ನವದೆಹಲಿ : ತೈಲ ದರ ಏರಿಕೆಯಿಂದ ಜನತೆ ಕಂಗಾಲಾಗಿರುವಂತೆಯೇ, ಪೆಟ್ರೋಲ್ ಮತ್ತು ಡೀಸೆಲ್ ಅನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ಕುರಿತು ಪರಿಶೀಲನೆ ನಡೆಸಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಒಂದು ವೇಳೆ, ಇದು ಸಾಧ್ಯವಾದರೆ ಆರ್ಥಿಕ ತಜ್ಞರ ಪ್ರಕಾರ, ಪೆಟ್ರೋಲ್ ದರ 75 ರೂ.ಗಳಿಗೆ ಇಳಿಕೆಯಾಗಲಿದೆ.
ರಾಷ್ಟ್ರಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಮಾನ ತೆರಿಗೆ ವಿಧಿಸುವ ಮೂಲಕ, ಗ್ರಾಹಕರಿಗೆ ಹೊರೆ ತಪ್ಪಿಸುವ ಕುರಿತು ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಸಚಿವರ ಸಮಿತಿಯು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸಮಿತಿಯು ಶುಕ್ರವಾರ ನಡೆ ಯುವ ಸಭೆಯಲ್ಲಿ ಈ ಪ್ರಸ್ತಾಪದ ಕುರಿತು ಚರ್ಚಿಸುವ ಸಾಧ್ಯತೆಯಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಕುರಿತು ಚಿಂತನೆ ನಡೆಸುವಂತೆ ಇತ್ತೀಚೆಗೆ ಕೇರಳ ಹೈಕೋರ್ಟ್‌ಸಲಹೆ ನೀಡಿರುವುದು ಕೂಡ ಮಂಡಳಿಯ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ, ಈ ಕುರಿತು ವಿತ್ತ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2 ಲಕ್ಷ ಕೋಟಿ ರೂ. ನಷ್ಟ: ಜಿಎಸ್ಟಿ ವ್ಯವಸ್ಥೆ ಯಲ್ಲಿ ಯಾವುದೇ ಬದಲಾವಣೆ ಆಗಬೇಕಿದ್ದರೂ, ಸಮಿತಿಯಲ್ಲಿ ನಾಲ್ಕನೇ ಮೂರರಷ್ಟು ಬೆಂಬಲ ಸಿಗ ಬೇಕು. ಸಮಿತಿಯಲ್ಲಿ ಎಲ್ಲ ರಾಜ್ಯಗಳು/ ಕೇಂದ್ರಾ ಡಳಿತ ಪ್ರದೇಶಗಳ ಪ್ರತಿನಿಧಿಗಳಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಕೇಂದ್ರ ಮತ್ತು ರಾಜ್ಯ ಗಳ ಬಹು ದೊಡ್ಡ ಆದಾಯ ಮೂಲಕ್ಕೆ ಕೊಕ್ಕೆ ಬೀಳು ತ್ತದೆ. ಸಂಗ್ರಹಿಸಿದ ತೆರಿಗೆಯೂ ಕೇಂದ್ರಕ್ಕೇ ಹೋಗು ತ್ತದೆ. ಹೀಗಾಗಿಯೇ ರಾಜ್ಯ ಸರ್ಕಾರಗಳು ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ. ಜತೆಗೆ ಜಿಎಸ್ಟಿ ವ್ಯಾಪ್ತಿಗೆ ಬಂದರೆ, ರಾಜ್ಯಗಳಿಗೆ 2 ಲಕ್ಷ ಕೋಟಿ ರೂ. ಆದಾಯ ನಷ್ಟವಾಗುತ್ತದೆ. ಈಗ ಪೆಟ್ರೋಲಿಯಂ ಉತ್ಪನ್ನಗಳಿಗೆ ಶೇ.60ರಷ್ಟು ತೆರಿಗೆ ವಿಧಿಸಲಾಗುತ್ತದೆ. ಜಿಎಸ್ಟಿ ವ್ಯಾಪ್ತಿಗೆ ಒಳಪಟ್ಟರೆ, ಈ ತೆರಿಗೆ ಪ್ರಮಾಣ ಶೇ.28ಕ್ಕಿಳಿಯಲಿದೆ.