ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡು ಒಂದು ವರ್ಷ ಪೂರೈಸುತ್ತಿದ್ದು, ಆರಂಭದಲ್ಲಿನ ತೊಡಕುಗಳು ನಿವಾರಣೆಯಾಗಿ ಸುಸ್ಥಿರವಾಗುತ್ತಿದ್ದಂತೆಯೇ ಇದೀಗ ಜಿಎಸ್‌ಟಿ ಪಾವತಿ ಉಲ್ಲಂಘನೆಯನ್ನು ಕಂಡುಹಿಡಿಯುವುದರ ಮೇಲೆ ಕೇಂದ್ರೀಯ ತೆರಿಗೆ ಮಂಡಳಿ ತನ್ನ ಗಮನ ಕೇಂದ್ರೀಕರಿಸಿದೆ. ಇದರ ಮೊದಲ ಹಂತವಾಗಿ 200 ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ.
ಈ ಕಂಪನಿಗಳು ನಗದು ಮೂಲಕ ಗ್ರಾಹಕರಿಗೆ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಉತ್ಪನ್ನದ ಮೌಲ್ಯ ಮತ್ತು ಉತ್ಪನ್ನದ ಖರೀದಿ ಹಾಗೂ ಮಾರಾಟ ವಿವರಗಳು ಹೋಲಿಕೆಯಾಗುತ್ತಿಲ್ಲ. ಹೀಗಾಗಿ ಈ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ.
ಸಾಮಾನ್ಯವಾಗಿ ತೆರಿಗೆ ತಪ್ಪಿಸುವುದಕ್ಕಾಗಿ ಹೆಚ್ಚಿನ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡಿರುವುದಾಗಿ ಉಲ್ಲೇಖೀಸಲಾಗುತ್ತದೆ. ಕೆಲವು ಕಂಪನಿಗಳು ಉತ್ಪನ್ನದ ಮೌಲ್ಯದ ಶೇ.5 ರಷ್ಟು ಬೆಲೆಯ ಮೇಲೆ ಮಾತ್ರವೇ ತೆರಿಗೆ ಪಾವತಿ ಮಾಡಿವೆ. ಸಾಮಾನ್ಯವಾಗಿ ದಾಖಲೆಯಲ್ಲಿ ಕಡಿಮೆ ಬೆಲೆಗೆ ಮಾರಲಾಗಿದೆ ಎಂದು ಉಲ್ಲೇಖೀಸಿ, ಉಳಿದ ಮೊತ್ತವನ್ನು ನಗದು ರೂಪದಲ್ಲಿ ವ್ಯಾಪಾರಿಗಳು ಪಡೆದಿರುತ್ತಾರೆ.
ಆದರೆ ಎಲ್ಲ ಕಂಪನಿಗಳೂ ಅಕ್ರಮದಲ್ಲಿ ಭಾಗಿಯಾಗಿವೆ ಎಂದು ಹೇಳಲಾಗದು. ಕೆಲವು ವ್ಯಾಪಾರಿಗಳು ಪೂರೈಕೆ ಮಾಡಿದ ಸಾಮಗ್ರಿಗಳನ್ನು ಜಿಎಸ್‌ಟಿ ಅಡಿಯಲ್ಲಿ ದಾಖಲಿಸಿರುವುದಿಲ್ಲ. ಇದರಿಂದಾಗಿಯೂ ಸಮಸ್ಯೆ ಉದ್ಭವವಾಗಿರಬಹುದು ಎಂದು ಹೇಳಲಾಗಿದೆ. ಈ ಕಂಪನಿಗಳು ಪ್ರತಿಕ್ರಿಯೆ ನೀಡಿದ ನಂತರದಲ್ಲಿ ಸಿಬಿಡಿಟಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆಯಿವೆ. ಇನ್ನೊಂದೆಡೆ ನೋಟಿಸ್ ಪಡೆದ ಈ ಕಂಪನಿಗಳು ತೆರಿಗೆ ಇಲಾಖೆ ವಿರುದ್ಧ ಮೊಕದ್ದಮೆ ಹೂಡುವ ಸಾಧ್ಯತೆಯೂ ಇದೆ.
ಜುಲೈ 1 ಜಿಎಸ್‌ಟಿ ದಿನ
ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜುಲೈ 1 ಅನ್ನು ಜಿಎಸ್‌ಟಿ ದಿನ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. ಈ ಸಂಭ್ರಮಾಚರಣೆಗೆ ಬೃಹತ್ ಕಾರ್ಯಕ್ರಮವನ್ನು ನವದೆಹಲಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಣಕಾಸು ಖಾತೆ ಸಹಾಯಕ ಸಚಿವ ಶಿವಪ್ರತಾಪ್ ಶುಕ್ಲಾ ಗೌರವ ಅತಿಥಿಯಾಗಿರಲಿದ್ದಾರೆ. ಅಲ್ಲದೆ ಉದ್ಯಮಿಗಳು, ವ್ಯಾಪಾರಿಗಳು ಮತ್ತು ತೆರಿಗೆ ಅಧಿಕಾರಿಗಳು ಇರಲಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ ಎಂದು ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ.