ಒಂದು ದೇಶ ಒಂದು ತೆರಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಆಗಸ್ಟ್ 1ರಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ದೇಶದ ಆರ್ಥಿಕತೆ ಸುಸ್ಥಿರವಾಗಲು ಸಹಕಾರಿ ಎನ್ನುವುದು ಎರಡು ತಿಂಗಳಲ್ಲೇ ಸ್ಪಷ್ಟವಾಗಿದೆ. ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುವಾಗ ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ.
ಜನರಿಗೆ ಮತ್ತು ಅಧಿಕಾರಿಗಳಿಗೆ ಹೊಸ ತೆರಿಗೆ ಪದ್ಧತಿಯ ಕುರಿತು ಸಾಕಷ್ಟು ಅನುಭವ ಇಲ್ಲದಿರುವುದು ಮತ್ತು ಅದಕ್ಕೆ ಹೊಂದಿಕೊಳ್ಳಲು ಸಮಯಾವಕಾಶದ ಅಗತ್ಯವಿರುವುದರಿಂದ ಸಮಸ್ಯೆಗಳಾಗುತ್ತವೆ. ಹೀಗಾಗಿ ಈಗಾಗಲೇ ಜಿಎಸ್‌ಟಿ ಕುರಿತು ಷರಾ ಬರೆಯುವುದು ಸರಿಯಲ್ಲ. ಆದರೆ ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗಿದೆ. ತೆರಿಗೆ ಕಳ್ಳತನ ಅಸಾಧ್ಯವಾಗಿರುವುದರಿಂದ ವ್ಯಾಪಾರ ವಹಿವಾಟುಗಳಲ್ಲಿ ಪ್ರಾಮಾಣಿಕತೆ ಹೆಚ್ಚುತ್ತಿದೆ. ಕೆಲವು ವಸ್ತುಗಳು ಬೆಲೆಗಳಲ್ಲಿ ಏರುಪೇರಾಗಿದ್ದರೂ ಜನಸಾಮಾನ್ಯರಿಗೆ ಹೊರೆಯಾಗುವಂತಹ ಬದಲಾವಣೆಗಳು ಆಗಿಲ್ಲ ಎನ್ನುವುದು ಗಮನಾರ್ಹ ಅಂಶ. ಪ್ರಸಕ್ತ ಜಿಎಸ್‌ಟಿಯಲ್ಲಿ ಶೇ.5, 12, 18 ಮತ್ತು 28 ಎಂಬ ನಾಲ್ಕು ಹಂತದ ಶ್ರೇಣಿಗಳಿವೆ. ಸರಕು ಮತ್ತು ಸೇವೆಗಳ ಬಳಕೆಯ ಮತ್ತು ಮೌಲ್ಯವನ್ನು ಹೊಂದಿಕೊಂಡು ತೆರಿಗೆ ಶ್ರೇಣಿಗಳು ಅನ್ವಯವಾಗುತ್ತವೆ. ಇವಲ್ಲದೆ ಶೂನ್ಯ ತೆರಿಗೆ ಶ್ರೇಣಿ ಎಂಬ ಇನ್ನೊಂದು ಹಂತವೂ ಇದೆ. ಶೂನ್ಯ ಶ್ರೇಣಿಯಲ್ಲಿ ಹೆಚ್ಚಿನೆಲ್ಲ ಆಹಾರ ವಸ್ತುಗಳು ಮತ್ತು ಅಗತ್ಯ ಸೇವೆಗಳು ಬರುತ್ತವೆ.
ನಾಲ್ಕು ತೆರಿಗೆ ಶ್ರೇಣಿ ಅತ್ಯಂತ ಪ್ರಗತಿಪರ ಎಂದು ಆರ್ಥಿಕ ತಜ್ಞರಿಂದ ಪ್ರಶಂಸೆಯನ್ನೂ ಗಳಿಸಿಕೊಂಡಿದೆ. ಇದೀಗ ತೆರಿಗೆ ಶ್ರೇಣಿಯನ್ನು ಇನ್ನಷ್ಟು ಕಡಿತಗೊಳಿಸುವ ಸೂಚನೆ ಯೊಂದು ಕೇಂದ್ರದಿಂದ ಸಿಕ್ಕಿದೆ. ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ತೆರಿಗೆ ಸಂಗ್ರಹ ಇದೇ ರೀತಿ ಸುಸೂತ್ರವಾಗಿ ಮುಂದುವರಿದರೆ ತೆರಿಗೆ ಶ್ರೇಣಿಯನ್ನು ಕಡಿತಗೊಳಿಸಬಹುದು ಎಂದು ಹೇಳಿರುವುದು ಹಲವು ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ತೆರಿಗೆ ಶ್ರೇಣಿ ಕಡಿತಗೊಂಡರೆ ಸಣ್ಣ ತೆರಿಗೆದಾರರ ಮೇಲಿನ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಇದು ಕೆಳಹಂತದ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳ್ಳಲು ನೆರವಾಗುತ್ತದೆ.
ಜಿಎಸ್‌ಟಿಯಿಂದ ಹೆಚ್ಚು ಸಮಸ್ಯೆಯಾಗಿರುವುದೇ ಸಣ್ಣ ಪ್ರಮಾಣದ ವಹಿವಾಟು ನಡೆಸುವವರಿಗೆ. 20 ಲ. ರೂ. ವಾರ್ಷಿಕ ವಹಿವಾಟಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲವಾದರೂ ಈ ಗಡಿಯ ಆಸುಪಾಸಿನಲ್ಲಿರುವವರಿಗೆ ಹೊಸ ತೆರಿಗೆ ಪದ್ಧತಿ ಗೊಂದಲವುಂಟು ಮಾಡಿದೆ. ಈ ಗೊಂದಲಗಳು ನಿವಾರಣೆಯಾಗದೆ ಕೆಳಹಂತದ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುವುದು ಅಸಾಧ್ಯ. ಮುಖ್ಯವಾಗಿ ಮಧ್ಯಮ ವರ್ಗದ ಉತ್ಪಾದಕರು, ರಫ್ತುದಾರರು, ವ್ಯಾಪಾರಿಗಳು ಹಾಗೂ ಇನ್ನಿತರ ಉದ್ಯಮಿಗಳಿಗೆ ಜಿಎಸ್‌ಟಿ ಹೊರೆಯಾಗಿದೆ. ಜಿಎಸ್‌ಟಿ ಶ್ರೇಣಿ ಕಡಿತವಾಗಬೇಕಾದರೆ ತೆರಿಗೆ ಸಂಗ್ರಹ ಸಮೃದ್ಧಿಯಾಗಬೇಕೆಂಬ ಮಾತನ್ನೂ ಇದೇ ವೇಳೆ ಜೇತ್ಲೀ ಹೇಳಿದ್ದಾರೆ. ಸದ್ಯದ ಮಟ್ಟಿಗೆ ತೆರಿಗೆ ಸಂಗ್ರಹ ತೃಪ್ತಿಕರ ಮಟ್ಟದಲ್ಲಿದೆಯೇ ಹೊರತು ಸಮೃದ್ಧಿಯ ಹಂತಕ್ಕೆ ಬಂದಿಲ್ಲ. ಹೀಗಾಗಿ ತತ್‌ಕ್ಷಣವೇ ಜಿಎಸ್‌ಟಿ ಶ್ರೇಣಿ ಕಡಿತವಾಗುವ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಆದರೂ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ ಎನ್ನುವುದು ಸ್ವಾಗತಾರ್ಹ.
ತೆರಿಗೆ ಶ್ರೇಣಿ ಇಳಿದರೆ ಶೇ.28ರ ಗರಿಷ್ಠ ಮಿತಿ ಇಳಿಯಬಹುದು. ಒಂದು ವೇಳೆ ಈ ಮಿತಿಯನ್ನೂ ಉಳಿಸಿಕೊಂಡರೂ ಕೆಲವು ಸೇವೆ ಮತ್ತು ಸರಕುಗಳನ್ನು ಈ ಶ್ರೇಣಿಯಿಂದ ಹೊರಗಿಡಲು ಸಾಧ್ಯವಾಗಬಹುದು. ಜನಸಾಮಾನ್ಯರು ಹೆಚ್ಚು ಬಳಸುವ ವಸ್ತುಗಳ ತೆರಿಗೆಯನ್ನು ಇನ್ನಷ್ಟು ಕಡಿತಗೊಳಿಸಬಹುದು. ಚಿನ್ನ, ವಜ್ರಕ್ಕೆ ಮಾಡಿರುವಂತೆ ಹೊಸ ಶ್ರೇಣಿಯ ಸೃಷ್ಟಿಯ ಸಾಧ್ಯತೆಯೂ ಇದೆ. ಹೆಚ್ಚಿನ ಜನಾವಶ್ಯಕ ವಸ್ತುಗಳನ್ನು ಶೇ.5 ಮತ್ತು ಶೇ.12ರ ಶ್ರೇಣಿಗೆ ತಂದು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ತೆರಿಗೆ ಹೊರೆಯನ್ನು ತಗ್ಗಿಸಬಹುದು. ಒಟ್ಟಾರೆಯಾಗಿ ಸಾಮೂಹಿಕವಾಗಿ ಬಳಕೆಯಲ್ಲಿರುವ ವಸ್ತುಗಳ ಮೇಲಣ ತೆರಿಗೆಯನ್ನು ಕಡಿಮೆಗೊಳಿಸಿದರೆ ಅದರಿಂದ ಎಲ್ಲ ವರ್ಗದ ಜನರಿಗೆ ಪ್ರಯೋಜನವಾಗಲಿದೆ.
ಜನಸಾಮಾನ್ಯರು ಹೆಚ್ಚು ಬಳಸುವ ವಸ್ತುಗಳಿಗೆ ಕಡಿಮೆ ತೆರಿಗೆ ಇರುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವೂ ಹೌದು. ದೇಶದಲ್ಲಿ ಪ್ರತ್ಯಕ್ಷ ತೆರಿಗೆ ಪಾವತಿಸುವವರ ಸಂಖ್ಯೆ ಬಹಳ ಕಡಿಮೆ. ಈ ಸೀಮಿತ ತೆರಿಗೆ ಗಳಿಕೆಯಿಂದಲೇ ಸರಕಾರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ವ್ಯಾಪ್ತಿಗೆ ಹೆಚ್ಚೆಚ್ಚು ಜನರು ಬಂದಿದ್ದರೂ ಅವರಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸುವುದು ಕೂಡ ಅಷ್ಟೇ ಮುಖ್ಯ.