Advertisement

ಜಿಎಸ್‌ಟಿ ಎಫೆಕ್ಟ್: ಸರಕು ಸಾಗಣೆಯಲ್ಲಿ ಸುಧಾರಣೆ

12:03 PM Aug 12, 2017 | Team Udayavani |

ಹೊಸಕೋಟೆ: ರಾಷ್ಟ್ರಾದ್ಯಂತ ಜಾರಿಗೊಂಡ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಯಿಂದಾಗಿ ಜು.1ರಿಂದ ಸರಕು ಸಾಗಣೆಯಲ್ಲಿ ಕುಂಠಿತಗೊಂಡಿದ್ದು, ಒಂದು ತಿಂಗಳ ನಂತರ ಸಹಜ ಸ್ಥಿತಿಗೆ ಮರಳುತ್ತಿದೆ. ಬೆಂಗಳೂರು ನಗರದಿಂದಲೇ ಪಟ್ಟಣದ ವ್ಯಾಪಾರಿಗಳು ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಖಾಸಗಿ ಸರಕು ಸಾಗಣೆ ಸಂಸ್ಥೆಗಳ ಮೂಲಕ ಪೂರೈಕೆಯಾಗುತ್ತಿದೆ. ಪ್ರತಿದಿನ 3-4 ವಾಹನಗಳಲ್ಲಿ ಬರುತ್ತಿದ್ದುದು ಜು.1 ರಿಂದ ಸಾಮಗ್ರಿಗಳಿಗೆ ನಿಗದಿತ ಬಿಲ್‌ಗ‌ಳಿಲ್ಲದೆ ಸರಕುಗಳನ್ನು ಪಡೆಯುವುದನ್ನು ಸಾಗಣೆ ಸಂಸ್ಥೆಗಳು ನಿಲುಗಡೆ ಮಾಡಿದ್ದ ಕಾರಣ ದಿಂದಾಗಿ ಕೇವಲ 1-2 ವಾಹನಗಳಲ್ಲಿ 60-70 ಬಂಡಲ್‌ಗ‌ಳಷ್ಟೇ ಸಾಗಣೆಯಾಗುತಿತ್ತು. ಇದೀಗ ಆ.1ರಿಂದ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಂಡುಬರುತ್ತಿದೆ. ಪ್ರತಿದಿನ 3 ವಾಹನಗಳಲ್ಲಿ 300-320 ಬಂಡಲ್‌ಗ‌ಳು ಮಾರಾಟಗಾರರು ನೀಡುವ ಅನ್ವಯಿಸುವ ತೆರಿಗೆ ಒಳಗೊಂಡ ನಿಗದಿತ ಬಿಲ್‌ಗ‌ಳೊಂದಿಗೆ ಸಾಗಣೆಯಾಗುತ್ತಿದ್ದು, ವ್ಯಾಪಾರ ವಹಿವಾಟು ಸಹ ಯಥಾಸ್ಥಿತಿಗೆ ಮರಳುತ್ತಿದೆ. ಜು.1ರಿಂದ ಸೆ.30ರವರೆಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಸಹ ಸರಕು ಸಾಗಣೆಯ ಬಗ್ಗೆ ಯಾವುದೇ ತಪಾಸಣೆ ನಡೆಸುತ್ತಿಲ್ಲ. ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರಗಳ ಕಾರ್ಯ ಸಹ ಸ್ಥಗಿತಗೊಂಡಿದ್ದು, ಅ.1ರಿಂದ ಮೊಬೈಲ್‌ ತಂಡಗಳು
ವಾಹನಗಳನ್ನು ನಿಲುಗಡೆ ಮಾಡಿ ತಪಾಸಣೆ ನಡೆಸುವ ಪದ್ಧತಿ ಜಾರಿಗೊಳ್ಳಲಿದೆ. ಯಾವುದೇ ತರಹವಾದ ನ್ಯೂನತೆ ಕಂಡುಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ. ಜಿಎಸ್‌ಟಿ ಜಾರಿಯಾದ ಜು.1ರಿಂದ ಕೆಲವು ದಿನ ಸರಕುಗಳಿಗೆ ವಿಧಿಸಬಹುದಾದ ತೆರಿಗೆ ಪ್ರಮಾಣ, ಜಿಎಸ್‌ಟಿ ನೋಂದಣಿ ಸಂಖ್ಯೆ ಕಡ್ಡಾಯದ ಬಗ್ಗೆ ಉಂಟಾಗಿದ್ದ ಗೊಂದಲದಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು. ಇದೀಗ ನ್ಯೂನತೆಗಳನ್ನು ಸರಿಪಡಿಸಿದ್ದು, ಜಿಎಸ್‌ಟಿ ನೋಂದಣಿಯಿಲ್ಲದೆ ವ್ಯಾಪಾರಿಗಳ ಪಾನ್‌, ಆಧಾರ್‌ ಸಂಖ್ಯೆಯನ್ನು ಆಧರಿಸಿ ಬಿಲ್‌ ಪಡೆಯಬಹುದಾಗಿದೆ. ಉತ್ತಮ ಸೇವೆ ಸಲ್ಲಿಸಲು ಸಹಕಾರಿ: ಜಿಎಸ್‌ಟಿ ಜಾರಿಯಿಂದಾಗಿ ಯಾವುದೇ ಸರಕನ್ನು ಸಾಗಣೆ ಮಾಡಲು ಮಾರಾಟ ಮಾಡುವವರು ಬಿಲ್‌ ನೀಡಲು ಒತ್ತಾಯಿಸುವುದು ಅನಿವಾರ್ಯವಾಗಿದೆ. ವ್ಯವಸ್ಥೆ ಸರಳವಾಗಿದ್ದು, ವಾಣಿಜ್ಯತೆರಿಗೆ ಅಧಿಕಾರಿಗಳಿಂದ ಅನಾವಶ್ಯಕವಾಗಿ ಶೋಷಣೆಗೆ ಒಳಗಾಗುವುದು ನಿವಾರಣೆ ಗೊಂಡು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಸರಕು ಸಾಗಣೆ ಸಂಸ್ಥೆಯ ಮೇಲ್ವಿಚಾರಕ ಕಪೂರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next