ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ಸದೃಢತೆಗೆ ಭಾರತೀಯ ಜೀಮ ವಿಮೆ ಕೊಡುಗೆ ಬಹುಪಾಲು ಇದ್ದು, ಎಲ್‌ಐಸಿ ವಿಮೆ ಪಾಲಿಸಿದಾರರಿಗೆ ವಿಧಿಸುತ್ತಿರುವ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಎಲ್‌ಐಸಿ ಏಜೆಂಟರು ದೇಶದ್ಯಾಂತ ಉಗ್ರ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಅಖೀಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿಂಗಾಪುರ ಶ್ರೀನಿವಾಸ್ ಎಚ್ಚರಿಸಿದರು.
ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಮಂಗಳವಾರ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಜಿಲ್ಲಾ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿನಿಧಿಗಳ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸದ್ಯದಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಪ್ರತಿನಿಧಿಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದರು.
ಪಾಲಿಸಿದಾರರಿಗೆ ಹೊರೆ: ಸರ್ಕಾರಗಳಿಗೆ ಆರ್ಥಿಕವಾಗಿ ಭದ್ರ ಬುನಾದಿ ಹಾಕಿಕೊಂಡಿರುವ ಕೀರ್ತಿ ಯಾವುದಾದರೂ ಸಂಸ್ಥೆಗೆ ಇದ್ದರೆ ಅದು ಕೇವಲ ಎಲ್‌ಐಸಿಗೆ ಮಾತ್ರ. ದೇಶ ಆರ್ಥಿಕವಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದಾಗ ಸರ್ಕಾರಗಳಿಗೆ ನೆನಪಾಗುವುದೇ ಎಲ್‌ಐಸಿ ಸಂಸ್ಥೆಯಾಗಿದೆ ಎಂದರು. ಹಗಲು, ರಾತ್ರಿ ದುಡಿದು ಏಜೆಂಟರು ಎಲ್‌ಐಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ ಎಲ್‌ಐಸಿ ಪಾಲಿಸಿದಾರರಿಗೆ ಕೇಂದ್ರ ವಿಧಿಸುತ್ತಿರುವ ಜಿಎಸ್‌ಟಿ ತೆರಿಗೆ ಪಾಲಿಸಿದಾರರಿಗೆ ತೀವ್ರ ಆರ್ಥಿಕ ಹೊರೆ ಆಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖೀಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಗೌರವಾಧ್ಯಕ್ಷ ಎಸ್.ಬಿ.ಶ್ರೀನಿವಾಸಚಾರಿ, ಈಗಾಗಲೇ ಎಲ್‌ಐಸಿ ಏಜೆಂಟರ ಕಮೀಷನ್ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಆಡಳಿತ ಮಂಡಳಿ ಅದನ್ನು ಜಾರಿಗೆ ತರುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಏಜೆಂಟ್‌ರ ಕಮೀಷನ್ ಹೆಚ್ಚಳಕ್ಕಾಗಿ ಒಕ್ಕೂಟ ಸಂಘಟಿತ ಹೋರಾಟ ನಡೆಸಲಿದೆಯೆಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಂ.ಸೋಮಶೇಖರ್ ವಹಿಸಿದ್ದರು. ಆಲ್ ಇಂಡಿಯಾ ವೇಲ್‌ಫೇರ್ ಕಮಿಟಿ ಅಧ್ಯಕ್ಷ ಸಿ.ಜಿ.ಲೋಕೇಂಧ್ರ, ವಲಯ ಅಧ್ಯಕ್ಷ ಡಿ.ರವೀಂದ್ರರೆಡ್ಡಿ, ವಲಯ ಕಾರ್ಯದರ್ಶಿ ಡಿ.ರಾಮಚಂದ್ರ, ವಿಭಾಗೀಯ ಅಧ್ಯಕ್ಷ ವಿ.ರವೀಂದ್ರನಾಥ್, ವಿಭಾಗೀಯ ಕಾರ್ಯದರ್ಶಿ ವಿರೂಪಾಕ್ಷಪ್ಪ, ವಿಭಾಗೀಯ ಖಜಾಂಚಿ ಪಿ.ಎಸ್.ಪ್ರಕಾಶ್, ವಲಯ ಸಂಘಟನಾ ಕಾರ್ಯದರ್ಶಿ ಟಿ.ರಾಮಲಿಂಗಯ್ಯ, ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಎನ್.ಮೋಹನ್ ಬಾಬು, ಖಜಾಂಚಿ ರಮೇಶ್ ಗುಪ್ತಾ, ಗೌರವಾಧ್ಯಕ್ಷ ಸಿ.ಎಸ್.ನಾರಾಯಣ, ಕಾರ್ಯಾಧ್ಯಕ್ಷ ಕೆ.ಕೇಶವರೆಡ್ಡಿ ಸೇರಿದಂತೆ ಸಮಿತಿ ಸದಸ್ಯರು, ಕಾರ್ಯಾಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಹಿರಿಯ ಪ್ರತಿನಿಧಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದಲ್ಲಿ 30 ವರ್ಷಕ್ಕೂ ಮೇಲ್ಟಟ್ಟು ಎಲ್‌ಐಸಿ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.