ಮಂಗಳೂರು: ಸಹಕಾರ ಸಂಸ್ಥೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅನ್ವಯ ಸ್ವರೂಪದ ಬಗ್ಗೆ ಸಹಕಾರ ಸಂಸ್ಥೆಗಳು ನಿಖರ ಮಾಹಿತಿಗಳನ್ನು ಹೊಂದುವುದು ಅವಶ್ಯ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಸಹಕಾರ ಸಂಘಗಳಲ್ಲಿ ಜಿಎಸ್‌ಟಿ ಅನುಪಾಲನೆ ಕುರಿತು ಎಸ್‌ಸಿಡಿಸಿಸಿ ಬ್ಯಾಂಕಿನ ವತಿಯಿಂದ ದ.ಕ. ಹಾಗೂ
ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು / ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಜು. 1ರಿಂದ ಜಿಎಸ್‌ಟಿ ಜಾರಿಗೆ ಬಂದಿದೆ. ಇದು ಸಹಕಾರಿ ಸಂಸ್ಥೆಗಳ ವ್ಯವಹಾರದಲ್ಲಿ ಯಾವ ರೀತಿ ಅನ್ವಯಗೊಳ್ಳುತ್ತದೆ, ನಿಯಮ ಹಾಗೂ ನಿಬಂಧನೆಗಳೇನು ಎಂಬ ಬಗ್ಗೆ ಪೂರ್ಣ ಮಾಹಿತಿ ಹೊಂದುವುದರಿಂದ ಮುಂದೆ ಎದುರಾಗಬಹುದಾದ ಗೊಂದಲಗಳನ್ನು ನಿವಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಈ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದರು.
ಸಹಕಾರ ಸಂಸ್ಥೆಗಳಲ್ಲಿ ಪಡಿತರ ಸಾಮಗ್ರಿಗಳ ವಿತರಣೆ ಕುರಿತಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿವಿಧ ನಿಯಮಗಳನ್ನು ಹೇರುವುದರರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೆಲವು ಸಹಕಾರ ಸಂಸ್ಥೆಗಳು ಗಮನ ಸೆಳೆದಿದ್ದು ಈ ಬಗ್ಗೆ ಚರ್ಚಿಸಿ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಿಎಸ್‌ಟಿ ಬಗ್ಗೆ ಮಾಹಿತಿ ನೀಡಿದ ಚಾರ್ಟರ್ಡ್ ಅಕೌಂಟೆಂಟ್ ಡಿ.ಆರ್. ವೆಂಕಟೇಶ್ ಅವರು ಜಿಎಸ್‌ಟಿಯಲ್ಲಿ ಪ್ರತಿ ತಿಂಗಳು 3 ಹಾಗೂ ವರ್ಷಕ್ಕೆ 1 ಸಹಿತ 37 ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ಇದೆಲ್ಲವೂ ಆನ್‌ಲೈನ್ ಮೂಲಕ ನಡೆಯುತ್ತದೆ. ಜಿಎಸ್‌ಟಿ ನೋಂದಾವಣೆಗೆ ಜು. 22 ಹಾಗೂ ನೋಂದಾವಣೆ ರದ್ದತಿಗೆ ಜು. 30 ಕೊನೆಯ ದಿನಾಂಕವಾಗಿರುತ್ತದೆ. 20 ಲಕ್ಷ ರೂ. ವರೆಗಿನ ವ್ಯವಹಾರಕ್ಕೆ ನೋಂದಣಿ ಅವಶ್ಯವಿರುವುದಿಲ್ಲ. ಆದರೆ ಸಹಕಾರಿ ಸಂಘಗಳು ನಡೆಸುವ ಕೆಲವೊಂದು ವ್ಯವಹಾರಗಳು ಜಿಎಸ್‌ಟಿ ಅಡಿಯಲ್ಲಿ ಬರುವುದರಿಂದ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಎಸ್. ಕೋಟ್ಯಾನ್, ಸದಾಶಿವ ಉಳ್ಳಾಲ, ಶಶಿ ಕುಮಾರ್ ರೈ, ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ (ಪ್ರಭಾರ) ಸತೀಶ್ ಎಸ್. ಸ್ವಾಗತಿಸಿದರು.