ಬೆಂಗಳೂರು: ನೂತನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಮಾಸಿಕ ವಹಿವಾಟಿನ ವಿವರ (ರಿಟರ್ನ್ಸ್) ಸಲ್ಲಿಕೆಯಲ್ಲಿನ ವಿಳಂಬಕ್ಕೆ ದಂಡ ಹಾಕುವುದನ್ನು 2018ರ ಮಾರ್ಚ್‌ವರೆಗೆ ಮುಂದೂಡುವಂತೆ ವ್ಯಾಪಾರ- ವಹಿವಾಟುದಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಎಫ್ಕೆಸಿಸಿಐ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಕುರಿತ ಸಂವಾದದಲ್ಲಿ ಜಿಎಸ್‌ಟಿ ವ್ಯವಸ್ಥೆಯಲ್ಲಿನ ಲೋಪಗಳು, ಅಡಚಣೆಗಳ ಬಗ್ಗೆ ವ್ಯಾಪಾರ, ವಹಿವಾಟುದಾರರು ಅಳಲು ತೋಡಿಕೊಂಡರು.
ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ ಮಾತನಾಡಿ, “ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆದಾರರು ಜಿಎಸ್‌ಟಿಯಡಿ ವ್ಯವಹರಿಸಲು ಅಗತ್ಯವಾದ ಮಾಹಿತಿ ತಂತ್ರಜ್ಞಾನ ಕೌಶಲ್ಯವನ್ನು ಇನ್ನಷ್ಟೇ ಅಳವಡಿಸಿಕೊಳ್ಳಬೇಕಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಲಿದೆ. ಮಾಹಿತಿ ಹಾಗೂ ನಿರ್ವಹಣೆ ಸಮಸ್ಯೆಯಿಂದಾಗಿ ವ್ಯಾಪಾರಿಗಳು ಮಾಸಿಕ ವಹಿವಾಟಿನ ವಿವರ ದಾಖಲಿಸುವಲ್ಲಿ ಲೋಪಗಳಾಗುತ್ತಿವೆ.
ಇದನ್ನು ಸರಿಪಡಿಸಿಕೊಳ್ಳುವ ಕಾರ್ಯಕ್ಕೆ ಅಧಿಕಾರಿಗಳು ನೆರವಾಗಬೇಕು. ರಿಟರ್ನ್ಸ್ ಸಲ್ಲಿಕೆಯಲ್ಲಿನ ವಿಳಂಬಕ್ಕೆ ದಂಡ ಹಾಕುವುದನ್ನು ಮುಂದಿನ ಮಾರ್ಚ್‌ವರೆಗೆ ವಿನಾಯ್ತಿ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು. ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಸಂಪತ್‌ರಾಮನ್, “ನೂತನ ಜಿಎಸ್‌ಟಿ ವ್ಯವಸ್ಥೆಯಡಿ ವ್ಯವಹರಿಸುವಲ್ಲಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮೊದಲೇ ಅಂದಾಜು ಮಾಡದ ಕಾರಣ ಸಮಸ್ಯೆಗಳು ತೀವ್ರವಾಗಿವೆ.
ಇವುಗಳಿಗೆ ಪರಿಹಾರ ಕಂಡುಕೊಳ್ಳದೆ ವ್ಯಾಪಾರಿಗಳ ಮೇಲೆ ದಂಡ ವಿಧಿಸುವುದು ಎಷ್ಟು ಸರಿ ಎಂದು ಹೇಳಿದರು. ರಾಜ್ಯ ಬಿಜೆಪಿ ಆರ್ಥಿಕ ವಿಭಾಗ ಮುಖ್ಯಸ್ಥ ವಿಶ್ವನಾಥ್ ಭಟ್ ಮಾತನಾಡಿ, ಜಿಎಸ್‌ಟಿ ವ್ಯವಸ್ಥೆಯ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳದೆ ಅನಗತ್ಯವಾಗಿ ವಿರೋಧಿಸುವುದು ಸರಿಯಲ್ಲ. ಹೊಸ ವ್ಯವಸ್ಥೆಯಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಆದಾಯ ಹೆಚ್ಚಾಗಲಿದೆ. ಇದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಒಂದು ವರ್ಷದ ಬಳಿಕ ಜಿಎಸ್‌ಟಿಯು ಆರ್ಥಿಕ ಪ್ರಗತಿಗೆ ನೆರವಾಗಲಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಜಿಎಸ್‌ಟಿ ವ್ಯವಸ್ಥೆಯನ್ನು ಆರ್‌ಬಿಐ ಮಾಜಿ ಗವರ್ನರ್ ರಂಗರಾಜನ್ ಸ್ವಾಗತಿಸಿದ್ದಾರೆ. ಆರಂಭದಲ್ಲಿ ಕೆಲ ಸಮಸ್ಯೆಗಳು ಎದುರಾದರೂ ಅವುಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ವ್ಯಾಪಾರ- ವ್ಯವಹಾರಸ್ಥರ ಸಮಸ್ಯೆ, ಅಳಲು, ಸಲಹೆಯನ್ನು ಜಿಎಸ್‌ಟಿ ಪರಿಷತ್‌ನ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಲೆಹರ್‌ಸಿಂಗ್ ಇತರರು ಉಪಸ್ಥಿತರಿದ್ದರು.