ಹೊಸದಿಲ್ಲಿ: ದೇಶವೇ ಕಾತರದಿಂದ ಕಾಯುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಶುಕ್ರವಾರ ರಾತ್ರಿ 12 ಗಂಟೆಗೆ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಸಹಿತ ಹಲವು ಸಚಿವರು, ಮುಖ್ಯಮಂತ್ರಿಗಳು, ನಾಯಕರು ಉಪ ಸ್ಥಿತರಿರಲಿದ್ದಾರೆ. ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರಿಗೂ ಮುಖ್ಯ ಅತಿಥಿಯಾಗಿ ಬರಲು ಆಹ್ವಾನ ಹೋಗಿದ್ದು, ಇವರು ಪಾಲ್ಗೊಳ್ಳುವುದು ಅನುಮಾನ ಎಂದೇ ಹೇಳಲಾಗಿದೆ.
ಈ ನಡುವೆ ಮಧ್ಯರಾತ್ರಿಯ ಸೆಷನ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಗುರುವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಚರ್ಚಿಸಿದ ಅನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಪಕ್ಷದ ವತಿಯಿಂದ ಯಾರೂ ಪಾಲ್ಗೊಳ್ಳುವುದಿಲ್ಲ ಎಂದು ವಕ್ತಾರ ಸತ್ಯವ್ರತ ಚತುರ್ವೇದಿ ಹೇಳಿದ್ದಾರೆ. ಅಲ್ಲದೆ ಪಕ್ಷದ ಯಾರೂ ಭಾಗವಹಿಸಬಾರದು ಎಂದು ಹೇಳಿರುವ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರೂ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿದೆ.
ಮಧ್ಯರಾತ್ರಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಕುರಿತಂತೆ ಕಾಂಗ್ರೆಸ್‌ನಲ್ಲೇ ಗೊಂದಲಗಳು ಏರ್ಪಟ್ಟಿದ್ದವು. ಕೆಲವು ನಾಯಕರು ಸಮಾರಂಭದಲ್ಲಿ ಭಾಗಿಯಾಗುವುದೇ ಸೂಕ್ತ ಎಂದು ಹೇಳಿದ್ದರೆ ಇನ್ನು ಕೆಲವರು ಜಿಎಸ್‌ಟಿಯಿಂದ ಸಣ್ಣ ವರ್ತಕರು ಹಾಗೂ ಉದ್ದಿಮೆದಾರರಿಗೆ ಅನನುಕೂಲವಾಗುವುದರಿಂದ ಪಾಲ್ಗೊಳ್ಳುವುದು ಬೇಡ ಎಂಬ ಹೇಳಿದ್ದರು.
ಈ ಸಮಾರಂಭಕ್ಕೆ ಕಾಂಗ್ರೆಸ್ ಗೈರಾಗುವುದರ ಹಿಂದೆ ಬೇರೆಯೇ ಕಾರಣವಿದೆ ಎಂದು ಹೇಳಲಾಗಿದೆ. ಸ್ವಾತಂತ್ರ್ಯ ಬಂದಾಗ ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಸಂಸತ್‌ನ ಮಧ್ಯರಾತ್ರಿ ಕಲಾಪದಲ್ಲಿ ಭಾಷಣ ಮಾಡಿದ್ದರು. ಈಗ ಮೋದಿ ಅವರು ನೆಹರೂ ಅವರ ಈ ಮಧ್ಯರಾತ್ರಿ ಭಾಷಣವನ್ನೇ ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತಿರುವುದರಿಂದ ಭಾಗಿಯಾಗುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸಿಪಿಎಂ ಕೂಡ ಗೈರು: ಸಮಾರಂಭದಲ್ಲಿ ಭಾಗಿಯಾಗಲ್ಲ ಎಂದು ಈಗಾಗಲೇ ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ಹೇಳಿದೆ. ಇದರ ಜತೆಗೆ ಎಡಪಕ್ಷಗಳು ಕೂಡ ಹೋಗದಿರಲು ನಿರ್ಧರಿಸಿವೆ. ಇದರ ಜತೆಗೆ ಎಸ್ಪಿ, ಬಿಎಸ್ಪಿ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಉಳಿದ ಪಕ್ಷಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಜೇಟ್ಲಿ ಮನವಿ: ಈ ನಡುವೆ ಜಿಎಸ್‌ಟಿ ಜಾರಿ ಸಮಾರಂಭಕ್ಕೆ ಗೈರಾಗಲು ನಿರ್ಧರಿಸಿರುವ ವಿಪಕ್ಷಗಳ ಮನವೊಲಿಕೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಯತ್ನಿಸಿದ್ದಾರೆ. 70 ವರ್ಷಗಳ ನಂತರ ದೇಶದಲ್ಲಿ ತೆರಿಗೆ ವ್ಯವಸ್ಥೆ ಸುಧಾರಣೆಯಾಗುತ್ತಿದೆ. ಇಂಥ ಐತಿಹಾಸಿಕ ಸನ್ನಿವೇಶದಲ್ಲಿ ಎಲ್ಲರೂ ಭಾಗಿಯಾಗುವುದು ಸೂಕ್ತ ಎಂದು ಹೇಳಿದ್ದಾರೆ.
ಮೋದಿ ಹೊಗಳಿದ ಪ್ರಣವ್
ಜಿಎಸ್‌ಟಿ ಜಾರಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಇದಕ್ಕೆ ಕಾರಣರಾದ ಎನ್‌ಡಿಎ ಸರಕಾರ, ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಶ್ಲಾಘಿಸಿದ್ದಾರೆ. ನಾಳೆಯಿಂದ ದೇಶ ಹೊಸ ತೆರಿಗೆ ವ್ಯವಸ್ಥೆಗೆ ಸಿದ್ಧವಾಗುತ್ತಿದೆ.
ಇಂಥ ಸನ್ನಿವೇಶದಲ್ಲಿ ಸಾಕಷ್ಟು ಶ್ರಮದ ಮೂಲಕ ಜಿಎಸ್‌ಟಿ ಸಾಕಾರ ಮಾಡಿದ ಎನ್‌ಡಿಎ ಸರಕಾರಕ್ಕೆ ಅಭಿನಂದನೆ ಹೇಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ತಾವು ಹಣಕಾಸು ಸಚಿವರಾಗಿದ್ದ ವೇಳೆ ಇದನ್ನು ಜಾರಿ ಮಾಡಲಾಗಲಿಲ್ಲವಲ್ಲ ಎಂದೂ ವಿಷಾದಿಸಿದ್ದಾರೆ.