Advertisement

GST: ಕಡಿತಗೊಂಡ ದರ ನಿಗದಿ ಮಾಡದಿದ್ದಲ್ಲಿ ಕ್ರಿಮಿನಲ್‌ ಮೊಕದ್ದಮೆ

09:08 AM Nov 28, 2017 | Team Udayavani |

ಮಂಗಳೂರು: ಕೇಂದ್ರ ಸರಕಾರವು ಜಿಎಸ್‌ಟಿಯಡಿ ಕೆಲವು ವಸ್ತುಗಳ ದರವನ್ನು ಕಡಿತಗೊಳಿಸಿದೆ. ಮಾರಾಟಗಾರರು ನಿಗದಿತ ದರವನ್ನು ನಮೂದಿಸಿಯೇ ವಸ್ತುಗಳನ್ನು ಮಾರಾಟ ಮಾಡಬೇಕು. ತಪ್ಪಿದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ನಗರದ ಸಕೀಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಪ್ರಕ್ರಿಯೆಗಳನ್ನು ಆರಂಭಿಸಲಾಗಿದ್ದು, ಮಂಗಳೂರಿನ 22 ಕಡೆ ಪರಿಶೀಲನೆ ನಡೆಸಲಾಗಿದೆ. ಆದೇಶ ಪಾಲಿಸದ ಅಂಗಡಿಗಳು, ಕಂಪೆನಿಗಳ ಮೇಲೆ ಲೀಗಲ್‌ ಮೆಟ್ರೋಲಜಿ ಪ್ಯಾಕೇಜ್‌ ಕಮೋಡಿಟಿ ನಿಯಮ ಗಳಡಿ 5 ಪ್ರಕರಣ ದಾಖಲಿಸಲಾಗಿದೆ ಎಂದರು.

ಜಿಎಸ್‌ಟಿ ಉತ್ತಮ ತೆರಿಗೆ ವ್ಯವಸ್ಥೆಯಾಗಿದ್ದರೂ ಕೇಂದ್ರ ಸರಕಾರವು ಯಾವುದೇ ಮುಂದಾಲೋಚನೆಯಿಲ್ಲದೆ ತರಾತುರಿಯಲ್ಲಿ ಅನುಷ್ಠಾನಗೊಳಿಸಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಇದೀಗ ಜನರಿಗೆ ತೊಂದರೆಯಾಗಿರುವುದನ್ನು ಗಮನಿಸಿ ಕೆಲವು ವಸ್ತುಗಳ ಬೆಲೆಗಳನ್ನು ಕಡಿತಗೊಳಿಸಿ ನ. 14ರಂದು ಕೇಂದ್ರ ಆದೇಶಿಸಿದೆ. ನ. 22ರಂದು ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಕಡಿತಗೊಂಡ ವಸ್ತುಗಳ ದರಗಳನ್ನು ನಮೂದಿಸುವಂತೆ ಸೂಚಿಸಲಾಗಿದೆ ಎಂದರು.

ಕಡಿತಗೊಂಡ ದರಗಳನ್ನು ಅಂಗಡಿ ಅಥವಾ ಕಂಪೆನಿಯವರು ರಿಯಾಯಿತಿ ದರ ಎಂದು ಪ್ರಕಟಿಸುತ್ತಿರುವುದು ಗಮನಕ್ಕೆ ಬಂದಿದೆ. ಕಡಿತಗೊಂಡ ದರವನ್ನು ಅಂಗಡಿ ಮಾಲಕರು ನಮೂದಿಸಬೇಕು. ರಿಯಾಯಿತಿ ಎಂದು ಬಿಂಬಿಸುವುದು ತಪ್ಪು ಎಂದು ಖಾದರ್‌ ಸೂಚಿಸಿದರು.

ರೇಶನ್‌ ಕಾರ್ಡ್‌ ವಿತರಣೆ ಶೀಘ್ರ
15,50,000 ಮಂದಿಗೆ ಡಿ. 15ರೊಳಗೆ ರೇಶನ್‌ ಕಾರ್ಡ್‌ಗಳನ್ನು ಮನೆಗಳಿಗೆ ತಲುಪಿಸುವುದಾಗಿ ಇಲಾಖೆ ತಿಳಿಸಿತ್ತು. ಈಗಾಗಲೇ 8.5 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ತಲುಪಿಸಲಾಗಿದೆ. ಉಳಿದ ರೇಶನ್‌ ಕಾರ್ಡ್‌ಗಳ ಮುದ್ರಣ ಹಾಗೂ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಖಾದರ್‌ ತಿಳಿಸಿದರು.

Advertisement

ತಾ.ಪಂ. ಅಧ್ಯಕ್ಷ ಮುಹಮ್ಮದ್‌ ಮೋನು, ಮುಖಂಡ ರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಸದಾಶಿವ ಉಳ್ಳಾಲ, ಈಶ್ವರ್‌, ಎನ್‌.ಎಸ್‌. ಕರೀಂ, ಪಾವೂರು ಮೋನಕ್ಕ, ಮುಹಮ್ಮದ್‌ ಮುಸ್ತಫಾ, ಮುಸ್ತಫಾ ಸುಳ್ಯ, ಸಂಶುದ್ದೀನ್‌ ಸುಳ್ಯ, ಮೆಲ್ವಿನ್‌ ಡಿ’ಸೋಜಾ ಉಪಸ್ಥಿತರಿದ್ದರು.

ಸಂವಿಧಾನಬದ್ಧ  ಕೆಲಸ
ಸಂವಿಧಾನ ದಿನದ ಜಾಹೀರಾತಿನ ಭಾವಚಿತ್ರಕ್ಕೆ ಸಂಬಂಧಿಸಿ ಸಂಸದೆ ಶೋಭಾ ಕರಂದ್ಲಾಜೆ ನೀಡಿ ರುವ ಹೇಳಿಕೆ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ವಾಗಿದೆ ಎಂದು ಸಚಿವ ಯು.ಟಿ. ಖಾದರ್‌ ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಆಶಯಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾತನಾಡಲು ಬೇರೇನು ಸಿಗದ ಕಾರಣ ಶೋಭಾ ಕರಂದ್ಲಾಜೆ ಅವರು ಜನರ ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. 

ಕೆ.ಜೆ. ಜಾರ್ಜ್‌ ಹಾಗೂ ವಿನಯ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿ ಅಧಿವೇಶನಕ್ಕೆ ಅಡ್ಡಿಪಡಿಸಿದ ಬಿಜೆಪಿಯವರು ಅಧಿವೇಶನ ನಡೆಸಲು ಬಿಡಲೇಬಾರದು ಎಂದು ನಿಶ್ಚಯಿಸಿಕೊಂಡಂತಿದೆ. ಈ ರೀತಿ ಜನರನ್ನು ಗೊಂದಲಕ್ಕೀಡು ಮಾಡುವ ಬದಲು ಜನಪರ ಕಾಮಗಾರಿ, ಸಲಹೆ ನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next