ಮಹಾನಗರ: ಸಾಮಾಜಿಕ ಜಾಲತಾಣಗಳಲ್ಲಿ ಜಿಎಸ್‌ಟಿ ಕುರಿತು ಮಾಹಿತಿ ರೂಪದಲ್ಲಿ ಹಲವಾರು ಸಂದೇಶಗಳು ಹರಿದಾಡುತ್ತವೆ. ಆದರೆ ಅವುಗಳ ಮೂಲ, ಆಧಾರದ ಉಲ್ಲೇಖ ಇರುವುದಿಲ್ಲ. ಇದರಿಂದ ಜನರು ಮತ್ತಷ್ಟು ದಾರಿ ತಪ್ಪುವ ಸಂಭವ ಇರುತ್ತದೆ. ಆದ್ದರಿಂದ ಸರಕಾರ ಹೊರಡಿಸುವ ಜಿಎಸ್‌ಟಿ ಕುರಿತ ಅಧಿಸೂಚನೆಗಳನ್ನು ಅರ್ಥ ಮಾಡಿಕೊಳ್ಳಲು ಸಲಹೆ ಮಾರ್ಗದರ್ಶನದ ಅಗತ್ಯವಿದೆ ಎಂದು ಸಿ.ಎ. ನಂದಗೋಪಾಲ್ ಶೆಣೈ ಹೇಳಿದರು.
ಕೆನರಾ ವಾಣಿಜ್ಯ, ಕೈಗಾರಿಕಾ ಮಂಡಳಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಜಿಎಸ್‌ಟಿ – ಇತ್ತೀಚೆಗಿನ ವಿದ್ಯಮಾನಗಳು’ ಎಂಬ ವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಎಸ್‌ಟಿ ಮಂಡಳಿಯು ಪ್ರತ್ಯೇಕವಾಗಿ ನಿಗದಿತ ಸಮಯದಲ್ಲಿ ಸಭೆ ಸೇರಿ ಹಲವಾರು ಬದಲಾವಣೆಗಳನ್ನು ಮಾರ್ಪಾಡು ಮಾಡುತ್ತಿದೆ. ದೇಶದ ತೆರಿಗೆ ಪದ್ಧತಿ ಸುಧಾರಿಸುವ ನಿಟ್ಟಿನಲ್ಲಿ ಈ ರೀತಿಯ ಚರ್ಚೆ ಸಂವಾದ ಮತ್ತು ತೆರಿಗೆ ವ್ಯವಸ್ಥೆಯ ಸುಧಾರಣೆ ಅಗತ್ಯ. ಆದರೆ ಸರಕಾರವು ಈ ಕುರಿತು ಅಧಿಸೂಚನೆ ಹೊರಡಿಸಿದಾಗ ಅದನ್ನು ಮೂಲ ಜಿಎಸ್‌ಟಿ ಕಾಯಿದೆಯೊಡನೆ ಓದಿಕೊಳ್ಳಬೇಕಾಗುತ್ತದೆ. ಕೇವಲ ಅಧಿಸೂ ಚನೆಗಳನ್ನು ಓದಿಕೊಂಡರೆ ಸಾಲದು. ಈ ಕಾಯಿದೆಯು ಸಾಫ್ಟ್ ವೇರ್ ಆಧಾರಿ ತವಾಗಿರುವುದರಿಂದ, ಯಾವುದೇ ತಪ್ಪು ದಾರಿಗಳಲ್ಲಿ ತೆರಿಗೆ ವಂಚನೆ ಮಾಡುವುದು ಸಾಧ್ಯವಿಲ್ಲ. ತೆರಿಗೆ ಪಾವತಿಸಿ, ತೆರಿಗೆ ವ್ಯವಸ್ಥೆಯು ನೀಡುವ ರಿಯಾಯಿತಿಗಳ ಲಾಭ ಪಡೆದುಕೊಳ್ಳುವುದೇ ಜಾಣ ನಡೆ ಎಂದರು.
ಉದ್ಘಾಟಿಸಿ ಮಾತನಾಡಿದ ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ಹೊಸ ತೆರಿಗೆ ಪದ್ಧತಿ ಅಭಿವೃದ್ಧಿಗೆ ಪೂರಕ ವಾಗಿರಬಹುದು. ಆದರೆ ಜನರಿಗೆ ಇನ್ನಷ್ಟು ಮಾಹಿತಿ ಅಗತ್ಯವಿದೆ ಎಂದರು. ಲೆಕ್ಕಪರಿಶೋಧಕರಾದ ಕೇಶವ ಬಳ್ಕುರಾಯ, ಕೊಲಿನ್ ರಾಡ್ರಿಗಸ್, ಲಕ್ಷ್ಮೀ ಜಿ.ಕೆ., ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಧರ್ ಪೈ ಮಾರೂರು, ಉಪಾಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಮಾರ್ಗದರ್ಶನ ಅಗತ್ಯ
ಜಿಎಸ್‌ಟಿ ಮಂಡಳಿಯು ಸಭೆ ಸೇರಿ ಮಾಡುವ ಮಾರ್ಪಾಟುಗಳನ್ನು ಮತ್ತು ಆ ಕುರಿತು ಸರಕಾರ ಹೊರಡಿಸುವ ಅಧಿಸೂಚನೆಗಳನ್ನು ವ್ಯಾಪಾರಿಗಳು ಅರ್ಥ ಮಾಡಿಕೊಳ್ಳಲು ಸಲಹೆ, ಮಾರ್ಗದರ್ಶನದ ಅಗತ್ಯವಿದೆ.
– ನಂದಗೋಪಾಲ್ ಶೆಣೈ