Advertisement
ರಾಜ್ಯದ ಪೇಟೆಂಟ್ ಆ್ಯಂಡ್ ಟ್ರೇಡ್ ಮಾರ್ಕ್ ಸಂಸ್ಥೆಗಳು, ಆಹಾರ ಪದಾರ್ಥಗಳ ಸಗಟು ವರ್ತಕರ ಮಾಹಿತಿ ಪ್ರಕಾರ, ಕಳೆದ ವಾರ ಚೆನ್ನೈಯಲ್ಲಿರುವ ಪೇಟೆಂಟ್, ಡಿಸೈನ್ ಆ್ಯಂಡ್ ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್‌ನ ಪ್ರಾದೇಶಿಕ ಕಚೇರಿಗೆ ದಕ್ಷಿಣ ಭಾರತದ ರಾಜ್ಯಗಳಿಂದ 15 ಸಾವಿರಕ್ಕೂ ಹೆಚ್ಚು ಬ್ರ್ಯಾಂಡ್ ಡಿ-ರಿಜಿಸ್ಟ್ರೇಷನ್ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕರ್ನಾಟಕದ 4ರಿಂದ 5 ಸಾವಿರ ಅರ್ಜಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರತಿದಿನ ಸರಾಸರಿ 100ರಿಂದ 150 ಅರ್ಜಿಗಳು ಬ್ರ್ಯಾಂಡ್ ಅನ್ನು ವಾಪಸ್ ನೀಡುವ ಸಂಬಂಧ ಸಲ್ಲಿಕೆಯಾಗುತ್ತಿವೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಜಾರಿಯಾದ ಜಿಎಸ್‌ಟಿಯಲ್ಲಿ ಬ್ರ್ಯಾಂಡೆಡ್ ಆಹಾರ ಪದಾರ್ಥಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಲಾಗಿದೆ. ಇದರ ಪರಿಣಾಮವಾಗಿ ವರ್ತಕರು ಅನಿವಾರ್ಯವಾಗಿ ಬ್ರ್ಯಾಂಡೆಡ್ ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಬೇಕಾಗುತ್ತದೆ. ದರ ಏರಿದರೆ ಗ್ರಾಹಕರು ಬ್ರ್ಯಾಂಡ್ ಪದಾರ್ಥಗಳನ್ನು ಖರೀದಿಸದೆ ನಾನ್ ಬ್ರ್ಯಾಂಡ್ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ಇದರಿಂದ ವ್ಯಾಪಾರ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವರ್ತಕರು ಬ್ರ್ಯಾಂಡೆಡ್ ಉತ್ಪನ್ನಗಳ ಮಾರಾಟದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಬೆಂಗಳೂರು ಸಗಟು ಆಹಾರ ಧಾನ್ಯ ಮತ್ತು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಾಹೋಟಿ ಹೇಳಿದ್ದಾರೆ. ರಾಜ್ಯದಲ್ಲಿ ಆಹಾರ ಪದಾರ್ಥಗಳ ನೋಂದಾಯಿತ ಬ್ರ್ಯಾಂಡ್‌ಗಳ ಸಂಖ್ಯೆ ಸುಮಾರು 9 ಸಾವಿರ ಇದೆ. ಅದರಲ್ಲಿ ಅಕ್ಕಿಗೆ 100ಕ್ಕೂ ಹೆಚ್ಚು, ತೊಗರಿ ಬೇಳೆಗೆ 50, ಕಡಲೆ ಬೇಳೆಗೆ 25, ಹಿಟ್ಟು 70, ಹೆಸರು ಬೇಳೆಗೆ 10, ಉದ್ದಿನ ಬೇಳೆಗೆ 50 ಸಹಿತ ರವೆ, ಗೋದಿ ಹಿಟ್ಟು ಮತ್ತಿತರ ಆಹಾರ ಪದಾರ್ಥಗಳ 3-4 ಸಾವಿರ ಸುಪ್ರಸಿದ್ಧ, ದೊಡ್ಡ ಮಟ್ಟದ ಸ್ಥಳೀಯ ನೋಂದಾಯಿತ ಬ್ರಾಂಡ್‌ಗಳಿವೆ. ಇದರಲ್ಲಿ ಬಹುತೇಕರು ಬ್ರಾಂಡ್ ಡಿ-ರಿಜಿಸ್ಟ್ರೇಷನ್‌ಗೆ ಮುಂದಾಗುತ್ತಿದ್ದರೆ, ಮತ್ತೆ ಕೆಲವರು ಹೊಸ ಬ್ರಾಂಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಬ್ರಾಂಡ್‌ಗಾಗಿ ಸಲ್ಲಿಸಿದ ಅರ್ಜಿ ವಿಲೇವಾರಿ ಹಂತದಲ್ಲಿ ಬಾಕಿ ಇದ್ದರೆ, ಅದಕ್ಕೆ ಶೇ. 5ರಷ್ಟು ತೆರಿಗೆ ಅನ್ವಯ ಆಗುವುದಿಲ್ಲ. ಬ್ರಾಂಡ್ ವಸ್ತುಗಳಿಗೆ ಶೇ. 5ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದು ವರ್ತಕರ ಪಾಲಿಗೆ ಹೊರೆಯಾಗಿದ್ದು, ಆಹಾರಧಾನ್ಯ, ಬೇಳೆಕಾಳುಗಳ ಸಗಟು ವಹಿವಾಟಿನಲ್ಲಿ ಶೇ. 30ರಷ್ಟು ಕುಸಿತ ಉಂಟಾಗಿದೆ. ಸಗಟು ವರ್ತಕರ ಖರೀದಿ ಪ್ರಮಾಣ ಶೇ. 50ಕ್ಕೆ ಇಳಿದಿದೆ.
Related Articles
Advertisement
ನಕಲಿ ಬ್ರ್ಯಾಂಡ್ ಹಾವಳಿಜಿಎಸ್ಟಿ ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳಲು ಬಹುತೇಕ ಬ್ರ್ಯಾಂಡ್ ವರ್ತಕರು ತಮ್ಮ ಈಗಿನ ಬ್ರ್ಯಾಂಡ್‌ನ ನೋಂದಣಿ ಮಾತ್ರ ರದ್ದುಪಡಿಸಿಕೊಂಡು ಹೆಸರು ಮತ್ತು ಮುದ್ರೆ ಹಾಗೆಯೇ ಇಟ್ಟುಕೊಂಡು ವ್ಯಾಪಾರ ನಡೆಸಲು ಮುಂದಾಗುತ್ತಿದ್ದಾರೆ. ಏಕೆಂದರೆ, ನೋಂದಾಯಿತ ಬ್ರ್ಯಾಂಡ್‌ಗಳಿಗಷ್ಟೇ ತೆರಿಗೆ ಎಂದು ಕೇಂದ್ರ ಸರಕಾರ ಹೇಳಿದೆ. ಹಾಗಾಗಿ ನೋಂದಣಿ ರದ್ದುಪಡಿಸಿಕೊಂಡರೆ ಬಚಾವ್ ಆಗಬಹುದು ಅನ್ನುವುದು ವರ್ತಕರ ಆಲೋಚನೆ. ಆದರೆ, ಇದರಿಂದ ಬ್ರ್ಯಾಂಡ್‌ಗಳನ್ನು ನಕಲಿ ಮಾಡುವುದು ಸುಲಭ. ಹಾಗೊಂದು ವೇಳೆ ಯಾರಾದರೂ ಮಾಡಿದರೆ ಕಾನೂನು ರೀತಿ ಕ್ರಮ ಜರಗಿಸಲೂ ಅವಕಾಶ ಇರುವುದಿಲ್ಲ ಅನ್ನುವುದು ಪೇಟೆಂಟ್ ಆ್ಯಂಡ್ ಟ್ರೇಡ್ ಮಾರ್ಕ್ ತಜ್ಞರ ಅಭಿಪ್ರಾಯ. – ರಫೀಕ್ ಅಹ್ಮದ್