Advertisement

ಜಿಎಸ್‌ಟಿ ಜನ-ಗ್ರಾಹಕಸ್ನೇಹಿ ಪದ್ಧತಿ

03:20 PM Aug 05, 2017 | Team Udayavani |

ದಾವಣಗೆರೆ: ಒಂದು ದೇಶ-ಒಂದು ತೆರಿಗೆ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದಿರುವ ಜಿಎಸ್‌ಟಿ ಗ್ರಾಹಕ ಸ್ನೇಹಿಯಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ. 

Advertisement

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಸರಕು ಮತ್ತು ಸೇವಾ ತೆರಿಗೆ ಅರಿವು… ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಹಕರು ಜಿಎಸ್‌ಟಿ ಕುರಿತು ಯಾವುದೇ ಗೊಂದಲ ಇಟ್ಟುಕೊಳ್ಳಬೇಕಿಲ್ಲ. ಜಿಎಸ್‌ಟಿ ಒಂದು ಜನಸ್ನೇಹಿ ಪದ್ಧತಿ ಎಂದರು. 

ಜಿಎಸ್‌ಟಿಯಿಂದ ನಾವು ಕಟ್ಟುವ ತೆರಿಗೆ ಮಾಹಿತಿ ದೊರೆಯುತ್ತದೆ. ಇನ್ನು ತಯಾರಕನಿಗೂ ಇದರಿಂದ ಉಪಯೋಗ ಇದೆ. ಮೊದಲು ವಸ್ತು ತಯಾರಕ
ಪ್ರತಿ ಹಂತದಲ್ಲೂ ತೆರಿಗೆ ಕಟ್ಟುತ್ತಿದ್ದ. ಕಚ್ಚಾವಸ್ತುಗಳಿಂದ ಹಿಡಿದು ಉತ್ಪನ್ನ ಮಾರುಕಟ್ಟೆಗೆ ಹೋಗುವವರೆಗೆ ವಿವಿಧ ಹಂತಗಳಲ್ಲಿ ತೆರಿಗೆ ಕಟ್ಟಬೇಕಿತ್ತು. ಆ ಎಲ್ಲ ತೆರಿಗೆ ಸೇರಿಸಿ ಗ್ರಾಹಕರ ಮೇಲೆ ಹಾಕಿದಾಗ ಹೊರೆ ಆಗುತ್ತಿತ್ತು. ಉತ್ಪನ್ನ ತಯಾರಾದ ಮೇಲೆ ಮಾರಾಟ ತೆರಿಗೆ, ಸೇವಾ ತೆರಿಗೆ ಹೀಗೆ ಅನೇಕ ತೆರಿಗೆ ಹಾಕಲಾಗುತ್ತಿತ್ತು. ಆದರೆ ಇನ್ನು ಮುಂದೆ ಹೀಗಾಗುವುದಿಲ್ಲ ಎಂದರು.

ಆದರೂ ನಮ್ಮಲ್ಲೊಂದು ಪ್ರಶ್ನೆ ಉಳಿದುಕೊಂಡಿದೆ. ಜಿಎಸ್‌ಟಿ ಜಾರಿಯಾಗಿದೆ. ಆದರೆ ವಸ್ತುಗಳ ಬೆಲೆ ಕಡಿಮೆಯಾಗಿವೆಯೇ? ಸದ್ಯಕ್ಕೆ ಆ ರೀತಿ ಕಾಣಿಸದಿದ್ದರೂ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗೋಚರವಾಗಲಿದೆ. ಗ್ರಾಹಕ ವಸ್ತುವೊಂದನ್ನು ಕೊಂಡಾಗ ಏನು ಗಮನಿಸಬೇಕು. ಅದರಲ್ಲಿ ಮೋಸ ಹೋದರೆ ಏನು ಮಾಡಬೇಕು. ಇದರಲ್ಲಿ ಗ್ರಾಹಕರ, ವ್ಯಾಪಾರಿಗಳ ಪಾತ್ರವೇನು, ಒಟ್ಟಾರೆ ದೇಶದ ಬೆಳವಣಿಗೆಯಲ್ಲಿ ಜಿಎಸ್‌ಟಿ ಹೇಗೆ ಪರಿಣಾಮಕಾರಿ ಎಂಬ ನಿಟ್ಟಿನಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರ ಎಲ್ಲರಿಗೂ ಸದುಪಯೋಗವಾಗಲಿ ಎಂದು ಆಶಿಸಿದರು.

ಕಸ್ಟಮ್‌ ಸೆಂಟ್ರಲ್‌ ಎಕ್ಸೈಜ್‌ ಸಹಾಯಕ ಆಯುಕ್ತ ದ್ಯಾಮಪ್ಪ ಐರಣಿ ಮಾತನಾಡಿ, ಈ ಹಿಂದೆ ಕೇಂದ್ರ ಸರ್ಕಾರದ ಕಸ್ಟಮ್‌ ಸುಂಕ ಗ್ರಾಹಕರ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಪ್ರತಿ ರಾಜ್ಯಗಳಲ್ಲಿ ಒಂದೊಂದು ರೀತಿಯ ತೆರಿಗೆ ವ್ಯವಸ್ಥೆಯಿತ್ತು. ಬೆಲೆಗಳಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿರುತ್ತಿತ್ತು. ಹಾಗಾಗಿ ಗಡಿ ಭಾಗದ ಜನ ಬೆಲೆ ಕಡಿಮೆ ಇರುವ ರಾಜ್ಯಗಳಿಗೆ ಹೋಗಿ ವಸ್ತು ಖರೀದಿಸುತ್ತಿದ್ದರು. ಈಗ 20 ಲಕ್ಷ ಮೇಲ್ಪಟ್ಟು ವಹಿವಾಟಿರುವ ಎಲ್ಲರು ತಮ್ಮ ಅಂಗಡಿ ಮುಂಭಾಗದಲ್ಲಿ ಜಿಎಸ್‌ಟಿ ಸರ್ಟಿಫಿಕೇಟ್‌ ಪ್ರದರ್ಶಿಸಬೇಕು ಎಂದು ತಿಳಿಸಿದರು. 

Advertisement

200 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಸಿದರೆ ಕಡ್ಡಾಯವಾಗಿ ರಸೀದಿ ಕೋಡಬೇಕು. ಒಂದು ವೇಳೆ 200 ರೂಪಾಯಿಗಿಂತ ಕಡಿಮೆ ವಸ್ತು ಖರೀದಿಸಿದರೆ ಗ್ರಾಹಕರು ಬಿಲ್‌ ಕೇಳಿದರೆ ಕೊಡುವುದಿಲ್ಲ ಎನ್ನುವಂತಿಲ್ಲ. ವಸ್ತುವಿನ ಎಂಆರ್‌ಪಿ ಆದ ಮೇಲೆ ಅದರ ಮೇಲೆ ಜಿಎಸ್‌ಟಿ ಹಾಕಲು ಬರುವುದಿಲ್ಲ. ಜಿಎಸ್‌ಟಿ ಸಂಬಂಧಿತ ದೂರು, ಮಾಹಿತಿಗೆ ಸಹಾಯವಾಣಿ 0120-4888999, 18001200232ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ವಾಣಿಜ್ಯ ತೆರಿಗೆ ಉಪ ಆಯುಕ್ತ ಎಂ ಬಸವಣ್ಣ, ಜಂಟಿ ಆಯುಕ್ತ ಶ್ರೀನಿವಾಸ್‌ ವಿವಿಧ ಇಲಾಖಾ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next