Advertisement

ಜಿಎಸ್‌ಟಿ: ಮಾರುಕಟ್ಟೆ  ಕೊಂಚ ತಲ್ಲಣ

03:45 AM Jul 02, 2017 | Harsha Rao |

ಮಂಗಳೂರು/ಉಡುಪಿ: ಕೇಂದ್ರ ಸರಕಾರದ ಏಕರೂಪದ ತೆರಿಗೆ ನೀತಿ ಜಿಎಸ್‌ಟಿ ಜಾರಿಯಿಂದ ವ್ಯಾಪಾರ ಉದ್ಯಮದಲ್ಲಿ ಶನಿವಾರ ಕೊಂಚ ತಲ್ಲಣ ಉಂಟಾಗಿದೆ. ತಮ್ಮ ಬಿಲ್ಲಿಂಗ್‌ ವ್ಯವಸ್ಥೆಯನ್ನು ಜಿಎಸ್‌ಟಿಗೆ ಅನ್ವಯಿ ಸುವ ನಿಟ್ಟಿನಲ್ಲಿ ಕೆಲವೊಂದು ಮಳಿಗೆಗಳಲ್ಲಿ ಕೈಬರಹದ ಬಿಲ್‌ ನೀಡಿದರೆ, ಇನ್ನು ಕೆಲವು ಮಳಿಗೆಗಳು ಶನಿವಾರ ವ್ಯವಹಾರ ಸ್ಥಗಿತಗೊಳಿಸಿದ್ದವು.

Advertisement

ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್‌ಟಿಯಿಂದ ಯಾವುದೇ ತೊಂದರೆ ಉಂಟಾಗಲಿಲ್ಲ; ವ್ಯವಹಾರ ಎಂದಿನಂತೆ ಸರಾಗವಾಗಿತ್ತು. ಚಿನ್ನದ ತೆರಿಗೆ ಕೊಂಚ ಏರಿಕೆಯಾದ ಹಿನ್ನೆಲೆಯಲ್ಲಿ ವ್ಯವಹಾರ ಇಳಿಕೆಯಾಗಿತ್ತು. ಮುಂದಿನ 2 ವಾರಗಳ ಕಾಲ ವ್ಯಾಪಾರ ಹೀಗೆ ಕಡಿಮೆ ಇರಬಹುದು ಎಂದು ಚಿನ್ನ ವರ್ತಕರು ಅಭಿಪ್ರಾಯಿಸುತ್ತಾರೆ. ಜನರಿಗೆ ಜಾಗೃತಿಯ ಕೊರತೆಯಿಂದ ವ್ಯಾಪಾರ ಕಡಿಮೆಯಾಗಿದೆ ಎಂದು ಉಡುಪಿ ಚಿನ್ನದ ವರ್ತಕರು ಹೇಳಿದ್ದಾರೆ.

ಸಣ್ಣ ಹೊಟೇಲ್‌ಗ‌ಳಲ್ಲಿ ಸದ್ಯಕ್ಕೆ ಯಾವುದೇ ದರ ವ್ಯತ್ಯಾಸವಾಗದಿದ್ದರೂ ದೊಡ್ಡ ಹೊಟೇಲ್‌ಗ‌ಳಲ್ಲಿ ಜಿಎಸ್‌ಟಿಯನ್ವಯ ಬೆಲೆ ಏರಿಕೆಯಾಗಿತ್ತು. ಜಿಎಸ್‌ಟಿಯನ್ವಯ ಒಂದೊಂದು ಉತ್ಪನ್ನಗಳಿಗೆ ಬೇರೆ ಬೇರೆ ರೀತಿಯ ತೆರಿಗೆ ಬೀಳುವ ಹಿನ್ನೆಲೆಯಲ್ಲಿ ಪ್ರತಿ ವಿಧದ ತೆರಿಗೆಗಳಿಗೆ ಒಂದೊಂದು ಕೋಡ್‌ ನೀಡಲಾಗಿದೆ. ಅದನ್ನು ಉತ್ಪನ್ನಗಳಿಗೆ ಅನ್ವಯಿಸುವ ಹಿನ್ನೆಲೆಯಲ್ಲಿ ಕೆಲ ವೊಂದು ಮಳಿಗೆಗಳು ಶನಿವಾರ ವ್ಯಾಪಾರ ನಡೆಸಲಿಲ್ಲ.

ಉಡುಪಿ ಕಿದಿಯೂರು ಹೊಟೇಲ್‌ನಲ್ಲಿ ನಾನ್‌ಎಸಿ ರೂಮಿನ ದರ 1,230ರಿಂದ 1,175 ರೂ.ಗೆ, ಎಸಿ ರೂಮಿನ ದರ 3,000ದಿಂದ 2,770 ರೂ.ಗೆ ಇಳಿದಿದೆ. “ಹಿಂದೆ ವಿವಿಧ ತೆರಿಗೆಯನುಸಾರ ಶೇ. 24 ಕಟ್ಟಬೇಕಿತ್ತು. ಈಗ ಶೇ. 18 ಕಟ್ಟಿದರೆ ಸಾಕು. ಹೀಗಾಗಿ ದರ ಕಡಿಮೆಯಾಗಿದೆ’ ಎಂದು ಮಾಲಕ ಭುವನೇಂದ್ರ ಕಿದಿಯೂರು ಹೇಳಿದ್ದಾರೆ.

ಚಿತ್ರ ಮಂದಿರಗಳಲ್ಲಿ ಮಾತ್ರ ಟಿಕೆಟ್‌ ದರ ಏರಿಕೆಯಾಗಿದೆ. ಇದರಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಹೊಡೆತ ಎಂದು ಉಡುಪಿ ಚಿತ್ರಮಂದಿರದ ಮೂಲಗಳು ತಿಳಿಸಿವೆ. ಮೆಡಿಕಲ್‌ ಶಾಪ್‌ಗ್ಳಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. 

Advertisement

ಈ ರೀತಿಯಲ್ಲಿ ನಗರದ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಕೊಂಚ ಮಟ್ಟಿನ ತಲ್ಲಣ ಉಂಟಾಗಿತ್ತು. ಆದರೆ ಜಿಎಸ್‌ಟ್‌ಯಿಂದ ಉದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಿಲ್ಲ. ಹೊಸ ಪದ್ಧತಿಗೆ ಜನರು ಪೂರ್ಣ ಪ್ರಮಾಣದಲ್ಲಿ ಒಗ್ಗಿಕೊಳ್ಳಬೇಕಾದರೆ ಇನ್ನೊಂದಷ್ಟು ಸಮಯ ಕಾಯಬೇಕಾಗುತ್ತದೆ. ಕೆಳ ಹಾಗೂ ಮಧ್ಯಮ ಸ್ತರದ ಜನರಿಗೆ ಜಿಎಸ್‌ಟಿಯಿಂದ ಅನುಕೂಲವಾಗಲಿದೆ ಎಂದು ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಿಸಿದ್ದಾರೆ.

ತಡರಾತ್ರಿ ವ್ಯವಹಾರ ನಡೆಸಿದ ಮಾಲ್‌ಗ‌ಳು
ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗಿದ್ದರೂ ಅದು ಜಿಎಸ್‌ಟಿಯಿಂದ ಅಲ್ಲ ಎಂದು ಹೇಳಲಾಗುತ್ತಿದೆ. ಉಡುಪಿಯಲ್ಲಿ ಜೂ. 16ರಂದು ಪೆಟ್ರೋಲ್‌ ದರ 69.63 ರೂ.ನಿಂದ ಜೂ. 30ಕ್ಕೆ 63.34 ರೂ.ಗೆ, ಡೀಸೆಲ್‌ ದರ 57.79 ರೂ.ನಿಂದ 53.91 ರೂ.ಗೆ ಇಳಿಕೆಯಾಗಿದೆ. ಆದರೆ ಆಯಿಲ್‌ ದರ ಏರಿಕೆಯಾಗಿದೆ. ಶುಕ್ರವಾರ ತಡರಾತ್ರಿಯ ವರೆಗೂ ಆಫರ್‌ಗಳನ್ನು ನೀಡಿದ್ದ ಮಾಲ್‌ಗ‌ಳಲ್ಲಿ ಶನಿವಾರ ಆಫರ್‌ಗಳು ಇರಲಿಲ್ಲ. ವ್ಯಾಪಾರದಲ್ಲಿ ಕೊಂಚ ವ್ಯತ್ಯಾಸವಾಗಿದ್ದರೂ ಜನಸಂದಣಿಯಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಜನರು ಎಂದಿನಂತೆ ಬರುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಉಡುಪಿ ಬಿಗ್‌ ಬಜಾರ್‌ನಲ್ಲಿ ಜೂ. 30 ಮಧ್ಯರಾತ್ರಿ ಬಳಿಕ ನಡೆದ ಎರಡು ಗಂಟೆಗಳ ವ್ಯಾಪಾರದಲ್ಲಿ 800 ಗ್ರಾಹಕರು ವ್ಯವಹಾರ ನಡೆಸಿದರು. ಜು. 1ರಂದೂ ಜನರು ವ್ಯಾಪಾರ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next