Advertisement

GST; ಜೀವವಿಮೆ, ಆರೋಗ್ಯ ವಿಮೆಯ ಜಿಎಸ್‌ಟಿ ಭಾರ ಇಳಿಯಲಿ

01:28 AM Aug 02, 2024 | Team Udayavani |

ಆರೋಗ್ಯ ಮತ್ತು ಜೀವವಿಮೆಗಳ ಮೇಲೆ ವಿಧಿಸಲಾಗುತ್ತಿರುವ ಶೇ. 18 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಮನವಿ ಮಾಡಿ ಕೊಳ್ಳುವ ಮೂಲಕ ಜನಪರ ವಿಷಯವೊಂದನ್ನು ಮುನ್ನೆಲೆಗೆ ತಂದಿದ್ದಾರೆ. ಸಚಿವ ಗಡ್ಕರಿಯವರ ಮನವಿಯು ಆಗ್ರಹವಾಗುವುದಕ್ಕೆ ಯೋಗ್ಯವಾದುದು ಹಾಗೂ ಅದನ್ನು ಮನ್ನಿಸಿ ವಿತ್ತ ಸಚಿವೆ ಮತ್ತು ಸಂಬಂಧಪಟ್ಟವರು ಜೀವವಿಮೆ ಮತ್ತು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ರದ್ದು ಪಡಿಸುವುದು ಅಥವಾ ಸಂಪೂರ್ಣ ರದ್ದತಿಗೆ ಮುಂಚಿನ ಕ್ರಮವಾಗಿ ಅವನ್ನು ಕನಿಷ್ಠ ಜಿಎಸ್‌ಟಿ ಸ್ಲಾéಬ್‌ಗ ವರ್ಗಾಯಿಸುವುದು ಅಗತ್ಯ.

Advertisement

ತಮ್ಮ ಸ್ವಕ್ಷೇತ್ರ ನಾಗಪುರದ ಪ್ರಾದೇಶಿಕ ಜೀವವಿಮಾ ನಿಗಮದ ಉದ್ಯೋಗಿಗಳ ಒಕ್ಕೂಟದ ಪರವಾಗಿ ಸಚಿವ ನಿತಿನ್‌ ಗಡ್ಕರಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದು ಈ ಮನವಿಯನ್ನು ಮಾಡಿಕೊಂಡಿದ್ದಾರೆ. ಅದರಲ್ಲೂ ಜೀವವಿಮೆಯ ಕಂತಿನ ಮೇಲೆ ತೆರಿಗೆ ವಿಧಿಸುವುದು ಎಂದರೆ ಅದು “ಜೀವನದ ಅನಿಶ್ಚಿತತೆಯ ಮೇಲೆ ತೆರಿಗೆ ವಿಧಿಸಿದಂತೆ’ ಎಂದು ಗಮನ ಸೆಳೆದಿದ್ದಾರೆ.

“ಜೀವವಿಮೆ ಮಾಡಿಸಿಕೊಳ್ಳುವ ವ್ಯಕ್ತಿಯು ತನ್ನ ಜೀವನದ ಅನಿಶ್ಚಿತತೆಗಳ ವಿರುದ್ಧ ಕುಟುಂಬಕ್ಕೆ ರಕ್ಷೆಯಾಗಿ ಜೀವವಿಮೆ ಮಾಡಿಸಿಕೊಳ್ಳುತ್ತಾರೆ. ಇದರ ಪ್ರೀಮಿಯಂ ಮೇಲೆ ತೆರಿಗೆ ಹಾಕುವುದು ಸರಿಯಾದ ಕ್ರಮವಲ್ಲ. ಹಾಗೆಯೇ ಆರೋಗ್ಯ ವಿಮೆ ಒಂದು ಸಾಮಾಜಿಕ ಅಗತ್ಯವಾಗಿದ್ದು, ಅದರ ಪ್ರೀಮಿಯಂ ಮೇಲೆ ಶೇ. 18 ಜಿಎಸ್‌ಟಿ ವಿಧಿಸುವುದು ಈ ಸೇವಾ ಉದ್ಯಮದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ನಿತಿನ್‌ ಗಡ್ಕರಿಯವರು ವಿತ್ತ ಸಚಿವೆಯ ಗಮನ ಸೆಳೆದಿದ್ದಾರೆ.

ಸದ್ಯದ ಮಟ್ಟಿಗೆ ಸಾಮಾಜಿಕ ಭದ್ರತೆ ಮತ್ತು ಸರಕಾರಿ ಆರೋಗ್ಯ ಮೂಲಸೌಕರ್ಯವು ಎಲ್ಲರನ್ನೂ ಒಳಗೊಂಡಿಲ್ಲದ ಭಾರತದಂತಹ ದೇಶದಲ್ಲಿ ಆರೋಗ್ಯ ಮತ್ತು ಜೀವವಿಮೆಗಳ ಮೇಲೆ ಶೇ. 18ರಷ್ಟು ಜಿಎಸ್‌ಟಿ ವಿಧಿಸುವುದು ಈ ಎರಡು ಆವಶ್ಯಕ ವಿಷಯಗಳನ್ನು ಎಲ್ಲರ ಕೈಗೆಟಕುವಂತೆ ಮಾಡುವ ಅಥವಾ ಎಲ್ಲ ನಾಗರಿಕರನ್ನು ಸಾಮಾಜಿಕ ಭದ್ರತೆ ಮತ್ತು ಸರಕಾರಿ ಆರೋಗ್ಯ ಸೇವೆ, ಆರೋಗ್ಯ ವಿಮೆಯಡಿ ತರುವ ಸದುದ್ದೇಶಕ್ಕೆ ಭಂಗ ಉಂಟು ಮಾಡುವಂಥದ್ದಾಗಿದೆ ಎಂದರೆ ತಪ್ಪಲ್ಲ. ಸರಕು ಮತ್ತು ಸೇವಾ ತೆರಿಗೆಯು 2017ರ ಜುಲೈ 1ರಿಂದ ಜಾರಿಗೆ ಬಂದಿದೆ. ಇದಾಗಿ ಹಲವು ವರ್ಷಗಳು ಸಂದಿವೆಯಾದರೂ ಜಿಎಸ್‌ಟಿ ದರಗಳನ್ನು ಪರಿಷ್ಕರಿಸುವ ವಿಷಯದಲ್ಲಿ ದೊಡ್ಡ ಮಟ್ಟಿಗಿನ ಮುನ್ನಡೆ ಆಗಿಲ್ಲ. ಹಾಗೆ ನೋಡಿದರೆ ನಿತಿನ್‌ ಗಡ್ಕರಿಯವರು ಮಾತ್ರವೇ ಅಲ್ಲ; ಜಯಂತ್‌ ಸಿನ್ಹಾ ನೇತೃತ್ವದ ವಿತ್ತೀಯ ಸ್ಥಾಯಿ ಸಮಿತಿಯು ಕೂಡ ಇನ್ಶೂರೆನ್ಸ್‌ ಉತ್ಪನ್ನಗಳು ಅದರಲ್ಲೂ ವಿಶೇಷವಾಗಿ ಅವಧಿ ಮತ್ತು ಆರೋಗ್ಯ ವಿಮಾ ಪ್ರೀಮಿಯಂಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಬೇಕು ಎಂಬುದಾಗಿ ಶಿಫಾರಸು ಮಾಡಿದೆ. ಈ ಅಂಶಗಳನ್ನು ಸರಕಾರ ಪರಿಗಣಿಸಬೇಕು.

ಆರೋಗ್ಯ ವಿಮೆ ಮತ್ತು ಜೀವವಿಮೆ ದೇಶದ ನಾಗರಿಕರ ಹಿತರಕ್ಷಣೆಗಾಗಿ ಹೆಚ್ಚು ವ್ಯಾಪಕವಾಗಿ ಬಳಕೆಗೆ ಬರಬೇಕಾದಂಥವು. ಅವುಗಳಿಗೂ ಜಿಎಸ್‌ಟಿ ವಿಧಿಸಿದರೆ ಅದು ಸಹಜವಾಗಿ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಿ ಬಳಕೆದಾರನ ಕೈಗೆಟುಕದಂತಾಗುತ್ತವೆ, ವಿಮೆ ಮಾಡಿಸಿಕೊಳ್ಳುವವರು ಹಿಂಜರಿಯುವಂ­ತಾಗುತ್ತದೆ ಎಂಬುದು ನಿತಿನ್‌ ಗಡ್ಕರಿಯವರ ಮನವಿಯ ತಾತ್ಪರ್ಯ.

Advertisement

ವಿತ್ತ ಸಚಿವೆ ಈ ಮನವಿಯನ್ನು ಮನ್ನಿಸಿದರೆ ಎಲ್ಲರೂ ಫ‌ಲಾನುಭವ ಪಡೆಯಬೇಕಾಗಿರುವಂತಹ ಈ ಎರಡು ವಿಮೆಗಳ ಭಾರ ಕೊಂಚ ಕಡಿಮೆ ಯಾಗಬಹುದು. ಹಾಗಾಗಲಿ ಎನ್ನುವುದು ಸದಾಶಯ.

Advertisement

Udayavani is now on Telegram. Click here to join our channel and stay updated with the latest news.

Next