ನವದೆಹಲಿ: ಜಿಎಸ್‌ಟಿಯಡಿ ನೋಂದಣಿಯಾದ ವ್ಯಕ್ತಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ತಾವು ಪಾವತಿಸುವ ಬಾಡಿಗೆಯ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬುದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬಾಡಿಗೆದಾರನು ಶೇ.18 ಜಿಎಸ್‌ಟಿ ಪಾವತಿಸಬೇಕು ಎಂಬ ವರದಿಗಳು ಜನರನ್ನು ತಪ್ಪು ಹಾದಿಗೆ ಎಳೆಯುವಂಥದ್ದು. ಸರ್ಕಾರ ಅಂಥ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಸ್ ಇನ್ಫಾರ್ಮೇಷನ್ ಬ್ಯೂರೋ ಶುಕ್ರವಾರ ಹೇಳಿದೆ.
ಜತೆಗೆ, ವಸತಿ ಕಟ್ಟಡವನ್ನು ವಾಣಿಜ್ಯ ಸಂಸ್ಥೆಗೆ ಬಾಡಿಗೆಗೆ ನೀಡಿದರೆ ಮಾತ್ರವೇ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಖಾಸಗಿ ವ್ಯಕ್ತಿಗೆ ವೈಯಕ್ತಿಕ ಬಳಕೆಗಾಗಿ ಮನೆಯನ್ನು ಬಾಡಿಗೆ ನೀಡಿದ್ದರೆ ಅದಕ್ಕೆ ಯಾವುದೇ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲ, ಯಾವುದಾದರೂ ಸಂಸ್ಥೆಯ ಮಾಲೀಕ ಅಥವಾ ಪಾಲುದಾರ ತನ್ನ ಮನೆಯನ್ನು ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಅದಕ್ಕೂ ಜಿಎಸ್‌ಟಿ ವಿಧಿಸಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:ವ್ಯಾಪಕ ವಿರೋಧ: ವಕ್ಫ್ ಸಲಹಾ ಸಮಿತಿಗೆ ಜಮಾಲ್ ಆಜಾದ್ ನೇಮಕ ಆದೇಶಕ್ಕೆ ಸರಕಾರ ತಡೆ
ಜಿಎಸ್‌ಟಿಯಡಿ ನೋಂದಣಿ ಆಗಿರುವಂಥ ವ್ಯಕ್ತಿಯು ತಾನು ಬಾಡಿಗೆಗಿರುವ ಮನೆಯ ಬಾಡಿಗೆಯ ಜೊತೆಗೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಾಗಿದ್ದು, ಜು.18ರಿಂದಲೇ ಈ ನಿಯಮ ಜಾರಿಗೆ ಬಂದಿದೆ ಎಂದು ಶುಕ್ರವಾರ ಹಲವು ಮಾಧ್ಯಮಗಳು ವರದಿ ಮಾಡಿದ್ದವು.