Advertisement

ಜಿಲ್ಲಾ ಲೆಕ್ಕಪರಿಶೋಧಕರಿಂದ ಜಿಎಸ್‌ಟಿ ಜಾಗೃತಿ ಅಭಿಯಾನ

02:50 PM Aug 24, 2017 | Team Udayavani |

ಚಾಮರಾಜನಗರ: ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದಿಂದ ಜಿಎಸ್‌ಟಿ ಬಗ್ಗೆ ವರ್ತಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ಬುಧವಾರ ಜಾಗೃತಿ ಜಾಥಾ ನಡೆಯಿತು. ನಗರದ ದೊಡ್ಡ ಅಂಗಡಿ ಬೀದಿ ಮತ್ತು ಪ್ರಮುಖ ಬೀದಿಗಳಲ್ಲಿ ಇರುವ ಅಂಗಡಿಗಳಿಗೆ ಮೆರವಣಿಗೆ ಮೂಲಕ ತೆರಳಿದ ಲೆಕ್ಕ ಪರಿಶೋಧಕರು ವರ್ತಕರಿಗೆ ಜಿಎಸ್‌ಟಿ ಬಗ್ಗೆ ಅರಿವು ಮೂಡಿಸಿದರು. ಜಿಲ್ಲಾ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎಂ. ವೆಂಕಟೇಶ್‌ ಮಾತನಾಡಿ, ದೇಶದಲ್ಲಿ ಜಾರಿಗೆ ತರಲಾಗಿರುವ ನೂತನ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯು ಅತ್ಯುತ್ತಮವಾಗಿದೆ. ವರ್ತಕರ ಸಹಕಾರವಿಲ್ಲದೇ ಸರ್ಕಾರಕ್ಕೆ ತೆರಿಗೆ ರಿಟರ್‌ಡ್ ಫೈಲ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ವರದಿ ಸಲ್ಲಿಸಿ: ವರ್ತಕರು ಸಮರ್ಪಕವಾಗಿ ತಮ್ಮ ಲೆಕ್ಕವನ್ನು ನಿರ್ವಹಿಸಿದರೆ ಮಾತ್ರ ಲೆಕ್ಕ ಪರಿಶೋಧಕರು ಕ್ರಮಬದ್ಧವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದಾಗಿದೆ. ತಿಂಗಳಿಗೆ ಮೂರು ಬಾರಿ ವರದಿ ಕೊಡಬೇಕಾಗಿರುತ್ತದೆ ಎಂದು ವಿವರಿಸಿದರು. ತಿಂಗಳ 25ರೊಳಗೆ ಸಲ್ಲಿಸಿ: ವರ್ತಕರು ಜುಲೈ ತಿಂಗಳ ವಹಿವಾಟಿನ ವರದಿಯನ್ನು ಈ ತಿಂಗಳ 25 ರೊಳಗೆ 3ಬಿ ಫಾರಂನಲ್ಲಿ ಸಲ್ಲಿಸಬೇಕಾಗಿದೆ. ಇಲ್ಲವಾದಲ್ಲಿ ಶೇ. 18ರಷ್ಟು ಬಡ್ಡಿ ಬೀಳಲಿದೆ. ಆದ್ದರಿಂದ ಕೂಡಲೇ 3 ಬಿ ಫಾರಂ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಎಲ್ಲರ ಸಹಕಾರ ಅಗತ್ಯ: ಈ ಪದ್ಧತಿಯಿಂದ ಸರ್ಕಾರಕ್ಕೆ ಅಧಿಕ ತೆರಿಗೆ ಬರುತ್ತದೆ. ಇದರಿಂದ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ದೇಶದ ಪ್ರಗತಿಗಾಗಿ ಒಗ್ಗೂಡಿ ಪ್ರಗತಿಯ ಪಥದಲ್ಲಿ ದೇಶವನ್ನು ಮುನ್ನಡೆಸಿಕೊಂಡು ಹೋಗಲು ತಾವು ಬದ್ಧರಾಗಿರಬೇಕಾಗಿರುತ್ತದೆ. ಭಾರತ ದೇಶದ ಬೆಳವಣಿಗೆಯನ್ನು ತಾವು ನಿರೀಕ್ಷಿಸ ಬೇಕಾದರೆ ತಮ್ಮೆಲರ ಸಹಕಾರ ಅತ್ಯಗತ್ಯವಾಗಿದೆ ಮತ್ತು ಅತಿ ಮುಖ್ಯವಾಗಿರುತ್ತದೆ. ಜಿಎಸ್‌ಟಿಯನ್ನು ಪಾಲಿಸೋಣ. ಜಿಎಸ್‌ಟಿಯ ಜೊತೆಗೆ ಸಾಗೋಣ ಎಂದು ತಿಳಿಸಿದರು. ಅನುಮಾನಗಳಿದ್ದರೆ ಕಚೇರಿ ಸಂಪರ್ಕಿಸಿ: ಸರಕು ಮತ್ತು ಸೇವಾ ತೆರಿಗೆ ಅಧಿಕಾರಿ ಎನ್‌. ಉದಯ್‌ ಕುಮಾರ್‌ ಮಾತನಾಡಿ, ಜಿಎಸ್‌ಟಿಯ ಎನ್‌ರೋಲ್‌ಮೆಂಟ್‌ ಮತ್ತು ಮೈಗ್ರೇಶನ್‌ ವರದಿ ಸಲ್ಲಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. ಜಿಎಸ್‌ಟಿ ಬಗ್ಗೆ ವರ್ತಕರಿಗೆ ಯಾವುದೇ ಅನುಮಾನ ಗಳಿದ್ದರೆ ವಾಣಿಜ್ಯ ತೆರಿಗೆ
ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಕೇಂದ್ರ ತೆರಿಗೆ ಅಧಿಕಾರಿ (ಸಿ.ಜಿ.ಎಸ್‌.ಟಿ) ಎಂ.ಜಿ.ಕೃಷ್ಣನ್‌, ಸರಕು ಮತ್ತು ಸೇವಾ ತೆರಿಗೆ ಅಧಿಕಾರಿ ರೇಶ್‌.ಬಿ.ಸಂಗೊಂದಿ ಲೆಕ್ಕಪರಿಶೋಧಕರಾದ ಕೆ.ನವೀನ್‌, ರಂಗನಾಥ್‌, ಎನ್‌.ಸಿ. ಪ್ರಕಾಶ್‌, ಶಶಿಕಾಂತ್‌, ಶ್ರೀಧರ, ಮಂಜು, ಕಾಮರಾಜ್‌, ರಾಜೇಶ್‌, ಮಹೇಂದ್ರಪ್ರಸಾದ್‌, ಬಾಲು, ನಟರಾಜು, ಮಣಿಕಂಠಸ್ವಾಮಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next