸಭೆ ಯಲ್ಲಿ ಪ್ರಸ್ತಾವವಾಗಿದೆ. ಇದಕ್ಕೆ ಅವಕಾಶ ದೊರೆತರೆ ರಾಜ್ಯ ಸರಕಾರವು ಹೆಚ್ಚುವರಿಯಾಗಿ 17 ಸಾವಿರ ಕೋ.ರೂ. ಸಾಲ ಪಡೆಯಬಹುದಾಗಿದೆ. ಎಪ್ರಿಲ್‌ನಿಂದ ಡಿಸೆಂಬರ್‌ ವರೆಗಿನ ಅವಧಿಗೆ ಆರ್‌ಬಿಐಯಿಂದ 27 ಸಾವಿರ ಕೋ.ರೂ. ಓ.ಡಿ. ಪಡೆಯಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.ಜಿಎಸ್‌ಟಿ ಪರಿಹಾರದಡಿ 3,500 ಕೋ.ರೂ. ಬರಬೇಕಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ದಿಂದ 5,495 ಕೋ.ರೂ. ಅನುದಾನದ ನಿರೀಕ್ಷೆ ಇದೆ.

Advertisement

ಶೇ. 20 ಮಾತ್ರ ಅಗತ್ಯ ವಸ್ತು ವ್ಯವಹಾರ
ಪ್ರಸ್ತುತ ಹಣಕಾಸು ವರ್ಷದಲ್ಲಿ ರಾಜ್ಯದ ಒಟ್ಟು ಆಂತ ರಿಕ ಉತ್ಪನ್ನ (ಜಿಎಸ್‌ಡಿಪಿ) 18 ಲಕ್ಷ ಕೋ.ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಮಾಸಿಕ ಸುಮಾರು 1.5 ಲಕ್ಷ ಕೋ. ರೂ. ಎಪ್ರಿಲ್‌ ತಿಂಗಳಲ್ಲಿ ಅಗತ್ಯ ವಸ್ತುಗಳ ಸಹಿತ ಆಯ್ದ ವಹಿವಾಟಿ ನಿಂದ ಶೇ. 20ರಷ್ಟು ಮಾತ್ರ ವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ರಾಜ್ಯದ ಆರ್ಥಿಕತೆಗೆ ಎಪ್ರಿಲ್‌ನಲ್ಲಿ ಸುಮಾರು 1.2 ಲಕ್ಷ ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಅಂದಾಜಿಸಬಹುದು ಎಂಬುದಾಗಿ ಅಖೀಲ ಭಾರತ ಉತ್ಪಾದನ ಸಂಸ್ಥೆಗಳ ಒಕ್ಕೂಟದ ಕರ್ನಾಟಕ ಶಾಖೆ ಅಧ್ಯಕ್ಷ ಎಸ್‌. ಸಂಪತ್‌ ರಾಮನ್‌ ತಿಳಿಸಿದ್ದಾರೆ.

 -ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next