Advertisement

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

12:37 AM May 02, 2024 | Team Udayavani |

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಭಾರತವು ಮತ್ತೂಂದು ಮೈಲುಗಲ್ಲು ಸಾಧಿಸಿದೆ. ಎಪ್ರಿಲ್‌ ತಿಂಗಳಲ್ಲಿ ದಾಖಲೆಯ 2.10 ಲಕ್ಷ ಕೋಟಿ ರೂ. ಸಂಗ್ರಹ ವಾಗಿದ್ದು, ಶೇ.12.4 ರಷ್ಟು ಬೆಳವಣಿಗೆ ಕಂಡಿದೆ. ದೇಶೀಯ ವ್ಯವಹಾರ ಹಾಗೂ ಆಮದು ಪ್ರಮಾಣ ಏರಿಕೆ ಆಗಿರುವುದು, ಕೇಂದ್ರದಲ್ಲಿ ನೂತನ ಸರಕಾರ ಬಂದ ಬಳಿಕ ಜಿಎಸ್‌ಟಿ ನಿಯಮ ಸುಧಾರಣೆ ಆಗಲಿದೆ ಎಂಬುದು ಕೂಡ ಮತ್ತೂಂದು ಕಾರಣ ಎನ್ನಲಾಗಿದೆ.

Advertisement

ಈ ವರ್ಷ ಮಾರ್ಚ್‌ನಲ್ಲಿ ಜಿಎಸ್‌ಟಿ 1.78 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ಎಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಬಂದಿತ್ತು. ಹಾಗಾಗಿ 2024ರ ಎಪ್ರಿಲ್‌ ತಿಂಗಳ ಸಂಗ್ರಹವು ಈವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಮಹಾರಾಷ್ಟ್ರ ,

ಕರ್ನಾಟಕದಲ್ಲೇ ಹೆಚ್ಚು
ಎಂದಿನಂತೆ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ಎಪ್ರಿಲ್‌ನಲ್ಲಿ ಮಹಾರಾಷ್ಟ್ರದಿಂದ 37,671 ಕೋ. ರೂ. ಸಂಗ್ರಹವಾಗಿ ಶೇ.13ರಷ್ಟು ಬೆಳವಣಿಗೆ ದಾಖಲಿಸಿದೆ. ಶೇ.9ರ ಬೆಳವಣಿಗೆಯಲ್ಲಿ ಕರ್ನಾಟಕವು 15,978 ಕೋ. ರೂ. ಸಂಗ್ರಹಿಸಿದೆ. 3ನೇ ಸ್ಥಾನದಲ್ಲಿರುವ ಗುಜರಾತ್‌ 13,301 ಕೋ. ರೂ. ಸಂಗ್ರಹಿಸಿದೆ.

ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಪ್ರಸಕ್ತ ಸಾಲಿನ ಎಪ್ರಿಲ್‌ ತಿಂಗಳಲ್ಲಿ 2.10 ಲಕ್ಷ ಕೋಟಿ ರೂ. ಮೂಲಕ ದಾಖಲೆ ಬರೆದಿದೆ. ಇದು ದೇಶೀಯ ವಹಿವಾಟುಗಳಲ್ಲಿನ ಬಲವಾದ ಹೆಚ್ಚಳದಿಂದ (ಶೇ.13.4ರಷ್ಟು ಏರಿಕೆ) ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ ಶೇ.12.4 ಬೆಳವಣಿಗೆಯನ್ನು ದಾಖಲಿಸಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಯಾವುದೇ ಬಾಕಿ ಉಳಿಸಿಕೊಂಡಿಲ್ಲ
ಈ ಮಧ್ಯೆ ಟ್ವೀಟ್‌ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯಗಳಿಗೆ ಸಂಬಂಧಿಸಿದ ಐಜಿಎಸ್‌ಟಿಯನ್ನು ಕೇಂದ್ರ ಸರಕಾರವು ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

Advertisement

ಆರ್ಥಿಕ ಪ್ರಗತಿಯ ಸಂಕೇತ
ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆಯ ಏರಿಕೆಯಾಗಿರುವುದು, ಭಾರತದ ಆರ್ಥಿಕತೆಯಲ್ಲಿ ಪ್ರಗತಿಯಾಗಿರುವುದನ್ನು ಸೂಚಿಸುತ್ತದೆ. ಗ್ರಾಹಕರ ದೂರುಗಳಿಗೆ ಉದ್ಯಮ ಸಮುದಾಯ ಸ್ವಯಂ ಪರಿಹಾರ ಕಂಡುಕೊಳ್ಳುತ್ತಿದೆ. ಸರಕಾರದ ಕ್ರಮಗಳ ಹೊರತಾಗಿಯೂ, ಉದ್ಯಮಗಳು ಸ್ವಯಂ  ಸ್ಫೂರ್ತಿಯಿಂದ ಸಕಾಲಿಕ ಲೆಕ್ಕಪತ್ರ ಪರಿಶೋಧನೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಜಿಎಸ್‌ಟಿ ನಿಯಮಗಳಲ್ಲಿ ಸುಧಾರಣೆಯ ಸುಳಿವೂ ಇಲ್ಲಿದೆ
ಎನ್ನುತ್ತಾರೆ ತಜ್ಞರು.

-ಅಗ್ರ 5 ಸಂಗ್ರಹಗಳು-
2024 ಎಪ್ರಿಲ್‌: 2.10 ಲಕ್ಷ ಕೋಟಿ ರೂ.
2023 ಎಪ್ರಿಲ್‌: 1.87 ಲಕ್ಷ ಕೋಟಿ ರೂ.
2024 ಮಾರ್ಚ್‌: 1.78 ಲಕ್ಷ ಕೋಟಿ ರೂ.
2024 ಜನವರಿ: 1.72 ಲಕ್ಷ ಕೋಟಿ ರೂ.
2017 ಜುಲೈ: 1.65 ಲಕ್ಷ ಕೋಟಿ ರೂ.

ಸಂಗ್ರಹ ಹೆಚ್ಚಳಕ್ಕೆ ಕಾರಣಗಳೇನು?
-ಜಿಎಸ್‌ಟಿ ಪಾವತಿ ಮಾಡದವರ ವಿರುದ್ಧ ಕಠಿನ ಕ್ರಮ
-ಅಧಿಕಾರಿಗಳ ಕಾರ್ಯಕ್ಷಮತೆ
-ನಕಲಿ ಇನ್‌ವಾಯ್ಸ ಸೃಷ್ಟಿಸುವವರ ವಿರುದ್ಧ ಗಂಭೀರ ಕ್ರಮ
-ಬೇಸಗೆ ಸಂಬಂಧಿ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳ
-ಶಾಲಾ-ಕಾಲೇಜು ರಜೆಗಳ ಹಿನ್ನೆಲೆಯಲ್ಲಿ ಪ್ರವಾಸದಲ್ಲಿ ಹೆಚ್ಚಳ
-ದೇಶೀಯ ವಹಿವಾಟುಗಳಲ್ಲಿ ಭಾರೀ ಹೆಚ್ಚಳ
-ವೈಜ್ಞಾನಿಕ ದರ ಪರಿಷ್ಕರಣೆ ನಿರೀಕ್ಷೆ
-ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ತಿಂಗಳು ಮಾರ್ಚ್‌ ಆಗಿರುವುದರಿಂದ, ಎಪ್ರಿಲ್‌ನಲ್ಲೂ ಬಾಕಿ ಪಾವತಿ ಮುಂದುವರಿದಿರುವುದು

ಎಪ್ರಿಲ್‌ ತಿಂಗಳ ಜಿಎಸ್ಟಿ ಸಂಗ್ರಹವು ಭಾರತದ ಆರ್ಥಿಕತೆಯ ದಕ್ಷತೆ ಮತ್ತು ಹೆಚ್ಚಿನ ಗ್ರಾಹಕ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
ಸಂಜಯ್‌ ಛಾಬ್ರಿಯಾ,
ಹಿರಿಯ ನಿರ್ದೇಶಕ, ನೆಕ್ಸ್‌ಡಿಜಿಮ್‌

Advertisement

Udayavani is now on Telegram. Click here to join our channel and stay updated with the latest news.

Next