Advertisement

ಜಿಎಸ್‌ಟಿ ಗೊಂದಲ ನಿವಾರಣೆಗೆ ಆಗ್ರಹ

06:25 AM Aug 20, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಜಾರಿಯಾಗಿ ಒಂದೂವರೆ ತಿಂಗಳು ಕಳೆದರೂ ಗೊಂದಲಗಳು ನಿವಾರಣೆಯಾಗದ ಕಾರಣ ಬೇಸರಗೊಂಡಿರುವ ವ್ಯಾಪಾರ-ವಹಿವಾಟುದಾರರು ಒಂದಿಷ್ಟು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಮಾಡಲು ಆರಂಭಿಸಿದ್ದಾರೆ.

Advertisement

ಹಳೆಯ ದಾಸ್ತಾನಿನ ಮೇಲಿನ ಹೂಡುವಳಿ ತೆರಿಗೆ ಜುಲೈ ತಿಂಗಳ ಹುಟ್ಟುವಳಿ ತೆರಿಗೆಯಲ್ಲಿ ಕಡಿತ ಮಾಡಿಕೊಳ್ಳಲು, ರಾಜಿ ತೆರಿಗೆ ವ್ಯವಸ್ಥೆಯ ಸೌಲಭ್ಯ ಸಿಗದಿರುವ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾರಂಭಿಸಿದ್ದಾರೆ. ಹಾಗೆಯೇ ಜುಲೈ ತಿಂಗಳಿನ ವಹಿವಾಟಿನ ಲೆಕ್ಕದ ವಿವರ ಸಲ್ಲಿಸಲು ಹಾಗೂ ತೆರಿಗೆ ಪಾವತಿಸಲು ಆ.25 ಕಡೆಯ ದಿನವಾಗಿದ್ದು, ಇದಕ್ಕೆ ಪೂರಕವಾದ ವಿಶ್ವಾಸಾರ್ಹ ಸಾಫ್ಟ್ವೇರ್ ಅಭಿವೃದ್ಧಿಪಡಿಸುವಂತೆಯೂ ಪತ್ರ ಹಾಗೂ ಇ-ಮೇಲ್‌ ರವಾನಿಸಲಾರಂಭಿಸಿದ್ದಾರೆ.

ಆರಂಭದಲ್ಲಿ ಕಂಡುಬಂದ ದೋಷ, ಗೊಂದಲಗಳ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡುವ ಮೂಲಕ ಸ್ಪಂದಿಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಗೊಂದಲಗಳು ಕಡಿಮೆಯಾಗುವ ಬದಲಿಗೆ ಏರಿಕೆಯಾಗುತ್ತಿದ್ದು, ಸ್ಪಷ್ಟ ಮಾಹಿತಿಯಿಲ್ಲದೆ ವ್ಯಾಪಾರ- ವಹಿವಾಟುದಾರರು ಗೊಂದಲದಿಂದ ಪರದಾಡುವಂತಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದಾಗಲಿ, ತಜ್ಞರಿಂದಾಗಲಿ, ಕೇಂದ್ರ ಸರ್ಕಾರದ ಜಿಎಸ್‌ಟಿ ನೆಟ್‌ ವರ್ಕ್‌ ಸಂಸ್ಥೆಯಿಂದಾಗಲಿ ಸ್ಪಷ್ಟತೆ ಸಿಗುತ್ತಿಲ್ಲ. ಇದರಿಂದ ರಿಟರ್ನ್ ಸಲ್ಲಿಕೆಗೆ ನೀಡಿರುವ ಗಡುವು ಅವಧಿ ಸಮೀಪಿಸುತ್ತಿದ್ದರೂ ಗೊಂದಲಗಳಿಂದ ವ್ಯವಹಾರ ನಡೆಸುವುದು ಕಷ್ಟಕರವಾಗಿದೆ ಎಂದು ಡೀಲರ್‌ಗಳು ದೂರಲಾರಂಭಿಸಿದ್ದಾರೆ.

ಪ್ರಮುಖ ದೂರು: ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಿದ್ದು, ಜೂನ್‌ 30ರವರೆಗೆ ಡೀಲರ್‌ ಗಳು, ಮಾರಾಟಗಾರರ ಬಳಿಯಿದ್ದ ಹಳೆಯ ದಾಸ್ತಾನಿನ ಮೇಲಿನ ಹೂಡುವಳಿ ತೆರಿಗೆಯನ್ನು ಹಿಂದಿರುಗಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಆದರೆ ಒಂದೂವರೆ ತಿಂಗಳು ಕಳೆದರೂ ಮರು ಪಾವತಿಗೆ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ ಜುಲೈನಲ್ಲಿ ನಡೆಸಿದ ವಹಿವಾಟಿಗೆ ಸಂಬಂಧಪಟ್ಟಂತೆ ಪಾವತಿಸಬೇಕಿರುವ ತೆರಿಗೆ ಮೊತ್ತದಲ್ಲಿ ಹೂಡುವಳಿ ತೆರಿಗೆ ಮೊತ್ತ ಕಡಿತ ಮಾಡಿಕೊಳ್ಳಲು ಅವಕಾಶ ಕಲ್ಪಿಸದ ಕಾರಣ ಗೊಂದಲ ಮುಂದುವರಿದಿದೆ.

Advertisement

ಇನ್ನು ರಾಜಿ ತೆರಿಗೆ ವ್ಯವಸ್ಥೆಯಡಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲೂ ಕೆಲ ಗೊಂದಲಗಳಿವೆ. ರಾಜಿ ತೆರಿಗೆ ವ್ಯಾಪ್ತಿಗೆ ಒಳಪಡುವವರು ಅದರಂತೆ ನೋಂದಾಯಿಸಲು ಸಾಧ್ಯವಾಗದ ಕಾರಣ ಗೊಂದಲಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸೂಕ್ತ ಸ್ಪಂದನೆ ಸಿಗದಿರುವುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಜತೆಗೆ ರಿಟರ್ನ್ಸ್ ಸಲ್ಲಿಕೆಗೆ ಈವರೆಗೆ ಸಾಫ್ಟ್ವೇರ್‌ ಸಿದ್ಧವಾಗದ ಕಾರಣ ಮಾರಾಟಗಾರರು, ಡೀಲರ್‌ಗಳು, ಉತ್ಪಾದಕರು, ಸಗಟುದಾರರು ಸಾಫ್ಟ್ವೇರ್‌ ಬಿಡುಗಡೆಯ ನಿರೀಕ್ಷೆಯಲ್ಲೇ ದಿನ ಕಳೆಯುವಂತಾಗಿದೆ.

ಪ್ರಮುಖ ಒತ್ತಾಯ: ಜಿಎಸ್‌ಟಿ ವ್ಯವಸ್ಥೆಯಲ್ಲಿನ ಗೊಂದಲಗಳನ್ನು ತ್ವರಿತವಾಗಿ ನಿವಾರಿಸಿ ಸ್ಪಷ್ಪತೆ ಮೂಡಿಸಬೇಕು. ಜತೆಗೆ ಹೊಸ ವ್ಯವಸ್ಥೆಯಡಿ ವ್ಯವಹರಿಸುವಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ನಿವಾರಿಸಬೇಕು. ಜುಲೈ ವಹಿವಾಟಿನ ವಿವರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಗಳಿದ್ದು, ಅವುಗಳನ್ನು ಬಗೆಹರಿಸಬೇಕು. ಜತೆಗೆ ರಾಜಿ ತೆರಿಗೆ ವ್ಯವಸ್ಥೆಯಡಿ ನೋಂದಣಿಯಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು ಎಂಬುದು ವ್ಯಾಪಾರ- ವ್ಯವಹಾರಸ್ಥರ ಒತ್ತಾಯ.

ಜೂನ್‌ 30ರವರೆಗಿನ ದಾಸ್ತಾನಿಗೆ ಹೂಡುವಳಿ ತೆರಿಗೆ ಮರುಪಾವತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವೇ ರಿಟರ್ನ್ಸ್ ಸಲ್ಲಿಕೆ ಗಡುವು ಅವಧಿ ವಿಸ್ತರಿಸಿ ದಂಡ ವಿಧಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಾಕಷ್ಟು ಡೀಲರ್‌ಗಳು ಮನವಿ ಸಲ್ಲಿಸಲಾರಂಭಿಸಿದ್ದಾರೆ.ಆಂದೋಲನ ಮಾದರಿಯಲ್ಲಿ ಸಂಘಟನೆಗಳ ಮೂಲಕ ಮನವಿ ಸಲ್ಲಿಸಲಾರಂಭಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

28ರವರೆಗೆ ಅವಧಿ ವಿಸ್ತರಣೆ
ಜೂನ್‌ 30ರ ವರೆಗಿನ ಹಳೆಯ ದಾಸ್ತಾನಿಗೆ ಪಾವತಿಸಿದ್ದ ಹೂಡುವಳಿ ತೆರಿಗೆ ವಿವರ ಸಲ್ಲಿಸಲು ಸಾಫ್ಟ್ವೇರ್‌ನಲ್ಲಿ ಅವಕಾಶ ಕಲ್ಪಿಸದ ಕಾರಣ ಹಾಗೂ ವೆಬ್‌ಸೈಟ್‌ನಲ್ಲಿ ಟ್ರಾμಕಿಂಗ್‌ ಹೆಚ್ಚಾದ್ದರಿಂದ ಕೇಂದ್ರ ಸರ್ಕಾರ ಹೊಸದಾಗಿ ಅಧಿಸೂಚನೆಯೊಂದನ್ನು ಹೊರಡಿಸಿದೆ. ಅದರಂತೆ ಹಳೆಯ ದಾಸ್ತಾನಿನ ಹೂಡುವಳಿ ತೆರಿಗೆ ಮೊತ್ತ ಲೆಕ್ಕ ಹಾಕಿ ಅದನ್ನು ಪ್ರಸ್ತುತ ತೆರಿಗೆ ಮೊತ್ತದಲ್ಲಿ ಕಡಿತಗೊಳಿಸಿಕೊಂಡು ಬಾಕಿ ತೆರಿಗೆಯನ್ನು ಆ.25ರೊಳಗೆ ಸಲ್ಲಿಸಬೇಕು. ಆ. 28ರೊಳಗೆ “ಟ್ರಾನ್‌-1’ರಡಿ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಆದರೆ ಹಳೆಯ ದಾಸ್ತಾನಿಗೆ ಯಾವುದೇ ರೀತಿಯ ತೆರಿಗೆ ಬಾಕಿ ಇಲ್ಲದವರು ಆ.25ರೊಳಗೆ ತೆರಿಗೆ ಪಾವತಿಸುವುದನ್ನು ಕಡ್ಡಾಯಗೊಳಿಸಿದೆ.

ಸದ್ಯದಲ್ಲೇ ಸಹಾಯವಾಣಿ ಆರಂಭ
ಜಿಎಸ್‌ಟಿ ಬಗೆಗಿನ ಗೊಂದಲಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಟೋಲ್‌ ಫ್ರೀ ಸಹಾಯವಾಣಿ ಆರಂಭಿಸಲು ಮುಂದಾಗಿದೆ. ಜಿಎಸ್‌ಟಿಯಡಿ ವ್ಯವಹಾರ ನಡೆಸುವಲ್ಲಿನ ತೊಡಕುಗಳನ್ನು ನಿವಾರಿಸಲು ಹಾಗೂ ಆ ವ್ಯವಸ್ಥೆ ಬಗೆಗಿನ ಗೊಂದಲ ನಿವಾರಿಸಿ ಸ್ಪಷ್ಟನೆ ನೀಡಲು ಟೋಲ್‌ ಫ್ರೀ ಸಹಾಯವಾಣಿ ಆರಂಭಿಸಲಿದೆ .

ಜಿಎಸ್‌ಟಿ ವ್ಯವಸ್ಥೆಯಡಿ ವ್ಯವಹಾರ ನಡೆಸುವಲ್ಲಿನ ಕೆಲ ತಾಂತ್ರಿಕ ಅಡಚಣೆಗಳು ಮುಂದುವರಿದಿದ್ದು, ಈ ಬಗ್ಗೆ ಕೇಂದ್ರ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯಲಾಗಿದೆ. ರಾಜಿ ತೆರಿಗೆ ವ್ಯವಸ್ಥೆ, ಹೂಡುವಳಿ ತೆರಿಗೆ ಮರು ಪಾವತಿ, ರಿಟರ್ನ್ಸ್ ಸಲ್ಲಿಕೆಯಲ್ಲಿನ ತೊಡಕುಗಳ ಬಗ್ಗೆ ಸಾಕಷ್ಟು ಡೀಲರ್‌ಗಳು ಮಾಹಿತಿ ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಿಎಸ್‌ಟಿಎನ್‌ಗೆ (ಜಿಎಸ್‌ಟಿ ನೆಟ್‌ವರ್ಕ್‌) ಕೂಡ ಸಲ್ಲಿಸಲಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸುವ ವಿಶ್ವಾಸವಿದೆ. ಜಿಎಸ್‌ಟಿ ಬಗೆಗಿನ ಗೊಂದಲ ನಿವಾರಣೆಗಾಗಿ ಸದ್ಯದಲ್ಲೇ ವಾಣಿಜ್ಯ ತೆರಿಗೆ ಇಲಾಖೆಯು ಟೋಲ್‌ ಫ್ರೀ ಸಹಾಯವಾಣಿ ಆರಂಭಿಸಲಿದೆ.
– ಬಿ.ಟಿ.ಮನೋಹರ್‌, ರಾಜ್ಯ ಸರ್ಕಾರದ ಜಿಎಸ್‌ಟಿ ಸಮಿತಿ ಸಲಹೆಗಾರರು

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next