ಮುಂಬಯಿ: ಎಲೆಕ್ಟ್ರಿಕ್ ಕಾರುಗಳ ಖರೀದಿಯನ್ನು ಹೆಚ್ಚು ಹೆಚ್ಚು ಉತ್ತೇಜಿಸಲು ಮುಂದಾಗಿರುವ ಕೇಂದ್ರ ಸರಕಾರ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಮೇಲಿನ ಸುಂಕಗಳನ್ನು ಕಡಿಮೆಗೊಳಿಸಿದ್ದಲ್ಲದೆ ಜಿಎಸ್‌ಟಿ ದರವನ್ನೂ ಶೇ.12ರಿಂದ ಶೇ.5ರಷ್ಟಕ್ಕೆ ಇಳಿಸಿದೆ. ಇದರೊಂದಿಗೆ ಸಾಂಪ್ರದಾಯಿಕ ಕಾರುಗಳ ಮೇಲಿನ ನೋಂದಣಿ ಶುಲ್ಕವನ್ನು ಹೆಚ್ಚಿಸುವ ಬಗ್ಗೆಯೂ ಆಲೋಚನೆ ಮಾಡುತ್ತಿದೆ. ಸದ್ಯ ಎಲೆಕ್ಟ್ರಿಕ್ ಕಾರುಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಿಂದಾಗಿ ಕಾರುಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಇವುಗಳಲ್ಲಿ ಗರಿಷ್ಠ ಎಂದರೆ ಹ್ಯುಂಡೈ ಕೋನಾ ಕಾರಿನ ಬೆಲೆ 1.58 ಲಕ್ಷ ರೂ.ವರೆಗೆ ಕಡಿತವಾಗಲಿದೆ.
ಯಾವೆಲ್ಲ ಕಾರುಗಳು?
ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪೆನಿಯ ಇ ವೆರಿಟೋ, ಇ2ಒ, ಟಾಟಾ ಮೋಟರ್ಸ್ ನ ಟೈಗೋರ್ ಇವಿ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿವೆ. ಇವುಗಳ ಮಾದರಿಗೆ ಅನುಗುಣವಾಗಿ ಕಾರುಗಳ ಬೆಲೆ ಸುಮಾರು 13 ಲಕ್ಷ ರೂ.ವರೆಗೆ ಇದ್ದು ಜಿಎಸ್‌ಟಿ ದರ ಇಳಿಕೆಯಿಂದಾಗಿ 80 ಸಾವಿರ ರೂ.ಗಳಿಂದ 90 ಸಾವಿರ ರೂ.ಗಳ ವರೆಗೆ ಬೆಲೆ ಇಳಿಕೆಯಾಗಿದೆ. ಎಫ್ಎಎಮ್‌ಇ (ಫೇಮ್ ಸ್ಕೀಂ- ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಮಾರಾಟ ಉತ್ತೇಜನ ಯೋಜನೆ) ಅನ್ವಯ ಗುರುತಿಸಲ್ಪಟ್ಟ ಕಂಪೆನಿಗಳ ವಾಹನಗಳಿಗೆ ಜಿಎಸ್‌ಟಿ ದರ ಕಡಿತ ಅನ್ವಯಿಸಲಿದೆ. ಜತೆಗೆ ಫೇಮ್ ದರ ಕಡಿತವೂ ಹೆಚ್ಚುವರಿಯಾಗಿ ಲಭ್ಯವಾಗಲಿದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯೂ ಇಳಿಕೆ
ಜಿಎಸ್‌ಟಿ ದರ ಕಾರಣ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯೂ ಇಳಿಕೆಯಾಗಿದೆ. 9 ಸಾವಿರ ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆ ಕಂಡ ಸ್ಕೂಟರ್‌ಗಳಲ್ಲಿ ಏಥರ್ ಎನರ್ಜಿ ಸ್ಕೂಟರ್‌ಗಳು, ಓಕಿನಾವಾ ಕಂಪೆನಿಯ ಸ್ಕೂಟರ್‌ಗಳು, ಆ್ಯಂಪರ್ ಕಂಪೆನಿ, ಏವಾನ್, ಹೀರೋ, ಲೋಹಿಯಾ ಇತ್ಯಾದಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿಗಳ ವಿವಿಧ ಮಾಡೆಲ್‌ಗಳ ದರವೂ ಇಳಿಕೆಯಾಗಲಿದೆ.
ಆ.1ರಿಂದ ಅನ್ವಯ
ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರ ಆ.1ರಿಂದ ಇಳಿಕೆಯಾಗಲಿದೆ. ಈ ದರ ಕಡಿತದಿಂದಾಗಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಉತ್ತೇಜನ ಸಿಗಲಿದೆ ಎಂಬ ಆಶಾವಾದ ಸರಕಾರದ್ದಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕ ರದ್ದು ಇತ್ಯಾದಿ ಕ್ರಮಗಳನ್ನು ಸರಕಾರ ಘೋಷಿಸುವ ಸಾಧ್ಯತೆಯೂ ಇದೆ.