Advertisement

ಜಿಎಸ್‌ಟಿ ಅತ್ಯಂತ ಸರಳ ಪದ್ಧತಿ: ಆಯುಕ್ತೆ ಸೌಮ್ಯಾ ಬಾಪಟ್‌

01:48 PM Jul 04, 2017 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಜು.1ರಿಂದ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.) ಅತ್ಯಂತ ಸರಳ ಪದ್ಧತಿ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ ಸೌಮ್ಯಾ ಎಂ. ಬಾಪಟ್‌ ವಿಶ್ಲೇಷಿಸಿದ್ದಾರೆ.

Advertisement

ಸೋಮವಾರ ಜಿಲ್ಲಾ ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜಿ.ಎಸ್‌.ಟಿ.ಯಲ್ಲಿ ಯಾವುದೇ ಗೊಂದಲ, ಅನುಮಾನ ಇಲ್ಲ. ವರ್ಷಕ್ಕೆ 37 ರಿಟರ್ನ್ ಸಲ್ಲಿಸುವ, ಇತರೆ ರಾಜ್ಯಗಳಲ್ಲಿನ ತೆರಿಗೆ… ಇತರೆ ವಿಚಾರಗಳ ಬದಲಿಗೆ ಏಕ ಸ್ವರೂಪದ ತೆರಿಗೆ ಪದ್ಧತಿ ಇದಾಗಿದೆ ಎಂದರು.

ಜಿ.ಎಸ್‌.ಟಿ. ಎಂದರೆ ವಸ್ತುಗಳು ಮತ್ತು ಸೇವಾ ತೆರಿಗೆ. ಈವರೆಗೆ ಇದ್ದ ಮಾರಾಟ ವಿವಿಧ ಹಂತದ ತೆರಿಗೆ ಬದಲಿಗೆ ಪೂರೈಕೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಪೂರೈಕೆ ಆಧಾರದಲ್ಲಿ ತೆರಿಗೆ ನಿರ್ಧಾರ ಆಗಲಿದೆ. ವಾರ್ಷಿಕ 20 ಲಕ್ಷ ಮತ್ತು ಅದಕ್ಕಿಂತ ಕಡಿಮೆ ವಹಿವಾಟು ನಡೆಸುವಂತಹವರು ಜಿಎಸ್‌ಟಿ ನೋಂದಣಿ ಮಾಡಿಸಲೇಬೇಕು. ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ ಮೂರು ವಿಧದಲ್ಲಿ ತೆರಿಗೆ ಇವೆ. ಈವರೆಗೆ ಇದ್ದಂತಹ ಅಪ್ರತ್ಯಕ್ಷ ತೆರಿಗೆ ತೆಗೆದು, ಒಂದೇ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಇರುವುದಿಲ್ಲ. ಆದರೆ, ಬ್ರ್ಯಾಂಡೆಡ್‌ ವಸ್ತುಗಳ ಮೇಲೆ ಜಿಎಸ್‌ಟಿ ಇದೆ. ಉದಾಹರಣೆಗೆ ಬ್ರ್ಯಾಂಡೆಡ್‌ ಅಕ್ಕಿ, ಬೇಳೆ, ಸಕ್ಕರೆ, ಹಿಟ್ಟಿಗೆ ಜಿಎಸ್‌ಟಿ ಅನ್ವಯವಾಗುತ್ತದೆ. 75 ಲಕ್ಷ ವಹಿವಾಟು ನಡೆಸುವರು ಪರಿಹಾರ ವ್ಯಾಪ್ತಿಗೆ ಬರುವರು. ವರ್ಷಕ್ಕೆ 20 ಲಕ್ಷ ವಹಿವಾಟು ನಡೆಸುವ ಹೋಟೆಲ್‌ ಉದ್ದಿಮೆದಾರರು ಪರಿಹಾರ ವಿಭಾಗದ ಸೇರ್ಪಡೆಗೆ ಕೋರಿದ್ದಾರೆ. ಹೋಟೆಲ್‌ಗ‌ಳಲ್ಲಿ ತಿಂಡಿ, ತಿನಿಸು ಪೂರೈಕೆ ವಲಯ ವ್ಯಾಪ್ತಿಗೆ 
ಬರುವುದರಿಂದ ಜಿ.ಎಸ್‌.ಟಿ. ವಿಧಿಸಲಾಗುತ್ತದೆ. ಹವಾನಿಯಂತ್ರಿತ ಇಲ್ಲದ ಹೋಟೆಲ್‌ ಕೊಠಡಿಗೆ ಜಿಎಸ್‌ಟಿ ಇಲ್ಲ. ಒಂದರ್ಥದಲ್ಲಿ ಸೌಲಭ್ಯ ಹೆಚ್ಚಾದಂತೆ ಜಿಎಸ್‌ಟಿ ಹೆಚ್ಚಾಗುತ್ತದೆ ಎಂದು ತಿಳಿಸಿದರು. 

ಯಾವುದೇ ವಸ್ತುವಿನ ತೆರಿಗೆ ನಿರ್ಧರಿಸುವ ಹಾಗೂ ರದ್ದುಪಡಿಸುವ ಅಧಿಕಾರ ಜಿಎಸ್‌ಟಿ ಕೌನ್ಸಿಲ್‌ಗೆ ಮಾತ್ರವೇ ಇದೆ. ಪ್ರಧಾನ ಮಂತ್ರಿ, ಹಣಕಾಸು ಇಲಾಖೆ ಸಚಿವರು,  ರಾಜ್ಯದ ಪ್ರತಿನಿಧಿಗಳು ಒಳಗೊಂಡಕೌನ್ಸಿಲ್‌ನ ತೀರ್ಮಾನವೇ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವ್ಯಾಪಾರಸ್ಥರಲ್ಲಿ ದಾಸ್ತಾನಿರುವ ವಸ್ತುಗಳ ಮೇಲೆ ಜಿಎಸ್‌ಟಿ ಇರುವುದಿಲ್ಲ. ಆದರೆ, ಆ ಎಲ್ಲ ವಸ್ತುಗಳು ಒಂದು ವರ್ಷದ ಹಿಂದೆ ಉತ್ಪಾದನೆ ಆಗಿರಬೇಕು. ಜೂನ್‌ ತಿಂಗಳಲ್ಲಿನ
ದಾಸ್ತಾನು, ವಹಿವಾಟು ಇತರೆ ಜುಲೈ ತಿಂಗಳಲ್ಲಿ ರಿಟರ್ನ್ಸ್ನಲ್ಲಿ ಕ್ಯಾರಿ ಫಾವರ್ಡ್‌ ಆಗಿರಬೇಕು. ಆಗ ಜಿಎಸ್‌ಟಿ ಇರುವುದಿಲ್ಲ. ಕೃಷಿಕರು ಜಿಎಸ್‌ಟಿ ವ್ಯಾಪ್ತಿಗೆ ಬರುವುದೇ ಇಲ್ಲ. ಆದರೆ, ಆಹಾರ ಪದಾರ್ಥಗಳನ್ನು ಸಂಸ್ಕರಿಸಿ, ಪೂರೈಕೆ ಮಾಡಿದಲ್ಲಿ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು. 

Advertisement

ಜಿಎಸ್‌ಟಿಯಿಂದ ಆಮದು ವಸ್ತಗಳು ಮತ್ತು ಇಲ್ಲಿಯೇ ಉತ್ಪಾದನೆ ವಸ್ತುಗಳಿಗೆ ಒಂದೇ ತೆರನಾದ ತೆರಿಗೆ ಇರುತ್ತದೆ. ಇದು ಪ್ರಧಾನಿ ಮಂತ್ರಿಯವರ ಮೇಕ್‌ ಇನ್‌ ಇಂಡಿಯಾ… ಯೋಜನೆಗೆ ಪೂರಕವಾಗಲಿ ದೆ. ಒಂದೇ ತೆರಿಗೆ ಪದ್ಧತಿ ಜಾರಿಗೆ ಬಂದಿರುವುದಿಂದ ದೇಶದ ಜಿಡಿಪಿಯೂ ಹೆಚ್ಚಾಗುತ್ತದೆ. ವಸ್ತುಗಳಿಗೆ ಬೇಡಿಕೆ ಪ್ರಮಾಣ ಹೆಚ್ಚಿದಂತೆ ಉತ್ಪಾದನಾ ಪ್ರಮಾಣವೂ ಹೆಚ್ಚಾಗುತ್ತದೆ. ತೆರಿಗೆ ಸೋರಿಕೆಗೆ ಅವಕಾಶವೇ ಇರದ ಕಾರಣಕ್ಕೆ ತೆರಿಗೆ ವಸೂಲಿಯೂ ಗಮನೀಯವಾಗಿ ಏರಿಕೆಯಾಗಲಿದೆ ಎಂದು ತಿಳಿಸಿದರು.

ಜಿಎಸ್‌ಟಿಯಲ್ಲಿ ಸಿಜಿಎಸ್‌ಟಿ(ಕೇಂದೀಯ), ಎಸ್‌ಜಿಎಸ್‌ಟಿ(ರಾಜ್ಯ) ತೆರಿಗೆ ಇವೆ. ರಾಜ್ಯಗಳ ಪಾಲಿನ ತೆರಿಗೆ ರಾಜ್ಯಕ್ಕೆ ಬರುತ್ತದೆ. ಆದರೂ, ಕೇಂದ್ರವೇ ಪ್ರಮುಖ ಪಾತ್ರ ವಹಿಸುವುದರಿಂದ ರಾಜ್ಯಗಳಿಗೆ ತೊಂದರೆ ಆಗುತ್ತದೆ. ರಾಜ್ಯದಲ್ಲಿ
ಆಗುವ ಉತ್ಪಾದನೆಗಳು ಬೇರೆ ರಾಜ್ಯದಲ್ಲಿ ಪೂರೈಕೆ ಆಗುತ್ತದೆ. ಅಲ್ಲಿಗೆ ಆ ರಾಜ್ಯಕ್ಕೆ ತೆರಿಗೆ ಹೋಗುತ್ತದೆ. ರಾಜ್ಯಗಳಿಗೆ 5 ವರ್ಷಗಳ ಕಾಲ ಪರಿಹಾರ ಒದಗಿಸುವ ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್‌ ದೊಡ್ಮನಿ, ಉಪಾಧ್ಯಕ್ಷರಾದ ನಾಗೇಶ್‌ ಶೆಣೈ, ಸದಾನಂದ ಹೆಗಡೆ, ಪ್ರಧಾನ ಕಾರ್ಯದರ್ಶಿ ಬಿ.ಬಿ. ಮಲ್ಲೇಶ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next