Advertisement

ಜಿಎಸ್‌ಟಿ ಹೊರೆ: ರೈತ ಉತ್ಪಾದಕ ಸಂಘಗಳಿಗೆ ಬರೆ

11:28 PM Aug 07, 2022 | Team Udayavani |

ಬೆಂಗಳೂರು: ಕೇಂದ್ರ ವಿಧಿಸಿದ ಹೊಸ ತೆರಿಗೆ ಹೊರೆಯು ಸ್ವಂತ ಬ್ರ್ಯಾಂಡ್‌ ಮೂಲಕ ನೇರ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಸಾವಿರಾರು ರೈತರ ಆದಾಯಕ್ಕೆ ಕತ್ತರಿ ಹಾಕುತ್ತಿದೆ.

Advertisement

25 ಕೆ.ಜಿ. ಒಳಗಿನ ಬೆಲ್ಲ ಸಹಿತ ಬ್ರ್ಯಾಂಡಿಂಗ್‌ ಮಾಡಿದ ಯಾವುದೇ ಆಹಾರ ಧಾನ್ಯಗಳಿಗೆ ಶೇ.5 ತೆರಿಗೆ ವಿಧಿಸಲು ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯ ಮಂಡಳಿಯಲ್ಲಿ ತೀರ್ಮಾನ ಕೈಗೊಂಡಿದ್ದು, ಜುಲೈ 17ರಿಂದ ಜಾರಿಯಾಗಿದೆ. ಆದರೆ, ರೈತ ಉತ್ಪಾದಕ ಸಂಘ (ಎಫ್ ಪಿಒ)ಗಳು ಅಥವಾ ರೈತರ ಸಹಕಾರ ಸಂಘಗಳು ಅಥವಾ ವೈಯಕ್ತಿಕವಾಗಿ ರೈತರು ಮಧ್ಯವರ್ತಿಗಳ ಹಾವಳಿ ತಪ್ಪಿಸಿಕೊಳ್ಳಲು ನೇರ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಸ್ವಂತ ಬ್ರ್ಯಾಂಡ್‌ಗಳನ್ನು ಮಾಡಿಕೊಂಡು ಗ್ರಾಹಕರನ್ನು ತಲುಪುತ್ತಿದ್ದಾರೆ. ಅವರೆಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತಮ್ಮ ಉತ್ಪನ್ನಗಳನ್ನು ಬ್ರ್ಯಾಂಡಿಂಗ್‌ ಮಾಡಿ ಮಾರಾಟ ಮಾಡುತ್ತಿರುವ ಎಫ್ಪಿಒಗಳು 25ಕ್ಕೂ ಅಧಿಕ ಇವೆ. ಒಂದೊಂದು ಎಫ್ ಪಿಒನಲ್ಲಿ ಕನಿಷ್ಠ 600ರಿಂದ ಸಾವಿರದಷ್ಟು ರೈತರಿದ್ದಾರೆ. ಜೋಳ, ರಾಗಿ, ಸಜ್ಜೆ, ಕಡಲೆ ಹೀಗೆ ಹತ್ತಾರು ಪ್ರಕಾರದ ಆಹಾರಧಾನ್ಯಗಳ ಮಾರಾಟ ಮಾಡುತ್ತಿದ್ದಾರೆ

ಮೋರ್‌, ಡಿ-ಮಾರ್ಟ್‌, ಬಿಗ್‌ ಬಾಸ್ಕೆಟ್‌ ಮುಂತಾದ ಪ್ರಮುಖ ಕಂಪೆನಿಗಳೊಂದಿಗೆ ಅನೇಕ ಎಫ್ಪಿಒಗಳು ಒಪ್ಪಂದ ಮಾಡಿಕೊಂಡಿವೆ. ರಾಜ್ಯದಲ್ಲಿ ಅಧಿಕೃತವಾಗಿಯೇ ಸುಮಾರು 1,092 ಎಫ್ಪಿಒಗಳು ನೋಂದಣಿಯಾಗಿವೆ. ಈ ಪೈಕಿ ಸಿರಿಧಾನ್ಯಗಳು ಸೇರಿ ವಿವಿಧ ಪ್ರಕಾರದ ಧಾನ್ಯಗಳಿಗೆ ಸಂಬಂಧಿಸಿದ ರೈತರ ಸಂಘಗಳೇ 500ಕ್ಕೂ ಅಧಿಕ ಇವೆ ಎಂದು ಎಫ್ ಪಿಒ ನೋಡಲ್‌ ಏಜೆನ್ಸಿ ಯಾದ ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಆಹಾರಧಾನ್ಯಗಳಿಗೆ ಸಂಬಂಧಿಸಿದ ಎಫ್ ಪಿಒಗಳು ಸಗಟು ರೂಪದಲ್ಲಿ ವಿವಿಧ ಕಂಪೆನಿಗಳಿಗೆ ನೇರವಾಗಿ ಮಾರಾಟ ಮಾಡುತ್ತವೆ. ಅಲ್ಲದೆ, ತಾವೇ ಪ್ಯಾಕ್‌ ಮಾಡಿ ದೊಡ್ಡ ಮಾಲ್‌ಗ‌ಳು, ಮಳಿಗೆಗಳಿಗೆ ಪೂರೈಸುವುದರ ಜತೆಗೆ ಹಲವು ಕಂಪೆನಿಗಳು ರಫ್ತು ಕೂಡ ಮಾಡುತ್ತವೆ. ಅಮೃತ ಯೋಜನೆ ಅಡಿ ಯಲ್ಲೇ ರಾಜ್ಯದಲ್ಲಿ 75 ಎಫ್ ಪಿಒಗಳು ವಾರ್ಷಿಕ 1 ಕೋಟಿ ರೂ. ವಹಿವಾಟು ಮಾಡುತ್ತವೆ’ ಎಂದು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ| ಎಂ.ವಿ. ವೆಂಕಟೇಶ್‌ ತಿಳಿಸುತ್ತಾರೆ.

Advertisement

ಲಾಭಾಂಶ ಖೋತಾ
ನಮ್ಮ ಎಫ್ ಪಿಒದಲ್ಲಿ 3 ಸಾವಿರಕ್ಕೂ ಅಧಿಕ ರೈತರು ಸದಸ್ಯರಿದ್ದಾರೆ. ಅವರಿಂದ ಖರೀದಿಸಿದ ಉತ್ಪನ್ನಗಳನ್ನು ಪ್ಯಾಕ್‌ ಮಾಡಿ ರಾಜ್ಯದ ವಿವಿಧೆಡೆ ಸರಬರಾಜು ಮಾಡಲಾಗುತ್ತದೆ. ವಾರ್ಷಿಕ 50 ಲಕ್ಷ ರೂ. ವಹಿವಾಟು ಆಗುತ್ತದೆ. ಬಂದ ಲಾಭಾಂಶದಲ್ಲಿ ಎಲ್ಲರಿಗೂ ಸಮಾನ ಹಂಚಿಕೆ ಆಗುತ್ತಿದೆ. ಈಗ ಪ್ರತಿ ಪ್ಯಾಕೆಟ್‌ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿದ್ದರಿಂದ ತುಸು ಸಗಟು ರೂಪದ ಪ್ಯಾಕೆಟ್‌ಗಳಿಗೂ ಹೊರೆ ಬೀಳುತ್ತಿದೆ. ಇದರಿಂದ ಲಾಭ ಕಡಿಮೆ ಆಗುತ್ತಿದೆ. ಈಗ 25 ಕೆ.ಜಿ. ಪ್ಯಾಕೆಟ್‌ ಅನ್ನು 26 ಕೆ.ಜಿ.ಗೆ ಹೆಚ್ಚಿಸಿ ನೀಡುತ್ತಿದ್ದೇವೆ’ ಎಂದು ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ. ಕೃಪ ತಿಳಿಸುತ್ತಾರೆ.

ಸರಕಾರ ಒಂದೆಡೆ ಎಫ್ ಪಿಒಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಹಾಗೂ ನೇರ ಮಾರುಕಟ್ಟೆಗೆ ಹಲವು ಯೋಜನೆಗಳನ್ನೂ ಪರಿಚಯಿಸುತ್ತಿರುವುದಾಗಿ ಹೇಳುತ್ತದೆ. ಮತ್ತೂಂದೆಡೆ ತೆರಿಗೆ ಮೂಲಕ ಅದೇ ಎಫ್ ಪಿಒಗಳ ಮೇಲೆ ಬರೆ ಎಳೆಯುತ್ತಿರುವುದು ಸರಿಯಲ್ಲ ಎಂದು ಅವರು ಹೇಳುತ್ತಾರೆ.

– ವಿಜಯಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next