ಮಡಿಕೇರಿ: ದೇಶದ ಆರ್ಥಿಕ ಸಬಲತೆಗೆ ಜಿಎಸ್‌ಟಿ ವ್ಯವಸ್ಥೆ ಪೂರಕ ವಾಗಿದ್ದು, ಪ್ರತಿಯೊಬ್ಬರು ಜಿಎಸ್‌ಟಿ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ನಗರದಲ್ಲಿ ನಡೆಯಿತು.
ನಗರದ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುನಿಲ್ ಸುಬ್ರಮಣಿ, ಕೇಂದ್ರ ಸರ್ಕಾರ ಸಾಧಕ ಬಾಧಕಗಳನ್ನು ಅರಿತು ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದರು. ಜಿಎಸ್‌ಟಿಯಿಂದ ದೇಶದ ಆರ್ಥಿಕ ಕ್ಷೇತ್ರ ಬಲಿಷ್ಠವಾಗಲಿದ್ದು, ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲಿದೆ. ಸಹಕಾರ ಸಂಘಗಳು ಈ ನೂತನ ತೆರಿಗೆ ಪದ್ಧತಿಯ ಬಗ್ಗೆ ಸಾಕಷ್ಟು ತಿಳಿದುಕೊಂಡು ಇತರರಿಗೆ ಇದರ ಅನುಕೂಲದ ಕುರಿತು ತಿಳಿಸಬೇಕೆಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರಾದ ಎ.ಕೆ. ಮನು ಮುತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾದ ಬಿ.ಡಿ. ಮಂಜುನಾಥ್, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನ ನಿದೇರ್ಶಕರಾದ ಕೆ.ಪಿ. ಗಣಪತಿ, ಸಹಕಾರ ಯೂನಿಯನ್‌ನ ಉಪಾಧ್ಯಕ್ಷರಾದ ಎಸ್.ಪಿ. ನಿಂಗಪ್ಪ, ಆರ್ಥಿಕ ತಜ್ಞಾರಾದ ವಿಶ್ವನಾಥ್ ಭಟ್, ಚಾಟರ್ಡ್ ಅಕೌಂಟೆಂಟ್‌ಗಳಾದ ಎಸ್.ವಿ ಶಂಭುಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.