ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಇದರ 2021-22ರ ಸಾಲಿಗೆ ಸರಕಾರಕ್ಕೆ ಸಲ್ಲಿಸಿರುವ ವಾಣಿಜ್ಯ ಕರ ನಿರ್ವಹಣೆಯಲ್ಲಿ ತೋರಿಸಿರುವ ಗುಣಮಟ್ಟಕ್ಕಾಗಿ ಕೇಂದ್ರ ಸರಕಾರದ ಹಣಕಾಸು ಇಲಾಖೆಯ ಜಿಎಸ್‌ಟಿ ಅಧ್ಯಕ್ಷರಿಂದ ಪ್ರಶಂಸಾ ಪತ್ರ ಲಭ್ಯವಾಗಿದೆ.
ಈ ಪ್ರಮಾಣ ಪತ್ರದಲ್ಲಿ ಯೋಜನೆಯು 2021-22ರ ಸಾಲಿನಲ್ಲಿ ಪ್ರಾಮಾಣಿಕವಾಗಿ ಜಿಎಸ್‌ಟಿ ಪಾವತಿ ಮಾಡಿದ್ದಲ್ಲದೆ, ಸಮಯಕ್ಕೆ ಸರಿಯಾಗಿ ರಿಟರ್ನ್ಗಳನ್ನು ಸಲ್ಲಿಸಿರುವುದರಿಂದ ದೇಶದ 1.2 ಕೋಟಿ ಜಿಎಸ್‌ಟಿ ನೋಂದಣಿದಾರರ ಪೈಕಿ 50,000 ಅತ್ಯುತ್ತಮ ವಾಣಿಜ್ಯ ಸಂಸ್ಥೆಗಳಲ್ಲೊಂದು ಎಂದು ಜಿಎಸ್‌ಟಿ ವಿಭಾಗದ ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಜಿಎಸ್‌ಟಿ ಪಾವತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 4,606 ಸಂಸ್ಥೆಗಳ ಪೈಕಿ ಯೋಜನೆಯನ್ನೂ ಗುರುತಿಸಲಾಗಿದೆ.
ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸ್ಥೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಯೋಜನೆಯ ಶಿಸ್ತುಬದ್ಧ ವ್ಯವಹಾರ ಮತ್ತು ಪಾರದರ್ಶಕತೆಗೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ಮತ್ತು ಹಣಕಾಸು ನಿರ್ದೇಶಕ ರಾಜೇಶ್ ಮತ್ತು ಅವರ ತಂಡವನ್ನು ಅಭಿನಂದಿಸಿದ್ದಾರೆ.