Advertisement
ತಿನ್ನುವ ಅಕ್ಕಿಯ ಮೇಲೂ 5 ಶೇ. ತೆರಿಗೆ! 100 ರೂ. ಅಕ್ಕಿಗೆ 5 ರೂ. ತೆರಿಗೆ ಪಾವತಿಸಬೇಕು. ಹೀಗೊಂದು ಪುಕಾರು ಎದ್ದಿದೆ. ಆದರೆ ಅಕ್ಕಿಗೆ ಜಿಎಸ್‌ಟಿ ವಿಧಿಸಲಾಗಿದೆಯೇ ಇಲ್ಲವೇ ಎನ್ನುವುದೇ ಸ್ಪಷ್ಟವಿಲ್ಲ. ಹಾಗಿದ್ದರೂ ಬ್ರಾಂಡೆಡ್ ವಸ್ತುಗಳ ಮೇಲೆ ಶೇ. 5 ತೆರಿಗೆ ವಿಧಿಸಲಾಗಿದ್ದು ಇದು ಅಕ್ಕಿಗೆ ಅನ್ವಯಾಗುತ್ತದೆ ಎನ್ನುವ ಕಾರಣದಿಂದ ಅಕ್ಕಿ ಮಿಲ್ಲಿನಲ್ಲಿ ಕೆಲಸ ಕುಂಠಿತಗೊಂಡಿದೆ.
ಅಕ್ಕಿ ಮಿಲ್ಲುಗಳು ತಮ್ಮದೇ ಹೆಸರಿನಲ್ಲಿ ಅಕ್ಕಿಯನ್ನು ಮಾರುಕಟ್ಟೆಗೆ ಸರಬರಾಜು ಮಾಡುತ್ತಿವೆ. ಈವರೆಗೆ ಇದರ ಮೇಲೆ ತೆರಿಗೆ ಭಯ ಇರಲಿಲ್ಲ. ಆದರೆ ಈಗ ಬ್ರಾಂಡೆಡ್ ಐಟಂಗಳ ಮೇಲೆ ಶೇ. 5 ಜಿಎಸ್‌ಟಿ ಎಂದಿದ್ದು 40 ರೂ.ಗಳ 1 ಕೆಜಿ ಅಕ್ಕಿಗೆ 2 ರೂ. ತೆರಿಗೆ ಬೀಳಲಿದೆ. ಕಂಪೆನಿಗಳ ಹೆಸರಿಲ್ಲದ ಅಕ್ಕಿಗೆ ಈ ತೆರಿಗೆ ಇರುವುದಿಲ್ಲ. ಇದರಿಂದಾಗಿ ಅಕ್ಕಿ ಮಿಲ್ಲಿನವರು ಕಂಗಾಲಾಗಿದ್ದು ತೆರಿಗೆ ಹಾಕುವುದಾದರೆ ಎಲ್ಲರಿಗೂ ಹಾಕಬೇಕು, ಇಲ್ಲದಿದ್ದರೆ ಯಾರಿಗೂ ಹಾಕಬಾರದು ಎಂಬ ಬೇಡಿಕೆ ಇಡುತ್ತಿದ್ದಾರೆ. ಪರಿಣಾಮ ಈ ಗೊಂದಲ ನಿವಾರಣೆಯಾಗುವವರೆಗೆ ಉತ್ಪಾದಕರ ಹೆಸರಿನ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೇಡಿಕೆಗೆ ತಕ್ಕಷ್ಟೇ ಪೂರೈಸಲಾಗುತ್ತಿದೆ. ಅಕ್ಕಿಗೇನು ತೊಂದರೆ
ದೊಡ್ಡ ಕಂಪೆನಿಗಳ ಉತ್ಪನ್ನಗಳಿಗೆ ಬ್ರಾಂಡ್ ಆಧಾರದಲ್ಲಿ ತೆರಿಗೆ ಹಾಕಿದರೆ ಅವರು ಅದನ್ನು ಗ್ರಾಹಕನ ತಲೆಗೇ ಕಟ್ಟುತ್ತಾರೆ. ಸೋಪ್ ಆದರೆ ಆತನ ಉತ್ಪನ್ನಕ್ಕೆ ಸ್ವಲ್ಪ ದರ ಹೆಚ್ಚಾದರೂ ಮಾರಾಟದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಅಥವಾ 75 ಗ್ರಾಂ. ಸೋಪಿನ ಬದಲು 70 ಗ್ರಾಂ. ನೀಡಿ ಬೆಲೆಯನ್ನು ಸರಿದೂಗಿಸುತ್ತಾನೆ. ಆದರೆ ಅಕ್ಕಿಯಲ್ಲಿ ಅಂತಹ ಯಾವುದೇ ಅವಕಾಶ ಮಾರಾಟಗಾರನಿಗೆ ಇಲ್ಲ. ಬ್ರಾಂಡೆಡ್ ಅಕ್ಕಿಯೇ ಆಗಬೇಕು ಎಂದು ಬಹುತೇಕ ಗ್ರಾಹಕರು ಬಯಸುವುದಿಲ್ಲ. ಬ್ರಾಂಡ್ ಇಲ್ಲದ ಅಕ್ಕಿ ಕೆಜಿಗೆ 2 ರೂ. ಕಡಿಮೆಗೆ ದೊರೆಯುವಾಗ ಆತ ಬ್ರಾಂಡೆಡ್‌ನ ಮೊರೆ ಹೋಗಲಾರ. ಆದ್ದರಿಂದ ಮಿಲ್‌ನವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹಾಗಂತ ಬ್ರಾಂಡ್ ಇಲ್ಲದ ಮಾರಾಟದಲ್ಲಿ ಪೈಪೋಟಿ ನೀಡುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂಬ ಅಸಮಾನತೆಯೇ ಈಗಿನ ಕೂಗಿಗೆ ಕಾರಣ. ತೆರಿಗೆ ವಿಧಿಸುವುದಿದ್ದರೆ ಎಲ್ಲರಿಗೂ, ಇಲ್ಲದಿದ್ದರೆ ಎಲ್ಲರಿಗೂ ರದ್ದು ಮಾಡಲಿ ಎನ್ನುವುದು ಬೇಡಿಕೆ. ಅಕ್ಕಿಗೆ ತೆರಿಗೆ ಇದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಲಿ ಎನ್ನುವುದು ಆಗ್ರಹ.
Related Articles
ಬ್ರಾಂಡೆಡ್ ವಸ್ತುಗಳ ಮೇಲೆ ತೆರಿಗೆ ಎಂದಾದಾಗ ಬಹುತೇಕರು ತಮ್ಮ ಬ್ರಾಂಡ್‌ನ ರಿಜಿಸ್ಟ್ರೇಶನ್ ರದ್ದು ಮಾಡತೊಡಗಿದರು. ತತ್‌ಕ್ಷಣ ಹೊಸ ಕಾನೂನು ಬಂತು, ಮೇ 15ರ ಒಳಗೆ ನೋಂದಣಿ ಮಾಡಿದ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು. ಹೊಸ ಆದೇಶದಂತೆ ತಮ್ಮ ಹೆಸರಿನ ಉತ್ಪನ್ನಗಳನ್ನು ಯಾರು ಮಾರಾಟ ಮಾಡಿದರೂ ತಗಾದೆ ತೆಗೆಯುವಂತಿಲ್ಲ. ಆಕ್ಷನೇಬಲ್ ಬಾಂಡ್ ಎಂದು ಅಫಿದವಿತ್ ಕೊಟ್ಟರೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಬೇಕಿಲ್ಲ ಎಂದು. ಅಕ್ಕಿ ಮಿಲ್ಲಿನ ಮಾಲಕರು ಈಗ ಒಟ್ಟಾಗಿದ್ದು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
Advertisement
ಭತ್ತ ಇಲ್ಲದ.ಕ.ಜಿಲ್ಲೆಯಲ್ಲಿ 9, ಉಡುಪಿಯ ಕುಂದಾಪುರದಲ್ಲಿ 10, ಹೆಬ್ರಿಯಲ್ಲಿ 10 ಎಂದು ಸುಮಾರು 40 ಅಕ್ಕಿ ಮಿಲ್ಲುಗಳಿವೆ. ಪ್ರತಿದಿನ ಅಂದಾಜು 7 ಸಾವಿರ ಕ್ವಿಂ. ಅಕ್ಕಿ ತಯಾರು ಮಾಡುತ್ತವೆ. ಇವುಗಳಿಗೆ ಈ ಬಾರಿ ಮಧ್ಯಪ್ರದೇಶದ ಜಬಲ್‌ಪುರ ಸೇರಿ ಹೊರರಾಜ್ಯದಿಂದ ಹೆಚ್ಚಿನ ಪ್ರಮಾಣದ ಭತ್ತ ಬಂದಿದೆ. ದ.ಕ. ಉಡುಪಿಯಲ್ಲಿ ಮಿಲ್ಲುಗಳಿಗೆ ಬೇಕಾದ ಭತ್ತದ ಕೊರತೆಯಿದೆ. ಇದಕ್ಕೆ ಕಾರಣ ಇಲ್ಲಿ ಭತ್ತಕ್ಕೆ ದರ ಇಲ್ಲದಿರುವುದು. ಇಲ್ಲಿ ತಯಾರಾದ ಅಕ್ಕಿ ದ.ಕ., ಉಡುಪಿ. ಅಲ್ಲದೆ ಹಾಸನ, ಬೆಂಗಳೂರು, ಮೈಸೂರು ಮೊದಲಾದೆಡೆಗೆ ಮಾರಾಟವಾಗುತ್ತದೆ. ಶೇ.50ರಷ್ಟು ಮಾತ್ರ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮಾರಾಟವಾದರೆ ಇನ್ನುಳಿದದ್ದು ಹೊರ ಜಿಲ್ಲೆಗಳ ಪಾಲಿಗೆ. ಗೊಂದಲ ನಿವಾರಿಸಿ
ಕರಾವಳಿಯ ಸಾಮಾನ್ಯರು ಊಟ ಮಾಡುವ ಕುಚ್ಚಲಕ್ಕಿಗೆ ಬ್ರಾಂಡ್ ಹಾಕಿದರೂ ಪ್ರೀಮಿಯಂನಲ್ಲಿ ಮಾರಾಟ ಮಾಡಲಾಗದು. ಕೇವಲ ಗುರುತಿಗಾಗಿ ಬ್ರಾಂಡ್ ಉಪಯೋಗಿಸಲಾಗುತ್ತಿದೆ. ಆದ್ದರಿಂದ ಜನಸಾಮಾನ್ಯರ ಅಕ್ಕಿ ಮೇಲೆ ತೆರಿಗೆ ರಿಯಾಯಿತಿ ಮಾಡಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳ ಸಲ್ಲಿಕೆಯ ಕಾನೂನು ಮಾಹಿತಿಯನ್ನು ನೀಡಬೇಕು
– ಚಂದ್ರಕಾಂತ್ ಕಾಮತ್, ಪಾಲುದಾರರು, ವಿನಾಯಕ ರೈಸ್ ಇಂಡಸ್ಟ್ರೀಸ್, ಬೆಳ್ತಂಗಡಿ ಸ್ಪಷ್ಟಪಡಿಸಲಿ
ಅಕ್ಕಿಗೆ ತೆರಿಗೆ ಇದೆಯೇ ಇಲ್ಲವೇ ಎನ್ನುವುದು ಗೊಂದಲದಲ್ಲಿದೆ. ಇದನ್ನು ಮೊದಲು ಸ್ಪಷ್ಟಪಡಿಸ ಬೇಕಿದೆ. ಈಗ ವಿಧಿಸಿರುವ ಶೇ. 5 ತೆರಿಗೆ ಕೂಡ ಜಾಸ್ತಿ ಆಗಿದೆ. ಒಂದೊಮ್ಮೆ ಎಲ್ಲ ಅಕ್ಕಿಯ ಮೇಲೆ ತೆರಿಗೆ ವಿಧಿಸುವುದಾದರೆ ಅದರ ಪ್ರಮಾಣ ತಗ್ಗಿಸಬೇಕಿದೆ
– ಶಿವಶಂಕರ ನಾಯಕ್, ಪಾಲುದಾರರು, ರೈತಬಂಧು ಆಹಾರೋದ್ಯಮ್ ಪ್ರೈ.ಲಿ. ಕಣಿಯೂರು – ಲಕ್ಷ್ಮೀ ಮಚ್ಚಿನ